ಕಮಿಷನ್ ಆರೋಪ ಸಾಬೀತು ಪಡಿಸದಿದ್ದಲ್ಲಿ ಮೊಯ್ದಿನ್ ಬಾವಾ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಶಾಸಕ ಭರತ್ ಶೆಟ್ಟಿ

"ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಲ್ಲಲು ಮೊಯ್ದಿನ್ ಬಾವಾ ಕಾರಣ"

Update: 2022-12-24 06:53 GMT

ಸುರತ್ಕಲ್: ಸುರತ್ಕಲ್ ಮಾರುಕಟ್ಟೆ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಅವರು ನನ್ನ ವಿರುದ್ಧ 38 ಕೋಟಿ ರೂ. ಕಮಿಷನ್ ಪಡೆದುಕೊಂಡಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ದಾಖಲೆಗಳು ಇದ್ದಲ್ಲಿ ಬಹಿರಂಗಪಡಿಸಲಿ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೈ. ಭರತ್ ಶೆಟ್ಟಿ ಹೇಳಿದ್ದಾರೆ.

ಸುರತ್ಕಲ್ ಬಳಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಕಮಿಷನ್ ಆರೋಪ ಸಾಬೀತು ಪಡಿಸದಿದ್ದಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಮೊಯ್ದಿನ್ ಬಾವಾ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಭರತ್ ಶೆಟ್ಟಿ ಹೇಳಿದರು.

ಮಂಗಳೂರು ಉತ್ತರ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈಗಾಗಲೇ ಕ್ಷೇತ್ರದ ವಿವಿಧೆಡೆಗಳಲ್ಲಿ ರಸ್ತೆ, ತಡೆಗೋಡೆ, ಪಾರ್ಕ್ ಇನ್ನಿತರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಲ್ಲಲು ಮಾಜಿ ಶಾಸಕ ಮೊಯ್ದಿನ್ ಬಾವಾ ಕಾರಣ. ಸ್ಥಳವನ್ನು ಗುತ್ತಿಗೆ ವಹಿಸಿಕೊಂಡವರಿಗೆ ಸಂಪೂರ್ಣ ಬಿಟ್ಟುಕೊಡದ ಕಾರಣ ಅವರಿಗೆ ಅರ್ಧದಲ್ಲೇ ಪೇಮೆಂಟ್ ಮಾಡಲಾಗಿದೆ. ಈಗ ಹೆಚ್ಚುವರಿ ಅನುದಾನ ಸರಕಾರ ನೀಡಿದ್ದು ಕಾಮಗಾರಿ ಮತ್ತೆ ಪ್ರಾರಂಭಗೊಳ್ಳಲಿದೆ ಎಂದು ಅವರು ಹೇಳಿದರು.

ನಿರಾಧಾರ ಆರೋಪ ಮಾಡುವ ಬಾವಾರಿಗೆ ಲಾಯರ್ ನೋಟಿಸ್ ಕೊಡಲಾಗುವುದು ಮಾತ್ರವಲ್ಲದೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಕಾರ್ಪೋರೇಟರ್ ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಉಪಸ್ಥಿತರಿದ್ದರು.

Similar News