ಬೆಂಗಳೂರು: ಕಾರಿನಲ್ಲಿ ಅನುಮಾನಾಸ್ಪದವಾಗಿ ಟೆಕ್ಕಿಯ ಮೃತದೇಹ ಪತ್ತೆ
ಬೆಂಗಳೂರು, ಡಿ.21: ಸಾಫ್ಟ್ ವೇರ್ ಎಂಜಿನಿಯರ್‌ರೊಬ್ಬರು ಕಾರಿನಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪರುವ ಘಟನೆ ನಗರದ ಕುರಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ.
ಮೃತನನ್ನು ಮಹಾಲಕ್ಷ್ಮೀ ಲೇಔಟ್‌ನ ವಿಜಯ್‌ಕುಮಾರ್ (51) ಎಂದು ಗುರುತಿಸಲಾಗಿದೆ. ಕೆಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಕಾರಿಗೆ ಹೊದಿಕೆ ಮುಚ್ಚಿದ್ದ ಕಾರಣ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ವಿಜಯ್ ಕುಮಾರ್ ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿತ್ತು, ಜತೆಗೆ ನೈಟ್ರೋಜನ್ ಆಕ್ಸಿಜನ್ ಪೈಪ್ ಅನ್ನು ಮೂಗಿಗೆ ಬಿಟ್ಟಿರುವ ಸ್ಥಿತಿಯಲ್ಲಿದೆ. ಅನಾರೋಗ್ಯದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಶಂಕಿಸಲಾಗಿದೆ.
ಕಾರನ್ನು ವಾಷ್ ಮಾಡಿಸಲೆಂದು ಮನೆಯಿಂದ ಹೊರಗೆ ಬಂದಿದ್ದ ವಿಜಯ್‌ಕುಮಾರ್, ಪಾನಿಪುರಿ ಅಂಗಡಿಗಿಂತ ಸ್ವಲ್ಪ ದೂರದಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತಾದರೂ ಅಷ್ಟೊತ್ತಿಗಾಗಲೇ ಟೆಕ್ಕಿ ಮೃತಪಟ್ಟಿದ್ದರೆನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ವಿಭಾಗದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.