ಕಳಚದಿರಲಿ ಹಾವು ಮತ್ತು ನಮ್ಮ ನಡುವಿನ ಕೊಂಡಿ

Update: 2022-12-24 19:30 GMT

ನಾನು ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಒಂದೇ ಮಾರ್ಗದಲ್ಲಿ ಓಡಾಡುತ್ತಿದ್ದೇನೆ. ಮನೆಯಿಂದ ಶಾಲೆಗೆ ಇರುವ ದೂರ ಹದಿನೆಂಟು ಕಿ.ಮೀ. ಹಾದಿಯುದ್ದಕ್ಕೂ ಈ ಪ್ರದೇಶದಲ್ಲಿನ ವಿವಿಧ ಪ್ರಾಣಿ-ಪಕ್ಷಿಗಳು, ವೈವಿಧ್ಯಮಯ ಮಣ್ಣು-ಬೆಳೆಗಳನ್ನು ನೋಡುತ್ತಾ, ಮಳೆ, ಚಳಿ, ಗಾಳಿ, ಬಿಸಿಲುಗಳನ್ನು ಅನುಭವಿಸುತ್ತಾ ನಡೆದವನು. ರಸ್ತೆಯಲ್ಲಿ ಚಲಿಸುವಾಗ ಅಲ್ಲಲ್ಲಿ ಕಾಣುವ ಗೋಸುಂಬೆ, ಓತಿಕ್ಯಾತ, ನರಿ, ಮುಂಗುಸಿ, ಹಾವು, ಕಪ್ಪೆ, ಇಲಿ, ಹೆಗ್ಗಣ ನೋಡುತ್ತಾ ಮಾರ್ಗ ಸವೆಸುತ್ತಿದ್ದೆ. ಆದರೆ ಈಗೆಲ್ಲ ಇವು ನೆನಪು ಮಾತ್ರ ಎನ್ನುವಂತಾ ಗಿದೆ. ನನ್ನ ದಾರಿಯೇನೂ ಬದಲಾಗಿಲ್ಲ. ಆದರೆ ನಾವೇ ಇವುಗಳನ್ನು ನಾಶ ಮಾಡಿದ್ದೇವೆ ಮತ್ತು ಮಾಡುತ್ತಲೇ ಇದ್ದೇವೆ. ಅಭಿವೃದ್ದಿಯ ಹೆಸರಿನಲ್ಲಿ ರಸ್ತೆ ವಿಸ್ತರಿಸಿ, ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿದು ಹಾಕಿದೆವು. ಅವುಗಳಲ್ಲಿದ್ದ ಅಪಾರ ಸಂಖ್ಯೆಯ ಜೀವಿಗಳು ಆವಾಸ ಸ್ಥಾನ ಇಲ್ಲದೇ ನಾಶವಾದವು. ಕೆಲವು ಜೀವಿಗಳು ಆಹಾರದ ಸಮಸ್ಯೆಯಿಂದ ನಾಶ ಹೊಂದಿದವು. ಉಳಿದ ಕೆಲವೇ ಅಪರೂಪದ ಪ್ರಾಣಿಗಳನ್ನು ನಮ್ಮ ತಪ್ಪು ಗ್ರಹಿಕೆಯಿಂದ ನಾಶ ಮಾಡುತ್ತಿದ್ದೇವೆ. ಅದರಲ್ಲಿ ಗೋಸುಂಬೆ ಮತ್ತು ಹಾವು ಸೇರಿವೆ. ಊಸರವಳ್ಳಿ ಎಂದು ಕರೆಯುವ ಗೋಸುಂಬೆ ಹೂಸು ಬಿಡುತ್ತದೆ, ಅದರ ವಾಸನೆಯನ್ನು ಕುಡಿದರೆ ನಾವೂ ಸಾಯುತ್ತೇವೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದನೋ ತಿಳಿಯದು. ಇಂತಹ ಅಬ್ಬೆಪಾರಿಗಳ ಮಾತಿನಿಂದ ಹಳ್ಳಿಗಳಲ್ಲಿ ಇದ್ದ ಗೋಸುಂಬೆಗಳೆಲ್ಲ ನಾಶ ಹೊಂದಿದವು. ಈಗ ವರ್ಷವಿಡೀ ಮಾರ್ಗ ಮಧ್ಯೆ ಹುಡುಕಿದರೂ ನೋಡಲೂ ಒಂದೂ ಗೋಸುಂಬೆ ಸಿಗದಂತಾಗಿದೆ. ಇದಕ್ಕೆ ಹಾವುಗಳು ಹೊರತಲ್ಲ.

ಅಂದಿನಿಂದಲೂ ನಾನು ಸಂಚರಿಸುತ್ತಿದ್ದ ರಸ್ತೆಯಲ್ಲಿ ದಿನಕ್ಕೆ ಕನಿಷ್ಠ ಒಂದಾದರೂ ಹಾವು ಕಾಣುತ್ತಿತ್ತು. ಆದರೆ ಇಂದು ವರ್ಷವಿಡೀ ತಿರುಗಾಡಿದರೂ ಒಂದೂ ಹಾವು ಕಾಣದಂತಾಗಿದೆ. ಹಾಗಾದರೆ ಆ ಹಾವುಗಳೆಲ್ಲ ಏನಾದವು? ಹಾವುಗಳ ಸಂತತಿ ಕ್ಷೀಣಿಸುತ್ತಿದೆಯಾ? ಎಂಬ ಆತಂಕ ಕಾಡುತ್ತಿದೆ. ಹೌದು ಹಿಂದಿಗಿಂತಲೂ ಈಗ ಹಾವುಗಳ ಸಂಖ್ಯೆ ಕಡಿಮೆಯಾಗಿದೆ. ಹಾವುಗಳ ಸಂಖ್ಯೆ ಕಡಿಮೆಯಾಗಲು ಬಹುಮುಖ್ಯವಾಗಿ ಮೂರು ಕಾರಣಗಳನ್ನು ಕಂಡುಕೊಂಡಿದ್ದೇನೆ. ಮೊದಲನೆಯದು ಹಾವುಗಳ ಕುರಿತ ನಮ್ಮ ತಪ್ಪುತಿಳುವಳಿಕೆ. ಎರಡನೆಯದು ಆಧುನಿಕ ಕೃಷಿ ಪದ್ದತಿ. ಮೂರನೆಯದು ಆವಾಸ ಸ್ಥಾನಗಳ ನಾಶ. ಮೊದಲನೆಯ ಕಾರಣದಂತೆ ಹಾವುಗಳ ಕುರಿತ ನಮ್ಮ ತಪ್ಪುತಿಳುವಳಿಕೆಯಿಂದ ಬಹುತೇಕ ಹಾವುಗಳನ್ನು ನಾವು ಕೊಂದು ಹಾಕಿದ್ದೇವೆ. ಭೂಮಿಯ ಮೇಲಿನ ಶೇ. 10-12ರಷ್ಟು ಹಾವುಗಳು ಮಾತ್ರ ವಿಷಕಾರಿ ಹಾವುಗಳು. ಉಳಿದಂತೆ ಶೇ. 90ರಷ್ಟು ಹಾವುಗಳು ವಿಷರಹಿತ. ಹಾವು ಕಡಿತದಿಂದ ಶೇ. 7ರಷ್ಟು ಜನ ಮಾತ್ರ ಸಾಯುತ್ತಾರೆ. ಹಾಗಾಗಿ ಬಹುತೇಕ ಹಾವುಗಳು ಕಡಿದರೂ ಯಾವುದೇ ತೊಂದರೆ ಇಲ್ಲ. ಆದರೆ ನಮ್ಮಾಳಗಿನ ಹಾವಿನ ಭಯವೇ ಹಾವು ಸಾಯಿಸಲು ಕಾರಣವಾಗುತ್ತದೆ.

ಹಾವುಗಳ ಕುರಿತ ಭಯವನ್ನು ಒಫಿಡಿಯೋಫೋಬಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಹಾವುಗಳ ಕುರಿತು ವಿಪರೀತ ಹಾಗೂ ಅಗಾಧ ಭಯವನ್ನುಂಟು ಮಾಡುತ್ತದೆ. ಇದು ಒಂದು ರೀತಿಯ ಆತಂಕದ ಅಸ್ವಸ್ಥತೆಯಾಗಿದೆ. ಈ ಅಸ್ವಸ್ಥತೆಯು ಹಾವುಗಳ ನಾಶಕ್ಕೆ ಕಾರಣವಾಗಿದೆ. ಹೆಚ್ಚಿನ ಹಾವುಗಳು ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುವುದಿಲ್ಲ ಮತ್ತು ರಕ್ಷಣೆಗಾಗಿ ಅಥವಾ ಬೆದರಿಕೆ ಅಥವಾ ಪ್ರಚೋದನೆಗೆ ಒಳಗಾದಾಗ ಮಾತ್ರ ಕಚ್ಚುತ್ತವೆ. ಹಾವು ಕಡಿತದ ಭಯದಿಂದ ಹಾವುಗಳನ್ನು ಕೊಲ್ಲುವುದು ನಮಗೆ ನಾವೇ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದಾಗಿದೆ. ಹಾವುಗಳ ಸಂಖ್ಯೆಯು ಕಡಿಮೆಯಾಗುವುದರಿಂದ ಪರಿಸರಕ್ಕೆ ಮಾತ್ರವಲ್ಲದೆ ಮನುಷ್ಯರಿಗೂ ಹಾನಿಕಾರಕ ಸಂಗತಿಯಾಗಿದೆ. ಎರಡನೆಯ ಕಾರಣದಂತೆ ಆಧುನಿಕ ಕೃಷಿಯು ಹಾವುಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಆಧುನಿಕ ಕೃಷಿಯ ಭಾಗವಾಗಿ ಹೆಚ್ಚಿನ ಇಳುವರಿಯ ಮೋಹಕ್ಕೆ ಒಳಗಾಗಿ, ಬೆಳೆಗಳಿಗೆ ಬಳಸುವ ರಸಗೊಬ್ಬರ, ಔಷಧ ಹಾಗೂ ಕೀಟನಾಶಕಗಳು ಹಾವುಗಳ ಜೀವಕ್ಕೆ ಮಾರಕವಾಗಿವೆ.

ಅದರಲ್ಲೂ ಗದ್ದೆ ಹಾಗೂ ಜಮೀನು ಗಳಲ್ಲಿ ಬಳಸುವ ಫೋರೇಟ್ ಕೀಟನಾಶಕವು ಹಾವುಗಳ ಜೀವಕ್ಕೆ ತುಂಬಾ ಮಾರಕವಾದುದು. ಕೀಟನಾಶಕ ಬಳಕೆಯಿಂದ ಜಮೀನಿನಲ್ಲಿ ದಂಶಕಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಹಾವುಗಳಿಗೆ ಆಹಾರವೂ ಇಲ್ಲದಾಗಿದೆ. ಮೂರನೆಯ ಕಾರಣದಂತೆ ಇತ್ತೀಚಿನ ವರ್ಷಗಳಲ್ಲಿ ಹಾವುಗಳ ಆವಾಸ ಸ್ಥಾನವನ್ನು ಹಾಳು ಮಾಡುತ್ತಿದ್ದೇವೆ. ಪೊದೆಗಳು, ಜಮೀನಿನ ಬದುಗಳು, ತಂಪಾದ ಸ್ಥಳಗಳು ಹಾವುಗಳ ಆವಾಸ ಸ್ಥಾನಗಳಾಗಿವೆ. ಹಾವುಗಳ ನೈಸರ್ಗಿಕ ಆವಾಸ ತಾಣಗಳನ್ನು ನಾಶ ಮಾಡುವ ಮೂಲಕ ಹಾವುಗಳ ಸಂಖ್ಯೆ ಕಡಿಮೆಯಾಗಲು ಕಾರಣರಾಗಿದ್ದೇವೆ. ಹಾವುಗಳು ಹುತ್ತ ನಿರ್ಮಿಸುತ್ತವೆ ಎಂಬುದು ನಮ್ಮ ತಪ್ಪುಕಲ್ಪನೆಯಾಗಿದೆ. ಗೆದ್ದಲುಗಳು ಹುತ್ತವನ್ನು ನಿರ್ಮಿಸುತ್ತವೆ. ಹಾವುಗಳಿಗೆ ಗೆದ್ದಲುಗಳೆಂದರೆ ಪಂಚಪ್ರಾಣ. ಗೆದ್ದಲುಗಳನ್ನು ತಿನ್ನಲು ಹಾವುಗಳು ಹುತ್ತಕ್ಕೆ ಬರುತ್ತವೆ. ಇದನ್ನೇ ನಾವು ತಪ್ಪಾಗಿ ತಿಳಿದು, ಹಾವುಗಳು ಹುತ್ತಗಳನ್ನು ನಿರ್ಮಿಸುತ್ತವೆ ಎನ್ನುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಜಾತಿಯ ಹಾವುಗಳ ಕಳ್ಳಸಾಗಾಣೆಯೂ ನಡೆಯುತ್ತಿದೆ. ಚರ್ಮ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಹಾವುಗಳನ್ನು ವಿದೇಶಗಳಿಗೆ ಕಳ್ಳಸಾಗಾಣೆ ಮಾಡುವ ದಂಧೆ ಹೆಚ್ಚಾಗುತ್ತಿದೆ. ಇದರಿಂದಲೂ ಹಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಹಾವುಗಳು ಪರಭಕ್ಷಕಗಳಾಗಿದ್ದು, ಕಪ್ಪೆ, ಕೀಟ, ಇಲಿ, ಹೆಗ್ಗಣ ಗಳು ಮತ್ತು ಇತರ ದಂಶಕಗಳನ್ನು ತಿನ್ನುತ್ತವೆ. ದಂಶಕಗಳನ್ನು ಬೇಟೆಯಾಡುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಕೆಲವು ಜಾತಿಯ ಹಾವುಗಳು ಇತರ ಜಾತಿಯ ಹಾವುಗಳನ್ನೇ ತಿನ್ನುತ್ತವೆ. ಹೀಗೆ ಹಾವುಗಳು ಬೇಟೆಗಾಗಿ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮುಂಗುಸಿಗಳು, ಕಾಡುಹಂದಿಗಳು, ಗಿಡುಗಗಳು, ರಣಹದ್ದುಗಳು ಹಾವುಗಳನ್ನು ತಮ್ಮ ಆಹಾರವಾಗಿ ಬಳಸುತ್ತವೆ. ಹಾವುಗಳು ಪರಭಕ್ಷಕಗಳಾಗಿ, ಬೇಟೆಯಾಗಿ, ಪರಿಸರ ವ್ಯವಸ್ಥೆಯ ಇಂಜಿನಿಯರ್‌ಗಳಾಗಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಜೊತೆಗೆ ಹಾವುಗಳು 'ದ್ವಿತೀಯ ಬೀಜ ಪ್ರಸರಣ'ವನ್ನು ಸುಗಮಗೊಳಿಸುತ್ತವೆ.

ಹೀಗಾಗಿ ಸಸ್ಯಗಳ ಸಂತಾನೋತ್ಪತ್ತಿಗೆ ಕೊಡುಗೆ ನೀಡುತ್ತವೆ. ಹಾವುಗಳು ದಂಶಕಗಳನ್ನು ಆಹಾರವಾಗಿ ನುಂಗಿದಾಗ ದಂಶಕಗಳ ಉದರದಲ್ಲಿದ್ದ ಬೀಜಗಳು ಪರಿಸರಕ್ಕೆ ವಿಸರ್ಜನೆಯ ಮೂಲಕ ಹೊರಹಾಕಲ್ಪಡುತ್ತವೆ. ಹಾವುಗಳು ದಂಶಕಗಳಿಗಿಂತ ದೊಡ್ಡ ಆವಾಸ ವ್ಯಾಪ್ತಿಯನ್ನು ಹೊಂದಿರುವುದರಿಂದ, ಬೀಜಗಳು ಮೂಲ ಸಸ್ಯದಿಂದ ಹೆಚ್ಚು ದೂರದಲ್ಲಿ ಹರಡುತ್ತವೆ. ಈ ಕಾರ್ಯವಿಧಾನವು ಬೆಳಕು, ನೀರು ಮತ್ತು ಮಣ್ಣಿನ ಪೋಷಕಾಂಶಗಳ ಸಾಮಾನ್ಯ ಸಂಪನ್ಮೂಲಗಳಿಗಾಗಿ ಹೆಣಗಾಡದೆ ಸಸ್ಯ ಜಾತಿಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆಯನ್ನು ಬೆಂಬಲಿಸುತ್ತದೆ ಮತ್ತು ಆದ್ದರಿಂದ ಜೀವವೈವಿಧ್ಯತೆ ಮತ್ತು ಪರಿಸರ ಪುನಃಸ್ಥಾಪನೆಗೆ ಅವಶ್ಯಕವಾಗಿದೆ. ಕೆಲವು ರೋಗ ತಡೆಗಟ್ಟುವಲ್ಲಿ ಹಾವುಗಳು ಪಾತ್ರವಹಿಸುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ದಂಶಕಗಳು ಝೂನೋಟಿಕ್ ಕಾಯಿಲೆಗಳ (ಲೈಮ್ ಕಾಯಿಲೆ, ಲೆಪ್ಟೊಸ್ಪಿರೋಸಿಸ್, ಲೀಶ್ಮೇನಿಯಾಸಿಸ್, ಹ್ಯಾಂಟವೈರಸ್) ವಾಹಕಗಳಾಗಿವೆ. ಈ ಕಾಯಿಲೆಗಳು ಮನುಷ್ಯರು, ನಾಯಿಗಳು, ಜಾನುವಾರುಗಳು, ಕುರಿಗಳು ಮತ್ತು ಇತರ ಸಾಕುಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ದಂಶಕಗಳ ಸಂಖ್ಯೆಯಲ್ಲಿನ ಹಠಾತ್ ಹೆಚ್ಚಳವು ಝೂನೋಟಿಕ್ ರೋಗಗಳ ಉಲ್ಬಣಕ್ಕೆ ಕಾರಣವಾಗಬಹುದು.

ದಂಶಕಗಳ ಸಂಖ್ಯೆಯ ಹೆಚ್ಚಳವು ಬೆಳೆಗಳ ನಷ್ಟಕ್ಕೆ ಕಾರಣವಾಗುತ್ತದೆ. ಹಾವುಗಳು ದಂಶಕಗಳನ್ನು ತಿನ್ನುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುತ್ತವೆ. ಹೀಗಾಗಿ ಝೂನೋಟಿಕ್ ರೋಗ ಹರಡುವಿಕೆಯನ್ನು ತಡೆಯುತ್ತದೆ ಮತ್ತು ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ. ಪ್ರತೀ ವರ್ಷ ದಂಶಕಗಳಿಂದ ನಾಶವಾಗುವ ಆಹಾರ ಧಾನ್ಯಗಳಿಂದ ಸುಮಾರು 200 ಮಿಲಿಯನ್ ಜನರಿಗೆ ಆಹಾರವನ್ನು ನೀಡಬಹುದೆಂದು ಅಂದಾಜು ಮಾಡಲಾಗಿದೆ. ದಂಶಕಗಳ ಹಾವಳಿ ತಗ್ಗಿಸಲು ನೈಸರ್ಗಿಕ, ಪರಿಸರ ಸ್ನೇಹಿ ಮತ್ತು ಉಚಿತ ಸೇವೆಯನ್ನು ನೀಡುತ್ತಿರುವ ಹಾವುಗಳನ್ನು ನಿಜವಾದ ರೈತರ ಸ್ನೇಹಿತರು ಎನ್ನಬಹುದು. ಹೀಗೆ ವಿವಿಧ ಉಪಯುಕ್ತ ಕಾರ್ಯಗಳ ಮೂಲಕ ಹಾವುಗಳು ಕೃಷಿ ಸಮುದಾಯಗಳಿಗೆ ಪ್ರಯೋಜನಗಳನ್ನು ನೀಡುತ್ತವೆ. ಹಾವುಗಳು ಅನೇಕ ಔಷಧಿಗಳ ಮೂಲವೂ ಆಗಿವೆ. ಹಾವು ಕಡಿತಕ್ಕೆ ಸಾಬೀತಾದ ಏಕೈಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಎಂದರೆ ಹಾವಿನ ವಿಷವಾಗಿದೆ. ಹೌದು ಹಾವು ಕಡಿತಕ್ಕೆ ಹಾವಿನ ವಿಷವೇ ಮದ್ದು.

ಹಾವಿನ ವಿಷ ಸಂಗ್ರಹಿಸಿ ಹಾವಿನ ಕಡಿತಕ್ಕೆ ಔಷಧ ಸಿದ್ದಪಡಿಸಲಾಗುತ್ತದೆ. ಹಾವಿನ ವಿಷವನ್ನು ಕುದುರೆಗಳು ಮತ್ತು ಕುರಿಗಳಿಗೆ ಚುಚ್ಚುಮದ್ದಾಗಿ ಚುಚ್ಚಲಾಗುತ್ತದೆ. ವಿಷದ ವಿರುದ್ಧ ಪ್ರತಿಕಾಯಗಳೊಂದಿಗೆ ಪ್ರಾಣಿಗಳ ಪ್ಲಾಸ್ಮಾವನ್ನು ಸಂಗ್ರಹಿಸಲಾಗುತ್ತದೆ ಮತ್ತು ಜೀವ ಉಳಿಸುವ, ಹಾವಿನ ವಿರೋಧಿ ವಿಷವನ್ನು ಉತ್ಪಾದಿಸಲು ಶುದ್ಧೀಕರಿಸಲಾಗುತ್ತದೆ. ಹಾವಿನ ವಿಷವು ವಿರೋಧಿ ವಿಷದ ಉತ್ಪಾದನೆಯನ್ನು ಮೀರಿ ಚಿಕಿತ್ಸಕ ಮೌಲ್ಯವನ್ನು ಹೊಂದಿದೆ. ಹಾವಿನ ವಿಷದಿಂದ ಪಡೆದ ಅನೇಕ ಔಷಧಗಳನ್ನು ವೈದ್ಯಕೀಯ ಅಭ್ಯಾಸದಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಹಾವಿನ ವಿಷಗಳ ಚಿಕಿತ್ಸಕ ಸಾಮರ್ಥ್ಯವು ಪರಿಶೋಧಿಸದೆ ಉಳಿದಿದೆ. ಹಾವಿನ ವಿಷದ ಕುರಿತು ಸಂಶೋಧಕರು ಇನ್ನೂ ಅನೇಕ ಸಂಯುಕ್ತಗಳನ್ನು ಅನ್ವೇಷಿಸಲು ಮತ್ತು ತನಿಖೆ ಮಾಡುವುದನ್ನು ಮುಂದುವರಿಸಿದ್ದಾರೆ.

   ಜಾಗತಿಕವಾಗಿ ಸುಮಾರು 3,600 ಜಾತಿಯ ಹಾವುಗಳಿವೆ. ಅದರಲ್ಲಿ ಭಾರತದಲ್ಲಿ 300ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇದರಲ್ಲಿ ಕಾಳಿಂಗ ಸರ್ಪ, ನಾಗರಹಾವು, ಕಟ್ಟುಹಾವು, ಉರಿಬೆಂಜರಿ(ಕೊಳಕ ಮಂಡಲ) ಸೇರಿದಂತೆ ಕೇವಲ 8 ಜಾತಿಯ ಹಾವುಗಳು ಮಾತ್ರ ವಿಷಕಾರಿ ಹಾವುಗಳಾಗಿವೆ. ಉಪದ್ರವ ಇಲ್ಲದೆ ಯಾವ ಹಾವೂ ಕಚ್ಚುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನರು ಹಾವುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಅದರಲ್ಲೂ ಕೆಲವು ಯುವಕರು ಉರಗ ತಜ್ಞರಾಗುತ್ತಿರುವುದು ಮತ್ತು ಉರಗ ಸಂರಕ್ಷಕರಾಗುತ್ತಿರುವುದು ಆಶಾದಾಯಕವಾಗಿದೆ. ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ಹಾವುಗಳನ್ನು ಸಂರಕ್ಷಿಸುವಲ್ಲಿ ಅನೇಕರು ಮುಂದೆ ಬರುತ್ತಿದ್ದಾರೆ. ಇದು ಒಂದಿಷ್ಟು ಹೊಸ ಬದಲಾವಣೆಗೆ ಕಾರಣವಾಗಿದೆ. ಆದರೆ ಹಾವುಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗೂ, ಪ್ರತೀ ವ್ಯಕ್ತಿಗೂ ತಲುಪಬೇಕಾಗಿದೆ. ಜನರಿಗೆ ಹಾವುಗಳ ಶಿಕ್ಷಣ ನೀಡುವ ಮೂಲಕ ಮಾತ್ರ ಅವುಗಳ ಬಗ್ಗೆ ಇರುವ ತಪ್ಪುತಿಳುವಳಿಕೆ ಹೋಗಲಾಡಿಸಿ ಸಂರಕ್ಷಣೆಗೆ ಸಹಾಯ ಮಾಡಬಹುದಾಗಿದೆ. ಇದಕ್ಕೆ ಮಹಾರಾಷ್ಟ್ರದ ಶೆಟ್ಪಾಲ್ ಎಂಬ ಹಳ್ಳಿ ನೈಜ ಉದಾಹರಣೆಯಾಗಿದೆ. ಈ ಹಳ್ಳಿಯಲ್ಲಿನ ಪ್ರತೀ ಮನೆಯಲ್ಲೂ ಹಾವುಗಳಿಗಾಗಿ ಪ್ರತ್ಯೇಕ ಆವಾಸ ಸ್ಥಾನ ನಿರ್ಮಿಸಲಾಗಿದೆ. ಇಲ್ಲಿನ ಪ್ರತೀ ಮನೆಯೂ ಸಹ ಹಾವಿನ ವಾಸಸ್ಥಾನ.

ಕೋಳಿ, ಕುರಿ, ಮೇಕೆ, ನಾಯಿ, ಬೆಕ್ಕು ಇನ್ನಿತರ ಸಾಕು ಜೀವಿಗಳ ಮನೆಯಲ್ಲಿ ಓಡಾಡುವಂತೆ ಹಾವುಗಳೂ ಸಹ ಮನೆಯ ಹೊರಗೆ ಹಾಗೂ ಒಳಗೆ ಓಡಾಡುತ್ತವೆ. ಪ್ರತೀ ಮನೆಯಲ್ಲಿ ಹಾವು ತಂಗಲು ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಕೋಳಿ, ಪಾರಿವಾಳ, ಮೇಕೆ ಹಂದಿಗಳನ್ನು ಕೂಡಿಹಾಕಲು ಪ್ರತ್ಯೇಕ ಸ್ಥಳ ನಿರ್ಮಿಸುವಂತೆ, ಹಾವುಗಳಿಗಾಗಿ ಬೋನು ಅಥವಾ ಬಿಲದ ರೀತಿಯಲ್ಲಿ ನಿರ್ಮಾಣ ವ್ಯವಸ್ಥೆ ಮಾಡಲಾಗಿರುತ್ತದೆ. ಹೊಸ ಮನೆ ಕಟ್ಟಿಸುವ ಪ್ರತಿಯೊಬ್ಬರೂ ಹಾವುಗಳಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಕಟ್ಟಿಸುತ್ತಾರೆ. ಇದನ್ನು ಹಾವಿನ ಗುಡಿ ಅಥವಾ ಹಾವಿನ ದೇವರಮನೆ ಎನ್ನುತ್ತಾರೆ. ಇಂತಹ ಒಂದು ಮಹತ್ತರ ಪರಿಕಲ್ಪನೆ ಹಿನ್ನೆಲೆಯಲ್ಲಿ ಪ್ರತೀಮನೆಯಲ್ಲೂ ಇತರ ಪ್ರಾಣಿಗಳನ್ನು ಸಾಕುವಂತೆ ಹಾವುಗಳನ್ನು ಸಂರಕ್ಷಿಸುವ ಪರಿಪಾಠ ಅಲ್ಲಿ ಬೆಳೆದುಬಂದಿದೆ. ನಾವೂ ಈಗ ಜೀವಂತ ಇರುವ ಹಾವುಗಳನ್ನು ರಕ್ಷಿಸಲು ಮುಂದಾಗಬೇಕಿದೆ. ಆಗ ಮಾತ್ರ ಜೀವವೈವಿಧ್ಯತೆ ಮತ್ತು ಆಹಾರ ಸರಪಳಿಯನ್ನು ಕಾಪಾಡಲು ಸಾಧ್ಯ.

Similar News