ನ್ಯಾಯಾಂಗದ ಜೊತೆ ಸರಕಾರದ ಸಂಘರ್ಷ ಅಪಾಯಕಾರಿ

Update: 2022-12-23 03:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನೊಂದಿಗೆ ಸಂಘರ್ಷಕ್ಕಿಳಿದಿರುವುದು ಮತ್ತೆ, ಮತ್ತೆ ಸಾಬೀತಾಗುತ್ತಿದೆ. ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು ಸದಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ರಿಜಿಜು ಮಾತ್ರವಲ್ಲ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕೂಡ ರಾಜ್ಯಸಭೆಯ ಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿ ಸುಪ್ರೀಂ ಕೋರ್ಟಿನ ಕೊಲಿಜಿಯಂ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಇದು ಇವರಿಬ್ಬರ ವೈಯಕ್ತಿಕ ಟೀಕೆ ಎಂದು ಹೇಳಿದರೆ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಇವರು ಸುಪ್ರೀಂ ಕೋರ್ಟ್ ವಿರುದ್ಧ ಮಾಡಿರುವ ಟೀಕೆ ನ್ಯಾಯಾಂಗದ ಸಾಂವಿಧಾನಿಕ ಸ್ಥಾನಮಾನದ ಮೇಲೆ ಮೋದಿ ನೇತೃತ್ವದ ಬಿಜೆಪಿ ಸರಕಾರ ನಡೆಸಿದ ದಾಳಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಈ ಬಾರಿ ಸದನದ ವೇದಿಕೆಯನ್ನು ಬಳಸಿಕೊಂಡು ದಾಳಿ ಮುಂದುವರಿಸಿದ ಸಚಿವ ಕಿರಣ್ ರಿಜಿಜು ವಿವಿಧ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣಗಳು ಬಾಕಿ ಉಳಿದಿರುವ ಬಗ್ಗೆ ಪ್ರಸ್ತಾಪಿಸಿ ನ್ಯಾಯಾಧೀಶರ ನೇಮಕಕ್ಕೆ ಹೊಸ ವ್ಯವಸ್ಥೆಯನ್ನು ರೂಪಿಸುವವರೆಗೆ ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸಲು ಆಗುವುದಿಲ್ಲ ಎಂದು ಹೇಳುವ ಮೂಲಕ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದರೂ ನ್ಯಾಯಾಧೀಶರು ಜಾಮೀನು ಅರ್ಜಿಗಳನ್ನು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದ್ದಾರೆಂದು ರಿಜಿಜು ಟೀಕಿಸಿರುವುದು ನ್ಯಾಯಾಲಯಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ, ನ್ಯಾಯಾಧೀಶರ ಕಾರ್ಯವ್ಯಾಪ್ತಿಯಲ್ಲಿ ಅನಗತ್ಯ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ.

ಕಾನೂನು ಸಚಿವ ಕಿರಣ್ ರಿಜಿಜು ನ್ಯಾಯಾಂಗದ ಮೇಲೆ ದಾಳಿ ಮಾಡುತ್ತಿರುವುದು ಇದು ಮೊದಲ ಸಲವಲ್ಲ. ಈ ಹಿಂದೆಯೂ ದಾಳಿ ಮಾಡಿದ್ದರು. ಆಗ ಅವರ ಟೀಕೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಆನಂತರವೂ ಸಚಿವರು ನ್ಯಾಯಾಂಗದ ಮೇಲೆ ದಾಳಿಯನ್ನು ಮುಂದುವರಿಸಿರುವುದು ಅತಿರೇಕದ ವರ್ತನೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಒಬ್ಬ ಮಂತ್ರಿಯಾಗಿ ರಿಜಿಜು ಆಡುತ್ತಿರುವ ಮಾತುಗಳು ಕೇಂದ್ರದ ಮೋದಿ ಸರಕಾರದ ಮಾತುಗಳು ಎಂದು ಹೇಳಿದರೆ ತಪ್ಪಿಲ್ಲ.

ಸುಪ್ರೀಂ ಕೋರ್ಟ್ ಬಾಕಿ ಉಳಿದ ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಜಾಮೀನು ಅರ್ಜಿಗಳನ್ನು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಎತ್ತಿಕೊಳ್ಳುತ್ತಿದೆ ಎಂದು ಮಾಡಿರುವ ಟೀಕೆಯ ಹಿಂದಿರುವ ಅಸಮಾಧಾನ ಗುಟ್ಟಿನ ಸಂಗತಿಯಲ್ಲ. ಹೆಸರಾಂತ ಚಿಂತಕ, ಲೇಖಕ, ಆನಂದ ತೇಲ್ತುಂಬ್ಡೆ ಮತ್ತು ಗೌತಮ ನವ್ಲಾಖಾ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಿರುವುದಕ್ಕೆ ಸರಕಾರದ ಅಸಮಾಧಾನವನ್ನು ಅವರು ಈ ರೀತಿ ವ್ಯಕ್ತಪಡಿಸಿದ್ದಾರೆ ಎಂದು ಯಾರಿಗಾದರೂ ಅನಿಸುತ್ತದೆ.

ಈ ಸಲ ಸುಪ್ರೀಂಕೋರ್ಟನ್ನು ಟೀಕಿಸಲು ಕೆಲವು ಹೊಸ ವಿಷಯಗಳ ಬಗ್ಗೆ ಪ್ರಸ್ತಾವಿಸಿದ್ದಾರೆ. ಆದರೆ ಅವರು ಪ್ರಸ್ತಾವ ಮಾಡಿದ ಯಾವ ಅಂಶವೂ ವಾಸ್ತವಾಂಶಗಳಿಂದ ಕೂಡಿಲ್ಲ. ಹಿಂದಿನ ಮಾತುಗಳಿಗೇ ಬಣ್ಣ ಬಳಿದು ಉತ್ಪ್ರೇಕ್ಷೆ ಮಾಡಿ ಪುನರುಚ್ಚರಿಸಿದ್ದಾರೆ. ರಿಜಿಜು ಮಾತಿನ ಬಗ್ಗೆ ಪರೋಕ್ಷವಾಗಿ ಉತ್ತರ ನೀಡಿರುವ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ‘‘ನ್ಯಾಯಾಲಯಕ್ಕೆ ಯಾವ ಪ್ರಕರಣವೂ ಸಣ್ಣದಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲಿ ನ್ಯಾಯದಾನ ಮಾಡದಿದ್ದರೆ ನಾವು ಈ ಸ್ಥಾನದಲ್ಲಿ ಇದ್ದು ಏನು ಪ್ರಯೋಜನ?’’ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳು ಹೆಚ್ಚಾಗುವುದಕ್ಕೆ ನ್ಯಾಯಾಲಯದ ಹುದ್ದೆಗಳು ಭರ್ತಿಯಾಗದಿರುವುದು ಒಂದೇ ಕಾರಣವಲ್ಲ. ಇನ್ನೂ ಅನೇಕ ಕಾರಣಗಳೂ ಇವೆ. ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಯನ್ನು ಕೊಲಿಜಿಯಂ ಮಾಡುವುದಿಲ್ಲ. ಅಲ್ಲಿಯೂ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಅನೇಕ ಪ್ರಕರಣಗಳಲ್ಲಿ ಸರಕಾರ ವಾದಿಯೋ, ಇಲ್ಲ ಪ್ರತಿವಾದಿಯೋ ಆಗಿರುತ್ತದೆ. ಸರಕಾರಗಳು ಕೂಡ ನೂರಾರು ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ಬಾಕಿ ಉಳಿದ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.ಇದನ್ನು ಮರೆ ಮಾಚಿ ಸಚಿವರು ನ್ಯಾಯಾಲಯದ ಮೇಲೆ ದಾಳಿ ಮಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ.

ಕೇಂದ್ರ ಸರಕಾರಕ್ಕೆ ತಾವು ಹೇಳಿದಂತೆ ತೀರ್ಪು ಬರೆಯುವ ನ್ಯಾಯಾಧೀಶರು ಬೇಕಾಗಿದ್ದಾರೆ. ಕೊಲಿಜಿಯಂ ಇದ್ದರೆ ಅದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನೇಮಕಾತಿ ವ್ಯವಸ್ಥೆಯನ್ನು ಬದಲಿಸಲು ಸರಕಾರ ಹೊರಟಿದೆ. ಇದರಿಂದ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಬಂಧ ಹದಗೆಡುತ್ತದೆ. ಹಾಗಾಗಿ ಸಚಿವರು ಇಂಥ ಅಸಂಬದ್ಧ ಟೀಕೆ ಮಾಡುವುದನ್ನು ನಿಲ್ಲಿಸಬೇಕು.

ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಇದರಲ್ಲಿ ಕೊಂಚ ವ್ಯತ್ಯಾಸ ವಾದರೂ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತದೆ. ಒಮ್ಮೆ ಅಂಥ ಪರಿಸ್ಥಿತಿ ನಿರ್ಮಾಣವಾದರೆ ಅದು ದೀರ್ಘಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದನ್ನು ಮರೆಯಬಾರದು.

ನ್ಯಾಯಾಧೀಶರು ಮೇಲಿಂದ ಮೇಲೆ ರಜೆಯ ಮೇಲೆ ಹೋಗುತ್ತಿರುವುದು ಪ್ರಕರಣಗಳು ಬಾಕಿ ಉಳಿಯಲು ಕಾರಣ ಎಂದು ಕಾನೂನು ಸಚಿವ ರಿಜಿಜು ಹೇಳಿಕೆಯಲ್ಲಿ ಹುರುಳಿಲ್ಲ. ತಮ್ಮ ದಕ್ಷ ಕಾರ್ಯನಿರ್ವಹಣೆಯಿಂದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನ್ಯಾಯಾಧೀಶರ ಬಗ್ಗೆ ಇಂಥ ಲಘುವಾದ ಟೀಕೆ ಮಾಡುವುದು ಸರಿಯಲ್ಲ.

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಈಗಿರುವ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಿ ಕೇಂದ್ರ ಸರಕಾರ ತನ್ನ ನಿಯಂತ್ರಣದಲ್ಲಿರುವ ಹೊಸ ವ್ಯವಸ್ಥೆಯನ್ನು ತರುವುದರಿಂದ ನ್ಯಾಯಾಂಗದ ಪಾರದರ್ಶಕತೆ ಬಗ್ಗೆ ಜನಸಾಮಾನ್ಯರಿಗೆ ಅಪನಂಬಿಕೆ ಉಂಟಾಗುತ್ತದೆ ಅದಕ್ಕೆ ಅವಕಾಶ ಕೊಡಬಾರದು.
ಒಕ್ಕೂಟ ಸರಕಾರ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವಂಥ ಪ್ರಮಾದವನ್ನು ಮಾಡಬಾರದು. ಇದರಿಂದ ಜನತಂತ್ರದ ಆರೋಗ್ಯ ಹದಗೆಡುತ್ತದೆ. ಹಾಗಾಗಿ ವೈಮನಸ್ಸನ್ನು ತಿಳಿಗೊಳಿಸಿ ನ್ಯಾಯಾಂಗದ ಘನತೆ, ಗೌರವಗಳನ್ನು ಕಾಪಾಡಬೇಕು.

Similar News