ಕೋವಿಶೀಲ್ಡ್ ಪೂರೈಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ ಬಿಬಿಎಂಪಿ

Update: 2022-12-23 18:03 GMT

ಬೆಂಗಳೂರು, ಡಿ.23: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರಿಗೆ ಬೂಸ್ಟರ್ ಡೋಸ್ ನೀಡಲು ಕೋವಿಶೀಲ್ಡ್ ಲಸಿಕೆ ಕೊರೆತೆಯಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಕೋವಿಶಿಲ್ಡ್ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಕೋವಾಕ್ಸಿನ್ ಈಗಾಗಲೇ ಸಂಗ್ರಹವಿದೆ.  ಆದರೆ, ಕೋವಿಶಿಲ್ಡ್ ಸಂಗ್ರಹವಿಲ್ಲ. ವ್ಯಾಕ್ಸಿನೇಷನ್ ಡ್ರೈವ್ ಸಮಯದಲ್ಲಿ, ಶೇ.90ರಷ್ಟು ಜನರು ಕೋವಿಶೀಲ್ಡ್ ಅನ್ನು ಪಡೆದಿದ್ದರೆ, ಶೇ.10ರಷ್ಟು ಜನರು ಮಾತ್ರ ಕೋವಾಕ್ಸಿನ್ ಲಸಿಕೆಯನ್ನು ಪಡೆದಿದ್ದಾರೆ. ಸದ್ಯ ಈಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನರಿಗೆ ತಿಳಿಸಲಾಗುತ್ತಿದೆ ಎಂದರು. 

ರಾಜ್ಯ ಸರಕಾರವು ಬಿಡುಗಡೆ ಮಾಡಿರುವ ಕೊರೋನ ಮಾರ್ಗಸೂಚಿಗಳು ಬಿಬಿಎಂಪಿ ವ್ಯಾಪ್ತಿಗೂ ಅನ್ವಯವಾಗಲಿದೆ. ಸಂಘ-ಸಂಸ್ಥೆಗಳಿಂದ ಬರುವ ಸಲಹೆಗಳನ್ನು ಪಡೆದು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಾರೆ ಎಂದರು.

ನಗರದಲ್ಲಿ ಕೊರೋನ ಪಾಸಿಟೀವ್ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೂ, ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಪ್ಲಾಂಟ್‍ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಆದರೆ ಎಲ್ಲ ವಸ್ತುಗಳನ್ನು ಖರೀದಿ ಮಾಡಿಕೊಂಡು ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

Similar News