ಗಡಿ ಕುರಿತು ಚರ್ಚೆಗೆ ನಿರಾಕರಣೆ : ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

Update: 2022-12-21 16:46 GMT

 ಹೊಸದಿಲ್ಲಿ, ಡಿ. 21:ಭಾರತ-ಚೀನಾ ಗಡಿ ವಿವಾದವನ್ನು ಚರ್ಚಿಸಲು ‘ಪಟ್ಟು ಬಿಡದೆ’ ನಿರಾಕರಿಸುತ್ತಿರುವ ಕೇಂದ್ರ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi), ಗಂಭೀರ ವಿಷಯಗಳ ಬಗ್ಗೆ ವೌನವಹಿಸುವುದು ಅದರ ಸಾಮಾನ್ಯ ಲಕ್ಷಣವಾಗಿದೆ ಎಂದಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪಕ್ಷದ ಸಂಸದೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚೀನಾದ ಆಕ್ರಮಣದಂತಹ ಗಂಭೀರ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ನಿರಾಕರಿಸುವುದು ನಮ್ಮ ಪ್ರಜಾಪ್ರಭುತ್ವಕ್ಕೆ ತೋರಿಸುವ ಅಗೌರವ. ಇದು ಸರಕಾರದ ದುರುದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದರು. ಮುಕ್ತ ಚರ್ಚೆಯು ರಾಷ್ಟ್ರದ ನಿಲುವನ್ನು ಬಲಪಡಿಸುತ್ತದೆ.

ತನ್ನ ನೀತಿಗಳು ಹಾಗೂ ಭದ್ರತೆ, ಗಡಿ ಪರಿಸ್ಥಿತಿ ಕುರಿತು ಸಾರ್ವಜನಿಕರಿಗೆ ತಿಳಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಸಂಸತ್ತಿನಲ್ಲಿ ಗಡಿ ವಿಷಯದ ಕುರಿತು ಚರ್ಚಿಸಲು ನಿರಾಕರಿಸುತ್ತಿದೆ. ಇದರ ಪರಿಣಾಮ ಸಂಸತ್ತು, ರಾಜಕೀಯ ಪಕ್ಷಗಳು ಮತ್ತು ಜನರು ನೈಜ ಪರಿಸ್ಥಿತಿಯ ಬಗ್ಗೆ ಅಜ್ಞಾನದಲ್ಲಿದ್ದಾರೆ ಎಂದು ಅವರು ಹೇಳಿದರು. ಪ್ರತಿಪಕ್ಷಗಳು ಸೇರಿದಂತೆ ಯಾವುದೇ ಪ್ರಶ್ನಿಸುವ ಧ್ವನಿಯನ್ನು ಸರಕಾರ ತಡೆಯುತ್ತಿದೆ.

ಅಲ್ಲದೆ, ಮಾಧ್ಯಮಗಳು ಕೌಶಲದಿಂದ ಕಾರ್ಯ ನಿರ್ವಹಿಸುತ್ತಿವೆ. ಇದು ಕೇಂದ್ರ ಸರಕಾರದಲ್ಲಿ ಮಾತ್ರವಲ್ಲದೆ ಆ ಪಕ್ಷದ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಸೋನಿಯ ಗಾಂಧಿ ಹೇಳಿದರು.

  

Similar News