ವಿದೇಶದಲ್ಲಿ ಕೋವಿಡ್ ಹೆಚ್ಚಳ; ಬೆಂಗಳೂರಿನಲ್ಲಿ ಮತ್ತೆ ಮಾಸ್ಕ್ ಕಡ್ಡಾಯಕ್ಕೆ BBMP ಚಿಂತನೆ
ಬೆಂಗಳೂರು, ಡಿ.21: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ ಭಾರತದಲ್ಲೂ ಕ್ರಮ ವಹಿಸಲಾಗಿದ್ದು, ಮಹಾನಗರಗಳಲ್ಲಿ ಕೋವಿಡ್ ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 1272 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರವೊಂದರಲ್ಲೇ 1228 ಪ್ರಕರಣಗಳಿದ್ದು, ಪ್ರತಿದಿನ 15ರಿಂದ 20 ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ನಗರದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಬಗ್ಗೆ ಕೋವಿಡ್ ಸಲಹಾ ಸಮಿತಿಯೊಂದಿಗೆ ಚರ್ಚಿಸಿದೆ.
ಇನ್ನು ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಇದರೊಂದಿಗೆ ಮುಂಬರುವ ಹೊಸ ವರ್ಷಾಚರಣೆಯಲ್ಲಿ ಜನ ಸಂದಣಿ ಹೆಚ್ಚಾಗುವ ಸಾಧ್ಯತೆಯಿಂದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ಮಾಸ್ಕ್ ಕಡ್ಡಾಯದ ವಿಚಾರದಲ್ಲಿ ಹಂತ ಹಂತದ ಹೆಜ್ಜೆಗಳನ್ನು ಇಡಲು ಬಿಬಿಎಂಪಿ ಯೋಚಿಸುತ್ತಿದೆ. ಮೊದಲ ಹಂತದಲ್ಲಿ ಯಾವುದೇ ದಂಡವಿಲ್ಲದೆ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ನಿರ್ಧರಿಸಲಾಗಿದ್ದು, ಎರಡನೇ ಹಂತದಲ್ಲಿ ಮಾರ್ಕೆಟ್, ಮಾಲ್, ಥಿಯೇಟರ್, ಪಾರ್ಕ್ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯಗೊಳ್ಳಲಿದೆ. ಅದರ ಜತೆಗೆ ಮೆಟ್ರೋ, ಬಸ್, ವಿಮಾನ ಯಾನಕ್ಕೂ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಈ ನಿಟ್ಟಿನಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದ್ದು, ಆರಂಭಿಕ ಹಂತದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡಲು ತೀರ್ಮಾನ ಮಾಡಲಾಗಿದೆ. ಪ್ರಯಾಣಿಕರ ಪೈಕಿ ರ್ಯಾಂಡಮ್ ಆಗಿ ಶೇ.2ರಷ್ಟು ಜನರ ಟೆಸ್ಟ್ ಮಾಡಲಾಗುತ್ತದೆ. ಅಲ್ಲದೆ ಜನಸಂದಣಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.