ʻಸಲಿಂಗಿ ವಿವಾಹ ಕುರಿತು ಬಿಜೆಪಿ ಸಂಸದ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕುʼ: ಅಕ್ಕೈ ಪದ್ಮಶಾಲಿಯಿಂದ ಬಹಿರಂಗ ಪತ್ರ

Update: 2022-12-26 12:47 GMT

ಹೊಸದಿಲ್ಲಿ: ಸಲಿಂಗಿ ವಿವಾಹಗಳನ್ನು ಕಾನೂನುಬದ್ಧಗೊಳಿಸುವುದನ್ನು ವಿರೋಧಿಸಿ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್‌ ಕುಮಾರ್‌ ಮೋದಿ ಅವರು ಕ್ಷಮೆಯಾಚಿಸಬೇಕೆಂದು ಕೋರಿ ತೃತೀಯ ಲಿಂಗಿಗಳ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಬಹಿರಂಗ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ  ಮಾತನಾಡಿದ್ದ ಸುಶೀಲ್‌ ಕುಮಾರ್‌ ಮೋದಿ, ಸಲಿಂಗಿ ವಿವಾಹಗಳನ್ನು ಉತ್ತೇಜಿಸುವ ಮೂಲಕ ಎಡ-ಉದಾರವಾದಿ ಹೋರಾಟಗಾರರು ಭಾರತದಲ್ಲಿ ಪಾಶ್ಚಿಮಾತ್ಯ ಮೌಲ್ಯಗಳನ್ನು ಹೇರಲು ಬಯಸುತ್ತಾರೆ ಎಂದು ಹೇಳಿದ್ದರಲ್ಲದೆ ಭಾರತದ ಸಾಂಸ್ಕೃತಿಕ ಅಸ್ಮಿತೆಯನ್ನು ಬಾಧಿಸುವ ಸಲಿಂಗಿ ವಿವಾಹಗಳನ್ನು ಅನುಮತಿಸದಂತೆ ನ್ಯಾಯಾಂಗವನ್ನು ಕೋರಿದ್ದರು.

ಇದಕ್ಕೆ ಬಹಿರಂಗ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಅಕ್ಕೈ ಪದ್ಮಶಾಲಿ, ನ್ಯಾಯಾಲಯಗಳು ಸಂವಿಧಾನದ ಆಧಾರದಲ್ಲಿ ನಿರ್ಧರಿಸುತ್ತವೆಯೇ ಹೊರತು ಸಾಂಸ್ಕೃತಿಕ ನೈತಿಕತೆಯ ಮೇಲಲ್ಲ ಎಂದರು. ದೇಶದ ತೃತೀಯ ಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಅವರ ಸಮಾನತೆ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂವಿಧಾನದ ಆಧಾರದಲ್ಲಿ ಕೋರ್ಟುಗಳು ನಿರ್ಧರಿಸುತ್ತವೆ ಎಂಬ ಬಗ್ಗೆ ತಮಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Similar News