ಇಂಜಿನಿಯರಿಂಗ್ ಪ್ರವೇಶ ಶುಲ್ಕ ಹೆಚ್ಚಳದ ವಿರುದ್ಧ ಎಐಡಿಎಸ್‍ಓ ಪ್ರತಿಭಟನೆ
ಬೆಂಗಳೂರು, ಡಿ.22: ರಾಜ್ಯದಲ್ಲಿ ಇಂಜಿನಿಯರಿಂಗ್ ಪ್ರವೇಶ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ, ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸೇರಿದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಎಐಡಿಎಸ್‍ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಅಭಯಾ ದಿವಾಕರ್ ಮಾತನಾಡಿ, ಎಲ್ಲರಿಗೂ ಶಿಕ್ಷಣವನ್ನು ಉಚಿತವಾಗಿ ಒದಗಿಸಬೇಕಿದ್ದ ಸರಕಾರವು ವ್ಯಾಪಾರಕ್ಕೆ ಮುಂದಾಗಿದೆ. ಸರಕಾರಿ ಇಂಜಿನಿಯರಿಂಗ್ ಶುಲ್ಕವನ್ನು ಈ ವರ್ಷ ಏಕಾಏಕಿ 6000 ರೂ. ಹೆಚ್ಚಳ ಮಾಡಲಾಗಿದೆ. ಬಡ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವ ಸರಕಾರದ ಈ ನಿರ್ಧಾರವನ್ನು ಸಂಘಟನೆಯು ಉಗ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರ ತೆರಿಗೆಯಿಂದ ನಡೆಯುವ ಸರಕಾರವು ಶಿಕ್ಷಣಕ್ಕೆ ಯಾವುದೇ ಶುಲ್ಕವನ್ನು ವಿಧಿಸದೆ, ಉಚಿತವಾಗಿ ಶಿಕ್ಷಣವನ್ನು ಒದಗಿಸಬೇಕು. ಒಂದು ವೇಳೆ ಶುಲ್ಕ ವಿಧಿಸುವುದಾದರೆ ಬಡ ರೈತರು, ಕಾರ್ಮಿಕರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಮಟ್ಟದಲ್ಲಿ ಕಡಿಮೆ ಶುಲ್ಕವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಈಗಾಗಲೇ ಪರಿತಪಿಸುತ್ತಿರುವ ಬಡ ವಿದ್ಯಾರ್ಥಿಗಳ ಮೇಲೆ ಸರಕಾರವು ನಡೆಸುತ್ತಿರುವ ಶುಲ್ಕ ಹೆಚ್ಚಳವು ಒಂದು ಅಮಾನವೀಯವಾದ ದಾಳಿಯಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.