ಬೆಂಗಳೂರು | ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬೈಕ್ ದೋಚಿದ ಪ್ರಕರಣ: 6 ಮಂದಿ ಆರೋಪಿಗಳ ಬಂಧನ
Update: 2022-12-22 22:39 IST
ಬೆಂಗಳೂರು, ಡಿ.22: ಖರೀದಿ ನೆಪದಲ್ಲಿ ಬಂದು ವ್ಯಕ್ತಿಯೊಬ್ಬರ ಎಡಗೈ ಮುರಿದು ಮಾರಣಾಂತಿಕ ಹಲ್ಲೆ ಮಾಡಿ 16 ಲಕ್ಷ ಮೌಲ್ಯದ ಬೈಕ್ ದೋಚಿ ಪರಾರಿಯಾಗಿದ್ದ ಆರು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವಿಶ್ವಾಸ್, ಎ.ಎಲ್(23), ಜಗನ್ನಾಥ್,.ಎನ್ (21), ಗಜೇಂದ್ರ. ಎಸ್.ಎಸ್(34), ಲಿಖಿತ್ ಕುಮಾರ್(29), ಶಶಾಂಕ್, ಎಸ್(23), ಪವನ್, ಕೆ(21) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 16 ಲಕ್ಷ ಮೌಲ್ಯದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರುಗಳನ್ನು ವಿಜಯನಗ ರ ಪೊಲೀಸರು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಳೆದ ನ.10ರಂದು ಬಂಧಿತ ವಿಶ್ವಾಸ್ ಜೊತೆ ಇನ್ನಿತರ ಆರೋಪಿಗಳು ಬೈಕ್ ಖರೀದಿ ನೆಪದಲ್ಲಿ ಬಂದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಎಡಗೈ ಮುರಿದು ಬೈಕ್ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.