ಮೈಕ್ರೋಆಲ್ಗೆ: ಜೈವಿಕ ಇಂಧನಕ್ಕೆ ಸಮರ್ಥನೀಯ ಪರ್ಯಾಯವಾದೀತೇ?

Update: 2024-02-11 03:12 GMT

ಮೈಕ್ರೋಆಲ್ಗೆಗಳು ಪ್ರತೀ ಹೆಕ್ಟೇರಿಗೆ ವರ್ಷಕ್ಕೆ 15,000 ಗ್ಯಾಲನ್ಗಳಷ್ಟು ತೈಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ತೈಲವನ್ನು ಇಂಧನಗಳು ಮತ್ತು ರಾಸಾಯನಿಕಗಳಾಗಿ ಪರಿವರ್ತಿಸಬಹುದು. ಅವು ಜೀವರಾಶಿ ಮತ್ತು ಇಂಧನದ ಹೆಚ್ಚಿನ ಇಳುವರಿಯನ್ನು ಒದಗಿಸಬಲ್ಲವು. ಅಲ್ಲದೆ ಸಾಂಪ್ರದಾಯಿಕ ಬೆಳೆ ಉತ್ಪಾದನೆಗೆ ಸೂಕ್ತವಲ್ಲದ ಯಾವುದೇ ಪರಿಸ್ಥಿತಿಗಳಲ್ಲಿ ಅವು ಬೆಳೆಯುವ ಸಾಮರ್ಥ್ಯವನ್ನು ಹೊಂದಿವೆ.

ಇತ್ತೀಚಿನ ದಶಕಗಳಲ್ಲಿ ವಾತಾವರಣದ ತಾಪಮಾನ ಏರಿಕೆಗೆ ಕಾರಣವಾಗುವ ಹಸಿರುಮನೆ ಅನಿಲಗಳ ಹೆಚ್ಚಿನ ಬಳಕೆಯ ಪರಿಣಾಮವಾಗಿ ಜಾಗತಿಕ ತಾಪಮಾನವೂ ಏರುತ್ತಿದೆ. ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯಿಂದ ಇಡೀ ಜಗತ್ತು ಶಕ್ತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಂಪ್ರದಾಯಿಕ ಇಂಧನಗಳ ಬದಲಿಗೆ ಪರ್ಯಾಯ ಇಂಧನಗಳನ್ನು ಬಳಸುವ ತುರ್ತು ಅಗತ್ಯವು ಅನೇಕ ಮಾರ್ಗಗಳನ್ನು ಸೂಚಿಸುತ್ತಿದೆ. ಅದರ ಭಾಗವಾಗಿ ಜೈವಿಕ ಡೀಸೆಲ್ ಮತ್ತು ಜೈವಿಕ ಹೈಡ್ರೋಜನ್ ಆಸಕ್ತಿದಾಯಕ ಪರ್ಯಾಯಗಳಾಗಿ ಹೊರಹೊಮ್ಮಲು ಕಾರಣವಾಗಿದೆ. ಈ ಎರಡೂ ಪರ್ಯಾಯಗಳನ್ನು ಮೈಕ್ರೋಆಲ್ಗೆಗಳ ಮಧ್ಯಸ್ಥಿಕೆಯಿಂದ ಪಡೆಯಬಹುದು.

ನಾವು ಚಿಕ್ಕವರಿದ್ದಾಗ ಅಂದರೆ 35-40 ವರ್ಷಗಳ ಹಿಂದೆ ನಮ್ಮೂರಿನ ಕೆರೆಯ ನೀರು ಆಗಾಗ ಹಸಿರು ಬಣ್ಣಕ್ಕೆ ತಿರುಗುತ್ತಿತ್ತು. ಆಗ ಇದಕ್ಕೆ ಕಾರಣವೇನೆಂದು ತಿಳಿದಿರಲಿಲ್ಲ. ತಿಳಿಯುವ ಕುತೂಹಲವೂ ಆಗ ಇರಲಿಲ್ಲ. ಈ ಬರಹಕ್ಕೆ ಪೂರಕ ಅಂಶಗಳ ಕುರಿತು ಅಧ್ಯಯನ ನಡೆಸಿದಾಗ ಬಾಲ್ಯದ ದಿನಗಳ ನೆನಪಾಯಿತು. ಬಹುತೇಕ ಈಗಲೂ ಇಂತಹ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬೇಸಿಗೆಯ ದಿನಗಳಲ್ಲಿ ನದಿಗಳ ನೀರು ಹಸಿರು ಬಣ್ಣಕ್ಕೆ ಪರಿವರ್ತನೆಯಾದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾಗುತ್ತದೆ. ಸಾಮಾನ್ಯವಾಗಿ ಹೀಗೆ ನೀರು ಹಸಿರು ಬಣ್ಣಕ್ಕೆ ಬದಲಾಗಲು ಆಲ್ಗೆ ಕಾರಣವಾಗಿವೆ. ಆಲ್ಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾದಾಗ ಅಥವಾ ತಳಭಾಗದಿಂದ ಮೇಲೆ ಬಂದಾಗ ನೀರು ಹಸಿರಾಗಿ ಕಾಣುತ್ತದೆ. ಸ್ಥಳೀಯವಾಗಿ ಇದನ್ನು ನೀರು ಕಲುಷಿತಗೊಂಡಿದೆ ಎಂದು ಗ್ರಹಿಸುವುದುಂಟು. ಗ್ರಾಮೀಣ ಭಾಷೆಯಲ್ಲಿ ಇದನ್ನು ನೀರು ಪಾಚಿಗಟ್ಟಿದೆ ಎಂದು ಹೇಳಲಾಗುತ್ತಿತ್ತು. ಆ ಪಾಚಿಯೇ ಮೈಕ್ರೋಆಲ್ಗೆಗಳಾಗಿವೆ.

ಮೈಕ್ರೋಆಲ್ಗೇಗಳು ಸಾಮಾನ್ಯವಾಗಿ ಒಂದು ಅಥವಾ ಕೆಲವು ಜೀವಕೋಶಗಳಿಂದ ಮಾಡಲ್ಪಟ್ಟಿರುವ ಸೂಕ್ಷ್ಮ ಪಾಚಿಗಳಾಗಿವೆ. ಅವು ಫೈಟೊಪ್ಲಾಂಕ್ಟನ್ ಆಗಿದ್ದು, ಸಿಹಿನೀರಿನ ಮತ್ತು ಸಮುದ್ರ ವ್ಯವಸ್ಥೆಗಳಲ್ಲಿ ಕಂಡುಬರುತ್ತವೆ. ಮೈಕ್ರೋಆಲ್ಗೆಗಳು ಪ್ರತ್ಯೇಕವಾಗಿ ಅಥವಾ ಸರಪಳಿಗಳು ಅಥವಾ ಗುಂಪುಗಳಲ್ಲಿ ಅಸ್ತಿತ್ವದಲ್ಲಿರಬಹುದು. 1890ರಲ್ಲಿ ಮಾರ್ಟಿನಸ್ ವಿಲ್ಲೆಮ್ ಬೀಜೆರಿಂಕ್ ಅವರು ನ್ಯೂಕ್ಲಿಯಸ್ನೊಂದಿಗೆ ಮೊದಲ ಮೈಕ್ರೋಆಲ್ಗೆಯನ್ನು ಕಂಡುಹಿಡಿದನು. ಮೈಕ್ರೋಆಲ್ಗೆಯನ್ನು ಕ್ಲೋರೆಲ್ಲಾ ವಲ್ಗ್ಯಾರಿಸ್ ಎಂದೂ ಕರೆಯಲಾಗುತ್ತದೆ.


 



ಮೈಕ್ರೋಆಲ್ಗೆಗಳು ದ್ಯುತಿಸಂಶ್ಲೇಷಕ, ಹೆಟೆರೊಟ್ರೋಫಿಕ್ ಜೀವಿಗಳಾಗಿದ್ದು, ಅವು ಶಕ್ತಿಯ ಬೆಳೆಗಳಾಗಿ ಬೆಳೆಯಲು ಅಸಾಧಾರಣ ಸಾಮರ್ಥ್ಯವನ್ನು ಹೊಂದಿವೆ. ಪಾಚಿಯು ಯಾವುದೇ ಕಷ್ಟಕರ ಹವಾಮಾನ ಪರಿಸ್ಥಿತಿಯಲ್ಲಿಯೂ ಬೆಳೆಯಬಲ್ಲದು. ಪಾಚಿಗಳು ಕೊಬ್ಬುಗಳು, ತೈಲಗಳು, ಸಕ್ಕರೆಗಳು ಮತ್ತು ಇತರ ಉಪಯುಕ್ತ ಜೈವಿಕ ಸಕ್ರಿಯ ಸಂಯುಕ್ತಗಳಂತಹ ವಿವಿಧ ವಾಣಿಜ್ಯ ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಮೈಕ್ರೋಆಲ್ಗೆಗಳಲ್ಲಿ ಹೆಚ್ಚಿನ ಲಿಪಿಡ್ಗಳ ಉತ್ಪಾದನೆಯ ಸಾಮರ್ಥ್ಯದ ಕಾರಣದಿಂದ ಜೈವಿಕ ಡೀಸೆಲ್ ಉತ್ಪಾದನೆಗೆ ಸಮರ್ಥವಾಗಿ ಉಪಯುಕ್ತವಾಗಿವೆ. ಸಾರಿಗೆ ಕ್ಷೇತ್ರದಲ್ಲಿ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಜೈವಿಕ ಇಂಧನ ತಯಾರಿಸುವ ಮೂಲವಾಗಿ ಮೈಕ್ರೋಆಲ್ಗೆಗಳನ್ನು ಬಳಸಬಹುದೆಂದು ಅನೇಕ ಪ್ರಯೋಗಗಳು ಸಾಬೀತುಪಡಿಸಿವೆ.

ಜೈವಿಕ ಇಂಧನ ಉತ್ಪಾದಕತೆಯಲ್ಲಿ ಸಸ್ಯಗಳಿಗಿಂತ ಹೆಚ್ಚು ಸಮರ್ಥನೀಯ ಪರಿಣಾಮವನ್ನು ಮೈಕ್ರೋಆಲ್ಗೆಗಳು ನೀಡಬಲ್ಲವು. ಇದರ ಉತ್ಪಾದನೆಗೆ ಉತ್ತಮ ಗುಣಮಟ್ಟದ ಕೃಷಿ ಭೂಮಿಯ ಅಗತ್ಯವಿಲ್ಲ. ಸೂರ್ಯನ ಬೆಳಕು ಮತ್ತು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ನ ಪ್ರಮಾಣದಲ್ಲಿಯೇ ಸೂಕ್ತವಾದ ಪೋಷಕಾಂಶಗಳನ್ನು ಒದಗಿಸುವ ಉಪ್ಪುನೀರು ಮತ್ತು ತ್ಯಾಜ್ಯನೀರಿನಲ್ಲಿ ಮೈಕ್ರೋಆಲ್ಗೆಗಳನ್ನು ಬೆಳೆಸಬಹುದು. ಮತ್ತೊಂದೆಡೆ ಇವು ಉತ್ತಮ ಚಯಾಪಚಯ ದ್ಯುತಿಸಂಶ್ಲೇಷಣೆ ಮೂಲಕ ಆಣ್ವಿಕ ಹೈಡ್ರೋಜನ್ ಬಿಡುಗಡೆ ಮಾಡಲು ಅವಕಾಶ ನೀಡುತ್ತವೆ. ಇದು ಸುಲಭವಾಗಿ ಇಂಧನ ಕೋಶಗಳಲ್ಲಿ ವಿದ್ಯುಚ್ಛಕ್ತಿಗೆ ಅಥವಾ ಸ್ಫೋಟದ ಇಂಜಿನ್ಗಳಲ್ಲಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಮೈಕ್ರೋಆಲ್ಗೆಗಳ ಇಂತಹ ಗುಣವು ಜೈವಿಕ ಇಂಧನ ತಯಾರಿಕೆಯ ಒಳಸುಳಿಗಳನ್ನು ನೀಡಿದೆ.

ಮೈಕ್ರೋಆಲ್ಗೆಯು ಜೈವಿಕ ಇಂಧನದಂತಹ ಕೆಲವು ಪ್ರಯೋಜನಗಳನ್ನು ಹೊಂದಿವೆ. ವಿಷಕಾರಿಯಲ್ಲದ ಗಂಧಕವನ್ನು ಹೊಂದಿರದ ಮತ್ತು ಹೆಚ್ಚು ಜೈವಿಕ ವಿಘಟನೀಯವಾಗಿರುವ ಜೈವಿಕ ಡೀಸೆಲ್ ಉತ್ಪಾದಿಸಲು ಪಾಚಿಗಳನ್ನು ಬಳಸಬಹುದು ಎಂದು ಇತ್ತೀಚಿನ ಸಂಶೋಧನೆಯು ಸಾಬೀತುಪಡಿಸಿದೆ. ಇದಲ್ಲದೆ ಇತರ ಶಕ್ತಿ ಬೆಳೆಗಳಿಗೆ ಹೋಲಿಸಿದರೆ ಅವು ಹೆಚ್ಚಿನ ಇಳುವರಿಯನ್ನು ನೀಡುತ್ತವೆ. ಮೈಕ್ರೋಆಲ್ಗೆಗಳು ಪ್ರತೀ ಹೆಕ್ಟೇರಿಗೆ ವರ್ಷಕ್ಕೆ 15,000 ಗ್ಯಾಲನ್ಗಳಷ್ಟು ತೈಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ತೈಲವನ್ನು ಇಂಧನಗಳು ಮತ್ತು ರಾಸಾಯನಿಕಗಳಾಗಿ ಪರಿವರ್ತಿಸಬಹುದು. ಅವು ಜೀವರಾಶಿ ಮತ್ತು ಇಂಧನದ ಹೆಚ್ಚಿನ ಇಳುವರಿಯನ್ನು ಒದಗಿಸಬಲ್ಲವು. ಅಲ್ಲದೆ ಸಾಂಪ್ರದಾಯಿಕ ಬೆಳೆ ಉತ್ಪಾದನೆಗೆ ಸೂಕ್ತವಲ್ಲದ ಯಾವುದೇ ಪರಿಸ್ಥಿತಿಗಳಲ್ಲಿ ಅವು ಬೆಳೆಯುವ ಸಾಮರ್ಥ್ಯವನ್ನು ಹೊಂದಿವೆ. ಮೈಕ್ರೋಆಲ್ಗೆಗಳು ವಾತಾವರಣದ ಇಂಗಾಲದ ಡೈ ಆಕ್ಸೈಡ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ನ ಶೇಕಡಾವಾರು ಪ್ರಮಾಣವನ್ನು ಸರಿಪಡಿಸುತ್ತವೆ. ಹಾಗಾಗಿ ಮೈಕ್ರೋಆಲ್ಗೆಗಳು ಜಾಗತಿಕ ಮಾಲಿನ್ಯ ಸಮಸ್ಯೆಗೆ ಪರಿಹಾರಗಳಾಗಿವೆ.

ನವೀಕರಿಸಬಹುದಾದ ಶಕ್ತಿಯ ಇತರ ಪ್ರಕಾರಗಳಾದ ಗಾಳಿ, ಸೌರ ಮತ್ತು ಉಬ್ಬರವಿಳಿತ ಇಂಧನಗಳಿಗೆ ಭಿನ್ನವಾಗಿ ಜೈವಿಕ ಡೀಸೆಲ್ ರಾಸಾಯನಿಕ ಶಕ್ತಿಯನ್ನು ಅಸ್ತಿತ್ವದಲ್ಲಿರುವ ಇಂಜಿನ್ಗಳು ಮತ್ತು ಸಾರಿಗೆ ಮೂಲಸೌಕರ್ಯಗಳಲ್ಲಿ ಬಳಸಬಹುದಾಗಿದೆ. ಪೆಟ್ರೋಡೀಸೆಲ್ನೊಂದಿಗೆ ಮಿಶ್ರಣ ಮಾಡಿದ ಜೈವಿಕ ಡೀಸೆಲ್ ಮತ್ತು ಜೈವಿಕ ಹೈಡ್ರೋಜನ್ಗಳನ್ನು ಕ್ರಮವಾಗಿ ಸಸ್ಯ ತೈಲಗಳು ಮತ್ತು ನೀರಿನ ವಿದ್ಯುದ್ವಿಭಜನೆಯಿಂದ ಪಡೆಯಬಹುದು. ಇದಕ್ಕೆ ಹೊರತಾಗಿ ಮೈಕ್ರೋಆಲ್ಗೆ ಮಧ್ಯಸ್ಥಿಕೆಯ ಮಾರ್ಗಗಳ ಮೂಲಕವೂ ಪರಿಣಾಮಕಾರಿಯಾಗಿ ಶಕ್ತಿಯನ್ನು ಉತ್ಪಾದಿಸಬಹುದು.

ಮೈಕ್ರೋಆಲ್ಗೆಗಳು ಸೂಕ್ಷ್ಮಜೀವಿಯ ಯುಕ್ಯಾರಿಯೋಟ್ಗಳಾಗಿದ್ದು, ಭೂಮಿಯ ಮೇಲೆ ಕಂಡುಬರುವ ಎಲ್ಲಾ ಪರಿಸರ ವ್ಯವಸ್ಥೆಗಳಲ್ಲಿ ಜನಪ್ರಿಯವಾಗಿವೆ. ಶಾಖ, ಶೀತ, ಬರ, ಲವಣಾಂಶ, ಫೋಟೊ ಆಕ್ಸಿಡೀಕರಣ, ಆಮ್ಲಜನಕರಹಿತ, ಆಸ್ಮೋಟಿಕ್ ಒತ್ತಡ ಮತ್ತು ನೇರಳಾತೀತ ವಿಕಿರಣ ಸೇರಿದಂತೆ ಎಲ್ಲಾ ಪರಿಸರದ ಒತ್ತಡದ ಅಡಿಯಲ್ಲಿ ಬದುಕಲು ಅವು ಉತ್ತಮವಾಗಿ ಹೊಂದಿಕೊಳ್ಳುತ್ತವೆ. ದ್ಯುತಿಸಂಶ್ಲೇಷಕ ಜೀವಿಗಳಾಗಿ ಸೂರ್ಯನ ಬೆಳಕಿನ ಸಹಾಯದಿಂದ ನೀರು ಮತ್ತು ಇಂಗಾಲದ ಡೈ ಆಕ್ಸೈಡ್ಗಳನ್ನು ಸಾವಯವ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ. ಪರ್ಯಾಯ ಇಂಧನಗಳಾಗಿ ಬಳಸಲು ಬೇಕಾದ ಸಾಮರ್ಥ್ಯಗಳು ಅವುಗಳಿಗೆ ಇವೆ.

ಮೈಕ್ರೋಆಲ್ಗೆಗಳು ಸಮತೋಲಿತ ಶೈಲಿಯಲ್ಲಿ ಉನ್ನತ ಸಸ್ಯಗಳ ವಿಶಿಷ್ಟವಾದ ಕೆಲವು ಗುಣಲಕ್ಷಣಗಳನ್ನು ಸಂಯೋಜಿಸುತ್ತವೆ. ಅಂದರೆ ಸಮರ್ಥ ಆಮ್ಲಜನಕದ ದ್ಯುತಿಸಂಶ್ಲೇಷಣೆ ಮತ್ತು ಸರಳ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಹೊಂದಿವೆ. ಸೂಕ್ಷ್ಮಜೀವಿಗಳ ಸರಿಯಾದ ಜೈವಿಕ ತಂತ್ರಜ್ಞಾನದ ಗುಣಲಕ್ಷಣಗಳೊಂದಿಗೆ ವೇಗದ ಬೆಳವಣಿಗೆಯ ದರಗಳು ಮತ್ತು ಚಯಾಪಚಯಗಳನ್ನು ಸಂಗ್ರಹಿಸುವ ಅಥವಾ ಸ್ರವಿಸುವ ಸಾಮರ್ಥ್ಯ ಅಧಿಕವಾಗಿದೆ. ಈ ಉಪಯುಕ್ತ ಸಂಯೋಜನೆಯು ಮುಂದಿನ ದಿನಗಳಲ್ಲಿ ಮೈಕ್ರೋಆಲ್ಗಲ್ ಜೈವಿಕ ತಂತ್ರಜ್ಞಾನಕ್ಕೆ ಮುಖ್ಯ ತರ್ಕವನ್ನು ಒದಗಿಸುತ್ತದೆ. ಇದಲ್ಲದೆ ಅಸ್ತಿತ್ವದಲ್ಲಿರುವ ಹೆಚ್ಚಿನ ಸಂಖ್ಯೆಯ ಸೂಕ್ಷ್ಮ ಪಾಚಿಗಳು ಜೀವವೈವಿಧ್ಯತೆಯ ವಿಶಿಷ್ಟ ಜಲಾಶಯವಾಗಿದೆ. ಹೆಚ್ಚುವರಿ ಮೌಲ್ಯದ ಜೀವಸತ್ವಗಳು, ವರ್ಣದ್ರವ್ಯಗಳು ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿವೆ. ಈ ಸಂಯುಕ್ತಗಳು ಜೈವಿಕ ಸಂಸ್ಕರಣಾ ವಿಧಾನದ ಆಧಾರದ ಮೇಲೆ ಮೈಕ್ರೋಆಲ್ಗೆಗಳಿಂದ ಜೈವಿಕ ಇಂಧನ ತಯಾರಿಕೆಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡಲು ಅನುಕೂಲಕರವಾಗಿ ಕೊಡುಗೆ ನೀಡುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಹವಾಮಾನ ಬದಲಾವಣೆಗೆ ಕಾರಣವಾದ ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಮೈಕ್ರೋ ಆಲ್ಗೆಗಳು ಹೆಚ್ಚು ಸಮರ್ಥನೀಯ ಇಂಧನಗಳಾಗುವ ಎಲ್ಲಾ ಸಾಮರ್ಥ್ಯಗಳೂ ಇವೆ. ಮೈಕ್ರೋಆಲ್ಗೆಯಿಂದ ಜೈವಿಕ ಇಂಧನಗಳ ಉತ್ಪಾದನೆಯು ತಾಂತ್ರಿಕವಾಗಿ ಕಾರ್ಯಸಾಧ್ಯವೆಂದು ಸಾಬೀತಾಗಿದೆ ಮತ್ತು ಲಿಪಿಡ್ಗಳಲ್ಲಿ ಸಮೃದ್ಧವಾಗಿರುವ ಮೈಕ್ರೋಆಲ್ಗಾ ಬಯೋಮಾಸ್ನ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಅನೇಕ ತಜ್ಞರು ಹೇಳಿದ್ದಾರೆ. ಹಾಗಿದ್ದರೂ ಇದರ ಇಂಧನ ತಯಾರಿಕೆಗೆ ಮೀನಮೇಷ ಎಣಿಸುವುದು ಯಾಕೆಂದು ಇನ್ನೂ ನಿಗೂಢವಾಗಿದೆ. ಏನೇ ಆಗಲಿ ಮುಂದೊಂದು ದಿನ ಮೈಕ್ರೋಆಲ್ಗೆಗಳು ಪರ್ಯಾಯ ಇಂಧನಗಳಾಗುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ. ಅಲ್ಲಿಯವರೆಗೂ ಕಾಯಬೇಕು ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಬಿ. ಗುರುಬಸವರಾಜ

contributor

Similar News