ಕೋವಿಡ್ ಭೀತಿ ಹಿನ್ನೆಲೆ: ದೇಶಾದ್ಯಂತ ಅಣಕು ಕಾರ್ಯಾಚರಣೆ

ದಿಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ

Update: 2022-12-27 07:39 GMT

ಹೊಸದಿಲ್ಲಿ: ಒಂದು ವೇಳೆ ಕೋವಿಡ್ ಪ್ರಕರಣಗಳು ಉಲ್ಬಣಗೊಂಡರೆ, ಅಂತಹ ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡಿರುವ ಸನ್ನದ್ಧ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಇಂದು ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ಏರ್ಪಡಿಸಲಾಗಿದೆ. ಈ ತಯಾರಿ ಸಂಬಂಧಪಟ್ಟ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಭೇಟಿ ಪರಿಶೀಲಿಸಿದರು. ಇದಕ್ಕೂ ಮುನ್ನ ಸೋಮವಾರ ಭಾರತೀಯ ವೈದ್ಯಕೀಯ ಒಕ್ಕೂಟದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಇಂತಹ ತಯಾರಿಗಳಿಂದ ನಮ್ಮ ಕಾರ್ಯನಿರ್ವಹಣೆಯ ಸನ್ನದ್ಧತೆಗೆ ನೆರವಾಗಲಿದೆ. ಯಾವುದಾದರೂ ಕೊರತೆ ಕಂಡು ಬಂದಲ್ಲಿ ಅವನ್ನು ತುಂಬಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಇದೇ ವೇಳೆ ನಮ್ಮ ಸಾರ್ವಜನಿಕ ಆರೋಗ್ಯ ಸ್ಪಂದನೆಯು ಬಲಿಷ್ಠಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು.

ಈ ಅಣಕು ಪ್ರದರ್ಶನವು ಎಲ್ಲ ಜಿಲ್ಲೆಗಳಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳು, ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ, ಆಮ್ಲಜನಕ ನೆರವು ಹೊಂದಿರುವ ಹಾಸಿಗೆಗಳು, ತುರ್ತು ಚಿಕಿತ್ಸಾ ಘಟಕಗಳಲ್ಲಿನ ಹಾಸಿಗೆಗಳು ಮತ್ತು ವೆಂಟಿಲೇಟರ್ ನೆರವು ಹೊಂದಿರುವ ಹಾಸಿಗೆಗಳಂಥ ಮಾನದಂಡಗಳತ್ತ ಗಮನ ಹರಿಸಲಿದೆ.

ಇದರೊಂದಿಗೆ ಕೋವಿಡ್ ನಿರ್ವಹಣೆಯಲ್ಲಿ ತರಬೇತುಗೊಂಡಿರುವ ವೈದ್ಯಕೀಯ ವೃತ್ತಿಪರರ ಸಂಪನ್ಮೂಲ ಲಭ್ಯತೆ, ವೆಂಟಿಲೇಟರ್ ನಿರ್ವಹಣೆಯಲ್ಲಿ ತರಬೇತುಗೊಂಡಿರುವ ಆರೋಗ್ಯ ಸೇವಾ ವೃತ್ತಿಪರರ ಲಭ್ಯತೆ ಮತ್ತು ವೈದ್ಯಕೀಯ ಆಮ್ಲಜನಕ ಘಟಕಗಳ ನಿರ್ವಹಣಾ ಸ್ಥಿತಿಗತಿ ಕುರಿತೂ ಈ ಅಣಕು ಪ್ರದರ್ಶನ ಗಮನ ಹರಿಸಲಿದೆ.

ಕಳೆದ ವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಂದು (ಮಂಗಳವಾರ) ಅಣಕು ಪ್ರದರ್ಶನ ಹಮ್ಮಿಕೊಳ್ಳುವಂತೆ ಸೂಚಿಸಿದ್ದರು.

ಇದಕ್ಕೂ ಮುನ್ನ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಾಗ, ಮುಖ್ಯವಾಗಿ ಎರಡನೆ ಅಲೆ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ ದೊರೆಯದೆ ರೋಗಿಗಳು ಉಸಿರಾಟ ಸಮಸ್ಯೆಗೊಳಗಾದ ಹಾಗೂ ಆಸ್ಪತ್ರೆಗಳಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಾಸಿಗೆ ದೊರೆಯದೆ ಅಂಥವರ ಸಂಬಂಧಿಕರು ಪರಡಾಡಿದ ಸನ್ನಿವೇಶಗಳು ವ್ಯಾಪಕವಾಗಿ ವರದಿಯಾಗಿದ್ದವು.

Similar News