ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಕೆ ಮಾಡುವುದರ ಕುರಿತು ಕೇಂದ್ರ ಸರಕಾರ ನಕಾರ

Update: 2022-12-26 08:08 GMT

ಹೊಸ ದಿಲ್ಲಿ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದರಿಂದ ಅದಕ್ಷ ನ್ಯಾಯಾಧೀಶರ ಸೇವಾವಧಿಯೂ ವಿಸ್ತರಣೆಯಾಗುತ್ತಲ್ಲದೆ, ಅಂತಹ ಕ್ರಮದಿಂದ ಸರ್ಕಾರಿ ನೌಕರರೂ ತಮ್ಮ ನಿವೃತ್ತಿ ವಯಸ್ಸು ಏರಿಕೆಗೆ ಒತ್ತಾಯಿಸುವಂಥ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಸಂಸದೀಯ ಸಮಿತಿಗೆ ನ್ಯಾಯಾಂಗ ಇಲಾಖೆಯು ತಿಳಿಸಿದೆ ಎಂದು timesofindia.com ವರದಿ ಮಾಡಿದೆ.

ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ಏರಿಕೆಯನ್ನು ಉನ್ನತ ನ್ಯಾಯಾಲಯಗಳ ನೇಮಕಾತಿ ಸಂದರ್ಭದಲ್ಲಿ ಪಾರದರ್ಶಕ ಮತ್ತು ಉತ್ತರದಾಯಿತ್ವ ಕ್ರಮಗಳನ್ನು ಖಾತ್ರಿಗೊಳಿಸುವ ಮೂಲಕ ಜಾರಿಗೊಳಿಸಬಹುದಾಗಿದೆ ಎಂದೂ ಅದು ತಿಳಿಸಿದೆ.

ಇದಕ್ಕೂ ಮುನ್ನ, ಜುಲೈ ತಿಂಗಳಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ಅವರು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಂಸತ್ತಿಗೆ ತಿಳಿಸಿದ್ದರು. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಸುಶೀಲ್ ಮೋದಿ ನೇತೃತ್ವದ ವೈಯಕ್ತಿಕ ಕಾನೂನು, ಮತ್ತು ನ್ಯಾಯಾಂಗ ಸಂಸದೀಯ ಸಮಿತಿ ಮುಂದೆ ನ್ಯಾಯಾಂಗ ಇಲಾಖೆಯು ತನ್ನ ಪ್ರತಿಪಾದನೆಯನ್ನು ಮಂಡಿಸಿದೆ.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ಏರಿಕೆಯೊಂದಿಗೆ ನ್ಯಾಯಾಂಗ ಪ್ರಕ್ರಿಯೆ ಮತ್ತು ಸುಧಾರಣೆಗಳ ಕುರಿತ ವಿಸ್ತೃತ ಪ್ರತಿಪಾದನೆಯನ್ನು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಮಂಡಿಸಿದೆ. "ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದರಿಂದ ಕೆಲವು ನಿರ್ದಿಷ್ಟ ಅರ್ಹವಲ್ಲದ ಪ್ರಕರಣಗಳಲ್ಲಿ ಅದಕ್ಷ ಮತ್ತು ದಕ್ಷತೆಯ ಕೊರತೆ ಹೊಂದಿರುವ ನ್ಯಾಯಾಧೀಶರ ಸೇವಾವಧಿ ವಿಸ್ತರಣೆಗೊಳ್ಳುವಂತಾಗುತ್ತದೆ" ಎಂದು ಇಲಾಖೆ ಪ್ರತಿಪಾದಿಸಿದೆ.

ಇದರೊಂದಿಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವುದು ಮತ್ತು ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ಮೂಲಕ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ಏರಿಕೆ ಪ್ರಸ್ತಾವವನ್ನು ಪರಿಗಣಿಸಬಹುದಾಗಿದೆ ಎಂದೂ ನ್ಯಾಯಾಂಗ ಇಲಾಖೆಯು ತನ್ನ ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಿದೆ.

Similar News