ಹುಟ್ಟುವ ಮೊದಲೇ ಹತ್ಯೆಯಾಗುವ ಹೆಣ್ಣುಮಕ್ಕಳೆಷ್ಟು?

Update: 2022-12-26 06:35 GMT

2020ರಲ್ಲಿ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 100 ಮಹಿಳೆಯರಿಗೆ 108.18 ಪುರುಷರು. ಆಗಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 71,71,00,970 ಪುರುಷರು ಮತ್ತು 66,29,03,415 ಮಹಿಳೆಯರು ಇದ್ದಾರೆ. 51.96ರಷ್ಟು ಪುರುಷರ ಪ್ರಮಾಣಕ್ಕೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಶೇ. 48.04ರಷ್ಟಿದೆ.

2011ರ ಜನಗಣತಿಯ ಪ್ರಕಾರ, ಭಾರತದ ಲಿಂಗ ಅನುಪಾತವು 1000 ಪುರುಷರಿಗೆ 943 ಮಹಿಳೆಯರು ಎಂದಿತ್ತು. ಗ್ರಾಮೀಣ ಪ್ರದೇಶದಲ್ಲಿ 1000 ಪುರುಷರಿಗೆ 949 ಮಹಿಳೆಯರಿದ್ದರೆ, ನಗರ ಪ್ರದೇಶದಲ್ಲಿ 1000 ಪುರುಷರಿಗೆ 929 ಮಹಿಳೆಯರಿದ್ದರು. ಗ್ರಾಮೀಣ ಭಾರತದಲ್ಲಿ ಮಹಿಳೆಯರ ಒಟ್ಟು ಸಂಖ್ಯೆಗಿಂತ 2,18,13,264 ಹೆಚ್ಚು ಪುರುಷರು ಇದ್ದರು. ಅದೇ ವೇಳೆ ನಗರ ಪ್ರದೇಶಗಳಲ್ಲಿ ಮಹಿಳೆಯರಿಗಿಂತ 1,38,72,275 ಹೆಚ್ಚು ಪುರುಷರು ಇದ್ದರು. ಭಾರತದ ಲಿಂಗ ಅನುಪಾತವು 2001ರಲ್ಲಿ 933 ಇದ್ದದ್ದು 2011ರಲ್ಲಿ 943ಕ್ಕೆ ಸುಧಾರಿಸಿತ್ತು. 1901ರಲ್ಲಿ, ಭಾರತವು 972ರ ಅತ್ಯಧಿಕ ಲಿಂಗ ಅನುಪಾತವನ್ನು ಹೊಂದಿತ್ತು.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 1000 ಪುರುಷರಿಗೆ 1020 ಮಹಿಳೆಯರಿದ್ದಾರೆ. ಆದರೆ ನಿಜವಾಗಿಯೂ ಇಂಥದೊಂದು ಬದಲಾವಣೆ ಸಾಧ್ಯವಾಗಿದೆಯೆ? 2016ರಲ್ಲಿ ಭಾರತದ ಜನಸಂಖ್ಯೆ 129 ಕೋಟಿ ಆಗಿತ್ತು. ಇದೇ ಎನ್‌ಎಫ್‌ಎಚ್‌ಎಸ್ 2015-16ರ ಅಂದಾಜಿನ ಪ್ರಕಾರ ಲಿಂಗ ಅನುಪಾತವು 991 ಆಗಿದ್ದರೆ, ಜನಸಂಖ್ಯೆಯು 64 ಕೋಟಿ 30 ಲಕ್ಷ ಮಹಿಳೆಯರು ಮತ್ತು 64 ಕೋಟಿ 90 ಲಕ್ಷ ಪುರುಷರನ್ನು ಒಳಗೊಂಡಿರುತ್ತದೆ. 2021ರಲ್ಲಿ 136 ಕೋಟಿ ಜನಸಂಖ್ಯೆಗೆ, 1,020ರ ಲಿಂಗ ಅನುಪಾತವೆಂದರೆ, 68 ಕೋಟಿ 80 ಲಕ್ಷ ಮಹಿಳೆಯರು ಮತ್ತು 67ಕೋಟಿ 50 ಲಕ್ಷ ಪುರುಷರು ಇರಬೇಕು. ಅಂದರೆ ಕಳೆದ ಐದು ವರ್ಷಗಳಲ್ಲಿ ಪುರುಷರ ಸಂಖ್ಯೆಯಲ್ಲಿ 2.6 ಕೋಟಿ ಮಾತ್ರವೇ ಏರಿಕೆಯಾಗಿದ್ದರೆ ಮಹಿಳೆಯರ ಸಂಖ್ಯೆಯಲ್ಲಿ 4.5 ಕೋಟಿ ಏರಿಕೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳ. ಇಂಥದೊಂದು ಅಗಾಧ ವ್ಯತ್ಯಾಸವು ನಂಬಲು ಅಸಾಧ್ಯದ್ದಾಗಿ ತೋರುತ್ತದೆ.

ತಜ್ಞರು ಕೂಡ ಇದನ್ನು ಎಚ್ಚರಿಕೆಯಿಂದ ನೋಡಬೇಕೆನ್ನುತ್ತಾರೆ. ಮೊದಲನೆಯದಾಗಿ ಈ ಸಮೀಕ್ಷೆ ದೇಶದ 30 ಕೋಟಿ ಕುಟುಂಬಗಳಲ್ಲಿ ಸುಮಾರು 6,30,000 ಕುಟುಂಬಗಳನ್ನು ಮಾತ್ರ ಒಳಗೊಂಡಿದೆ. ಜನಗಣತಿಯ ಅಂಕಿಅಂಶಗಳು ದೊರೆತ ಬಳಿಕವೇ ನಿಜವಾದ ಚಿತ್ರಣವು ಸಿಗುವುದು ಸಾಧ್ಯ. ಜನಗಣತಿಯು ದೇಶದ ಸಂಪೂರ್ಣ ಜನಸಂಖ್ಯೆಯನ್ನು ಸಮೀಕ್ಷೆ ಮಾಡುವುದರಿಂದ, ಒಟ್ಟಾರೆ ಲಿಂಗ ಅನುಪಾತದ ಹೆಚ್ಚು ನಿಖರವಾದ ಚಿತ್ರಣ ಸಿಗುತ್ತದೆ ಎಂಬುದು ತಜ್ಞರ ಅಭಿಮತ. ಕಳೆದ 100 ವರ್ಷಗಳಲ್ಲಿ ನಮ್ಮ ಜನಗಣತಿಯು ಮಹಿಳೆಯರಿಗಿಂತ ಹೆಚ್ಚು ಪುರುಷರಿದ್ದಾರೆ ಎಂಬುದನ್ನೇ ಪದೇ ಪದೇ ತೋರಿಸಿದೆ ಎಂಬುದರ ಕಡೆ ಸಂಶೋಧಕರು ಗಮನ ಸೆಳೆಯುತ್ತಾರೆ.

 ದೇಶದಲ್ಲಿ ಕಡೆಯ ಬಾರಿಗೆ ನಡೆದ 2011ರ ಜನಗಣತಿಯ ಪ್ರಕಾರ, ಭಾರತದ ಲಿಂಗ ಅನುಪಾತವು 1000 ಪುರುಷರಿಗೆ 943 ಮಹಿಳೆಯರಿದ್ದರು ಎಂಬುದನ್ನೂ, 6 ವರ್ಷಗಳವರೆಗಿನ ಮಕ್ಕಳ ಲಿಂಗಾನುಪಾತವು 1000 ಹುಡುಗರಿಗೆ 918 ಹುಡುಗಿಯರು ಎಂದಿದ್ದುದನ್ನೂ ಹೇಳಿತ್ತು. ಹಾಗಾದರೆ ಕೇವಲ 10 ವರ್ಷಗಳಲ್ಲಿ ಇದೆಲ್ಲ ಪೂರ್ತಿ ಬದಲಾಗಿಹೋಯಿತೆ? ಎಂಬುದು ಪರಿಣಿತರ ಪ್ರಶ್ನೆ.

ಭಾರತವನ್ನು ಬಹಳ ಹಿಂದಿನಿಂದಲೂ ಕಾಣೆಯಾದ ಮಹಿಳೆಯರ ದೇಶ ಎಂದು ಕರೆಯಲಾಗುತ್ತದೆ. 1990ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಲಿಂಗ ಅನುಪಾತವು ಪ್ರತಿ 1,000 ಪುರುಷರಿಗೆ 927 ಮಹಿಳೆಯರು ಎಂದು ತೀರಾ ಕುಸಿದ ಪ್ರಮಾಣವನ್ನು ಉಲ್ಲೇಖಿಸುವಾಗ, 3.7 ಕೋಟಿ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು. ಹೀಗೆ ಕಾಣೆಯಾದ ಹೆಣ್ಣುಮಕ್ಕಳ ದೊಡ್ಡ ಪ್ರಮಾಣದ ಹಿಂದೆ ಭ್ರೂಣಹತ್ಯೆ, ಶಿಶುಹತ್ಯೆ, ನಿಂದನೆ, ನಿರ್ಲಕ್ಷ್ಯದಂಥ ಘೋರ ಸಂಗತಿಗಳು ಇವೆ.

ನಮ್ಮ ದೇಶದಲ್ಲಿ ಗಂಡುಮಕ್ಕಳಿಗೇ ಮೊದಲ ಆದ್ಯತೆ. ಇದು ಇತ್ತೀಚೆಗೆ ಕಡಿಮೆಯಾಗಿದೆ ಎನ್ನಿಸುತ್ತಿದ್ದರೂ ಇನ್ನೂ ಬೇರೂರಿರುವ ನಂಬಿಕೆಗಳು ಹೆಣ್ಣುಮಗುವನ್ನು ಹುಟ್ಟುವ ಮೊದಲೇ ಇಲ್ಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಂಡು ಮಗು ಕುಟುಂಬದ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತದೆ ಮತ್ತು ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುತ್ತದೆ ಎಂಬುದು, ಹೆಣ್ಣುಮಕ್ಕಳು ಇದ್ದರೆ ವರದಕ್ಷಿಣೆಗಾಗಿ ಭಾರೀ ಖರ್ಚು ಮಾಡಬೇಕಾಗುತ್ತದೆ ಎನ್ನುವಲ್ಲಿಯವರೆಗೆ ಇಂಥ ಕೆಟ್ಟ ನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕಾಣಬಹುದು.

ಈ ಹೆಣ್ಣು ವಿರೋಧಿ ನಿಲುವಿಗೆ ಬೆಂಬಲವಾಗಿ 1970ರ ದಶಕದಿಂದ ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆ ಲಭ್ಯವಾದುದರಿಂದ ಕೋಟಿಗಟ್ಟಲೆ ಹೆಣ್ಣುಗಳನ್ನು ಭ್ರೂಣಾವಸ್ಥೆಯಲ್ಲಿಯೇ ಕೊಲ್ಲಲಾಯಿತು. ಇದು ಲಿಂಗಾನುಪಾತದ ವ್ಯತ್ಯಾಸಕ್ಕೆ ತೀವ್ರ ಕಾರಣವಾಯಿತು. 1994ರಲ್ಲಿ ಲಿಂಗಪತ್ತೆ ಪರೀಕ್ಷೆಯನ್ನು ಮತ್ತು ಹೆಣ್ಣು ಭ್ರೂಣಹತ್ಯೆಯನ್ನು ನಿರ್ಬಂಧಿಸಲಾಯಿತು. ಇಷ್ಟಾಗಿಯೂ ಲಿಂಗಾಧಾರಿತ ಗರ್ಭಪಾತಗಳು ಇವತ್ತಿಗೂ ವ್ಯಾಪಕವಾಗಿ ನಡೆಯುತ್ತಲೇ ಇವೆ.

30ರಿಂದ 40 ವರ್ಷಗಳಲ್ಲಿ ಹೀಗೆ ಕೋಟಿಗಟ್ಟಲೆ ಹೆಣ್ಣುಗಳನ್ನು ಭ್ರೂಣಾವಸ್ಥೆಯಲ್ಲಿಯೇ ಇಲ್ಲವಾಗಿಸಿರುವಾಗ, 2021ರ ವೇಳೆಗೆ ನಿಜವಾದ ಜನನದ ಕೊರತೆ ಇನ್ನೂ ಹೆಚ್ಚಿರುತ್ತದೆ. ಹೀಗಿರುವಾಗ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂಬುದನ್ನು ನಂಬಲು ಹೇಗೆ ಸಾಧ್ಯ ಎಂಬುದು ಪ್ರಶ್ನೆ.

ಭಾರತದಲ್ಲಿ ಮಹಿಳೆಯರ ಜನಸಂಖ್ಯೆಯಲ್ಲಿ ತೀರಾ ಕಡಿಮೆಯಾಗುತ್ತಿರುವ ರಾಜ್ಯವೆಂದರೆ ಹರ್ಯಾಣ. ಅಂಕಿಅಂಶವು 1000 ಪುರುಷರಿಗೆ 877 ಮಹಿಳೆಯರು ಎಂದು ತೋರಿಸುತ್ತದೆ. ಪುದುಚೇರಿ ಮತ್ತು ಕೇರಳ ಇವೆರಡೇ ರಾಜ್ಯಗಳಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಹೆಚ್ಚು. ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದರೆ, ಪುದುಚೇರಿಯಲ್ಲಿ 1037 ಮಹಿಳೆಯರಿದ್ದಾರೆ. ಇದೇ ವೇಳೆ ದಿಲ್ಲಿಯಲ್ಲಿ 1000 ಪುರುಷರಿಗೆ 868 ಮಹಿಳೆಯರು ಇದ್ದರೆ, ದಮನ್ ಮತ್ತು ದಿಯುನಲ್ಲಿ ಅತಿ ಕಡಿಮೆ ಅಂದರೆ 618 ಅನುಪಾತ ಇದೆ.

ಒಕ್ಕೂಟ ಸರಕಾರದ 2020ರ ಸಮೀಕ್ಷಾ ವರದಿಯ ಪ್ರಕಾರ, ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದ್ದ ಲಿಂಗಾನುಪಾತ ಕುಸಿತ ಈಗ ದಕ್ಷಿಣ ಭಾರತದಲ್ಲಿಯೂ ಪಿಡುಗಿನಂತೆ ತಲೆದೋರುತ್ತಿದೆ. ಕರ್ನಾಟಕದಲ್ಲಿ 1000 ಗಂಡುಮಕ್ಕಳಿಗೆ 916 ಹೆಣ್ಣುಮಕ್ಕಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾವಿರಕ್ಕೆ 912 ಹೆಣ್ಣುಮಕ್ಕಳಿದ್ದರೆ, ನಗರ ಪ್ರದೇಶದಲ್ಲಿ ಇದು ತೀವ್ರ ಕುಸಿದಿದ್ದು, ಮಹಿಳೆಯರ ಸಂಖೆ 871 ಎಂದು ದಾಖಲಾಗಿದೆ.

ಹೆಣ್ಣುಮಕ್ಕಳ ವಿರುದ್ಧ ಯಾವುದೇ ತಾರತಮ್ಯವಿಲ್ಲದಿದ್ದರೆ, ಮಾದರಿ ಜನನ ಪ್ರಮಾಣದಲ್ಲಿನ ಲಿಂಗಾನುಪಾತ 1000 ಗಂಡುಮಕ್ಕಳಿಗೆ 952 ಹೆಣ್ಣುಮಕ್ಕಳು ಎಂದಿರಲಿದೆ ಎಂಬುದು ಜನಸಂಖ್ಯಾಶಾಸ್ತ್ರಜ್ಞರ ಅಂದಾಜು. ಆದರೆ ಅದಿನ್ನೂ ಸಾಧ್ಯವಾಗಿಲ್ಲ. ನಾವು ಇನ್ನೂ ಲಕ್ಷಾಂತರ ಹೆಣ್ಣುಮಕ್ಕಳನ್ನು ಕೊಲ್ಲುತ್ತಿದ್ದೇವೆ ಎಂಬುದನ್ನೇ ಇದು ತೋರಿಸುತ್ತದೆ ಎನ್ನುತ್ತಾರೆ ತಜ್ಞರು. ಇತ್ತೀಚಿನ ವರ್ಷಗಳಲ್ಲಿ, ನವಜಾತ ಹೆಣ್ಣುಮಕ್ಕಳನ್ನು ಬೀದಿಗಳಲ್ಲಿ, ನದಿ ಇಲ್ಲವೆ ಚರಂಡಿಗಳಲ್ಲಿ ಎಸೆಯಲಾಗುತ್ತಿರುವ ವರದಿಗಳನ್ನು ನೋಡುತ್ತಲೇ ಇರುತ್ತೇವೆ. ಅಕ್ರಮ ಲಿಂಗಪತ್ತೆ ಕೇಂದ್ರಗಳೂ ನಾಯಿಕೊಡೆಗಳಂತೆ ಬೆಳೆಯುತ್ತಲೇ ಇವೆ. ಮದುವೆ ವಯಸ್ಸಿಗೆ ಬರುವ ಹುಡುಗರಿಗೆ ಹೆಣ್ಣುಮಕ್ಕಳೇ ಸಿಗದಂತಾದ ಗಂಭೀರ ಸಮಸ್ಯೆಯೊಂದು, ಈ ದೇಶದಲ್ಲಿನ ಹೆಣ್ಣಿನ ಸ್ಥಿತಿಯನ್ನು ಬಿಂಬಿಸುವ ಸಂಗತಿಯೂ ಆಗಿದೆ.

ಹೆಣ್ಣನ್ನು ಹುಟ್ಟಲು ಬಿಡದೇ ಕೊಂದು, ಬಳಿಕ ತಮ್ಮ ಮಗನಿಗೆ ಮದುವೆಗಾಗಿ ಮತ್ತು ಮನೆಕೆಲಸಕ್ಕೆ ಮಾತ್ರ ಹೆಣ್ಣು ಬೇಕು ಎಂದು ಹೆಣಗಾಡುವ ನಮ್ಮ ಸಮಾಜದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.

 ಜಾಗತಿಕವಾಗಿ ನೋಡಿಕೊಂಡರೂ ನಮ್ಮ ದೇಶದಲ್ಲಿನ ಈ ಲಿಂಗಾನುಪಾತ ಸ್ಥಿತಿ ಅತಿ ಕೆಟ್ಟದ್ದಾಗಿದೆ. ಪ್ರತಿ 100 ಹುಡುಗಿಯರಿಗೆ ಸುಮಾರು 110ಕ್ಕಿಂತ ಗಂಡು ಮಕ್ಕಳು ಜನಿಸುವುದರೊಂದಿಗೆ, 2000ದಿಂದ 2020ರ ಅವಧಿಯಲ್ಲಿ ಚೀನಾ, ಅಜೆರ್ಬೈಜಾನ್, ವಿಯೆಟ್ನಾಂ ಮತ್ತು ಅರ್ಮೇನಿಯಾ ನಂತರ ಭಾರತದಲ್ಲಿ ಅತಿ ಕೆಟ್ಟ ಮಟ್ಟದಲ್ಲಿ ಪುರುಷ ಪಕ್ಷಪಾತಿ ಲಿಂಗಾನುಪಾತ ದಾಖಲಾಗಿದೆ. ಅಜೆರ್ಬೈಜಾನ್ ಮತ್ತು ಚೀನಾದಲ್ಲಿ ಇದು ಅತಿ ಹೆಚ್ಚು ಅಂದರೆ 100 ಮಹಿಳೆಯರಿಗೆ 115 ಪುರುಷರು ಇದ್ದರೆ, ಅರ್ಮೇನಿಯಾದಲ್ಲಿ 114 ಹಾಗೂ ವಿಯೆಟ್ನಾಂ, ಅಲ್ಬೇನಿಯಾ ಮತ್ತು ಭಾರತದಲ್ಲಿ 111 ಇದೆ.

Similar News