×
Ad

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸಹಿತ 19 ಮಂದಿ ವಿರುದ್ಧ ಕೋರ್ಟ್ ನಿಂದ ಜಾಮೀನು ರಹಿತ ವಾರಂಟ್

ಸಚಿವ ಮುನಿರತ್ನರಿಂದ ಕ್ರಿಮಿನಲ್‌ ಮಾನಹಾನಿ ದಾವೆ

Update: 2022-12-23 22:24 IST

ಬೆಂಗಳೂರು, ಡಿ.23: ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ಅವರು ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ 19 ಮಂದಿಯ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. 

ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ ನಗರದ 8ನೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ಈ ಆದೇಶ ನೀಡಿದೆ. 

ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ವಿರುದ್ಧ ಪ್ರತಿವಾದಿಗಳಾದ ಡಿ ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಉಪಾಧ್ಯಕ್ಷ ವಿ.ಕೃಷ್ಣ ರೆಡ್ಡಿ, ಕೆ.ಎಸ್.ಶಾಂತೇಗೌಡ ಸೇರಿ ಒಟ್ಟು 19 ಮಂದಿ ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟ, ಪ್ರಸಾರವಾಗಿದ್ದು, ಇದು ಫಿರ್ಯಾದಿಯ ವರ್ಚಸ್ಸಿಗೆ ಮೇಲ್ನೋಟಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ಆದೇಶ ಮಾಡಿತ್ತು. 

ಪ್ರತಿವಾದಿಗಳು ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. ವಿಚಾರಣೆಯನ್ನು ಜ. 19ಕ್ಕೆ ಮುಂದೂಡಲಾಗಿದೆ.

Similar News