RSS, ವಿಶ್ವ ಹಿಂದೂ ಪರಿಷತ್ತಿನ ನಾಯಕರು ಬ್ರಿಟಿಷರ ಗುಲಾಮರು: ರಾಮಲಿಂಗಾರೆಡ್ಡಿ ಕಿಡಿ

''ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತಿರುಚಲಾಗಿದೆ''

Update: 2022-12-22 14:48 GMT

ಬೆಂಗಳೂರು, ಡಿ.22: ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ತಿರುಚಿ ವಾಗ್ದಾಳಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಪೂರ್ವಜರಾದ ಆರೆಸ್ಸೆಸ್ಸ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಬ್ರಿಟಿಷರ ಗುಲಾಮರಾಗಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. 

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿಯ ಸಂಸ್ಕೃತಿ, ಸಂಸ್ಕಾರ ಅವನ ಮಾತಿನಿಂದ ತಿಳಿಯುತ್ತದೆ. ಅದೇ ರೀತಿ ಬಿಜೆಪಿಯವರ ಸಂಸ್ಕೃತಿಯನ್ನು ಆ ಪಕ್ಷದ ನಾಯಕರ ಮಾತುಗಳೇ ಬಿಂಬಿಸುತ್ತಿವೆ ಎಂದರು.

ಕಾಂಗ್ರೆಸ್ ಮುಖಂಡರನ್ನು ನಾಯಿಗಳಿಗೆ ಹೋಲಿಸಿರುವ ಬಿಜೆಪಿ ಮುಖಂಡರನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ನಾವಂತೂ ಅವರನ್ನು ನಾಯಿಗೆ ಹೋಲಿಸುವುದಿಲ್ಲ. ಕಾರಣ ನಾಯಿ ಅತ್ಯಂತ ನಿಯತ್ತಿನ ಪ್ರಾಣಿಯಾಗಿದೆ. ಹೀಗಾಗಿ ಅವರನ್ನು ಬೇರೆ ಪ್ರಾಣಿಗೆ ಹೋಲಿಸಬೇಕು. ಇವರಿಗೆ ಯಾವ ಪ್ರಾಣಿ ಸೂಕ್ತ ಎಂದು ನಂತರದ ದಿನಗಳಲ್ಲಿ ಹೇಳುತ್ತೇನೆ ಎಂದು ತಿಳಿಸಿದರು.

ಸಾರ್ವಕರ್ ಅವರೊಬ್ಬರು ಜೈಲಿಗೆ ಹೋಗಿದ್ದರು. ಇದು ಎಷ್ಟು ನಿಜವೋ, ಅದೇ ರೀತಿ ಸಾರ್ವಕರ್ ಕ್ಷಮಾಪಣಾ ಪತ್ರ ನೀಡಿ, ‘ಇನ್ನು ಮುಂದೆ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ’ ಎಂದು ಹೇಳಿ ಬಿಡುಗಡೆಯಾಗಿದ್ದು ಅಷ್ಟೇ ನಿಜ. ಬ್ರಿಟಿಷರಿಗೆ ಮೇಲಿಂದ ಮೇಲೆ ಕ್ಷಮಾಪಣೆ ಪತ್ರ ಬರೆದು, ಅವರ ಗುಲಾಮರಾಗಿದ್ದ ವ್ಯಕ್ತಿ ಬಿಜೆಪಿಯವರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದುಗಳನ್ನು ಬ್ರಿಟಿಷರ ಸೈನ್ಯ ಸೇರುವಂತೆ ಒತ್ತಡ ಹಾಕಿದವರು ಇವರ ಆರಾಧ್ಯ ದೈವವಾಗಿದ್ದಾರೆ ಎಂದು ಹೇಳಿದರು.

ಪರಿಶಿಷ್ಟರು, ಹಿಂದುಳಿದವರು, ಮುಸ್ಲಿಮರ ಕೈಗೆ ಅಧಿಕಾರ ಕೊಡುವುದಿದ್ದರೆ ಅಂತಹ ಸ್ವಾತಂತ್ರ್ಯವೇ ನಮಗೆ ಬೇಡ, ಬೇಕಿದ್ದರೆ ಜೀವನ ಪರ್ಯಂತ ನಿಮ್ಮ ಗುಲಾಮರಾಗಿರಲು ಸಿದ್ಧ ಎಂದು ಬ್ರಿಟಿಷರ ಕೈಕಾಲು ಹಿಡಿದವರು ಬಿಜೆಪಿಯವರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಇಂಥವರು ನಮಗೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಇವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದರು.

ಬಿಜೆಪಿಯವರು ರೈತರ ಆದಾಯ ದ್ವಿಗುಣ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ, ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳಿ ನೀಚ ರಾಜಕೀಯ ಮಾಡುತ್ತಾರೆ. ಇಂತಹವರಿಗೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ತಿಳಿಸಿದರು. 

ಪಕ್ಷದ ಟಿಕೆಟ್ ಪಟ್ಟಿ ಕುರಿತ ಪ್ರತಿಕ್ರಿಯಿಸಿದ ಅವರು, ‘ಚುನಾವಣಾ ಸಮಿತಿ ರಚನೆ ಮಾಡಲಾಗಿದೆ. ಜನವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬಿಜೆಪಿ ಸೋಲುವುದು ನಿಶ್ಚಿತವಾಗಿದ್ದು, ಹೀಗಾಗಿ ಅಲ್ಲಿ ಆಕಾಂಕ್ಷಿಗಳು ಕಡಿಮೆ ಇದ್ದಾರೆ ಎಂದರು.

Similar News