ಚೀನಾದ ಕೋವಿಡ್ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಜಾಗತಿಕ ಸಂದೇಹ‌

Update: 2022-12-27 17:28 GMT

ಬೀಜಿಂಗ್,ಡಿ.27: ಚೀನಾದಲ್ಲಿ ಕೋವಿಡ್19 ಸಾಂಕ್ರಾಮಿಕದ ಹಾವಳಿ ಹಠಾತ್ತನೇ ಉಲ್ಬಣಿಸಿರುವುದು, ಆ ದೇಶವು ಉತ್ಪಾದಿಸಿರುವ ಲಸಿಕೆಗಳಲ್ಲಿ ಪರಿಣಾಮಕಾರಿತ್ವದ ಕೊರತೆ ಇರುವುದನ್ನು ಜಗಜ್ಜಾಹೀರುಗೊಳಿಸಿದೆ. ಅಲ್ಲದೆ ಬೀಜಿಂಗ್ ನಿಂದ ಲಸಿಕೆಗಳನ್ನು ಪಡೆದುಕೊಂಡಿರುವ ದೇಶಗಳಿಗೆ ಆತಂಕವನ್ನುಂಟು ಮಾಡಿದೆ ಎಂದು ‘ಟಿಬೆಟ್ ಪ್ರೆಸ್’ ವರದಿ ಮಾಡಿದೆ.

ತಾನು ಉತ್ಪಾದಿಸಿರುವ ಲಸಿಕೆಗಳ ಮಾರಾಟವನ್ನು ಹೆಚ್ಚಿಸುವುದಕ್ಕಾಗಿ ಅವುಗಳ ಅಡ್ಜಪರಿಣಾಮಗಳ ಕುರಿತ ದತ್ತಾಂಶಗಳನ್ನು ಚೀನಾವು ತಿರುಚಿದೆಯೆಂಬ ವರದಿಗಳು ಬಹಿರಂಗವಾದ ಬಳಿಕ ಎಚ್ಚೆತ್ತ ಟರ್ಕಿ ಸರಕಾರವು, ತಾನು ಖರೀದಿಸಿದ್ದ ಚೀನಿ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಪರಿಶೀಲನೆಗೆ ಆದೇಶಿಸಿದೆ. 2020ರ ಡಿಸೆಂಬರ್ ನಲ್ಲಿ ಇಂಡೊನೇಶ್ಯ ಹಾಗೂ ಬ್ರೆಝಿಲ್ ದೇಶಗಳು ಕ್ರಮವಾಗಿ ಚೀನಿ ಲಸಿಕೆಗಳು ಶೇ.97 ಹಾಗೂ ಶೇ.98ರಷ್ಟು ಪರಿಣಾಮಕಾರಿಯೆಂದು ವರದಿ ಮಾಡಿದ್ದವು.

ಆದರೆ 2021ರಲ್ಲಿ ಇಂಡೊನೇಶ್ಯ ಹಾಗೂ ಬ್ರೆಝಿಲ್, ಚೀನಿ ಲಸಿಕೆಗಳ ಪರಿಣಾಮಕಾರಿತ್ವವನ್ನು ಕ್ರಮವಾಗಿ ಶೇ.65 ಹಾಗೂ ಶೇ.50.4ಕ್ಕೆ ಇಳಿಸಿದ್ದವು. ಇದೀಗ ಉಭಯದೇಶಗಳು ಚೀನಾದ ಕೋವಿಡ್ ಲಸಿಕೆಗಳ ಪ್ರಮುಖ ಅಡ್ಡಪರಿಣಾಮಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.

ಚೀನಾದಲ್ಲಿ ಕೋವಿಡ್ 19 ಪ್ರಕರಣಗಳು ಇತ್ತೀಚೆಗೆ ಮತ್ತೆ ಉಲ್ಬಣಗೊಂಡ ಬಳಿಕ ಥೈಲ್ಯಾಂಡ್ ಹಾಗೂ ಸಿಂಗಾಪುರ ದೇಶಗಳ ಚೀನಿ ಲಸಿಕೆಗಳ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಬದಲಿಗೆ ಅಸ್ಟ್ರಾಝೆನೆಕಾ ಹಾಗೂ ಫೈಝರ್ ಉತ್ಪಾದಿಸಿರುವ ಲಸಿಕೆಗಳ ಬಳಕೆಯನ್ನು ಆರಂಭಿಸಿದೆಯೆಂದು ಟಿಬೆಟ್ ಪ್ರೆಸ್ ವರದಿ ಮಾಡಿದೆ.

2021ರೊಳಗೆ ಚೀನಾವು ತನ್ನ ಪೌರರಿಗೆ ಒಟ್ಟು 240 ಕೋಟಿ ಕೋವಿಡ್ ಲಸಿಕೆಯ ಡೋಸ್ ಗಳನ್ನು ನೀಡಿದೆ ಮತ್ತು ಅದು 2022ರೊಳಗೆ 130 ಕೋಟಿಗೂ ಅಧಿಕ ಡೋಸ್ ಗಳನ್ನು ವಿತರಿಸಿದೆ. 2022ರೊಳಗೆ ಚೀನಾದ ಸಿನೋಫಾರ್ಮ್ ಸಂಸ್ಥೆಯು ಜಗತ್ತಿನಾದ್ಯಂತ 350 ಕೋಟಿ ಕೋವಿಡ್ ಡೋಸ್ ಗಳನ್ನು ವಿತರಿಸಿದೆ.

ಚೀನಾ ನಿರ್ಮಿತ ಕೋವಿಡ್ ಲಸಿಕೆಗಳನ್ನು ಬಹುತೇಕವಾಗಿ ಇಂಡೊನೇಶ್ಯ, ಬ್ರೆಝಿಲ್, ಪಾಕಿಸ್ತಾನ, ಟರ್ಕಿ, ಇರಾನ್, ಫಿಲಿಪ್ಪೀನ್ಸ್, ಮೊರಾಕ್ಕೊ, ಥೈಲ್ಯಾಂಡ್, ಅರ್ಜೆಂಟೀನಾ, ವೆನೆಝುವೆಲಾ, ಕಾಂಬೊಡಿಯಾ, ಶ್ರೀಲಂಕಾ, ಚಿಲಿ, ಮೆಕ್ಸಿಕೊ ಹಾಗೂ ಬಾಂಗ್ಲಾದೇಶ ಆಮದು ಮಾಡಿಕೊಂಡಿವೆಯೆಂದು ಟಿಬೆಟ್ ನ್ಯೂಸ್ ವರದಿ ಹೇಳಿದೆ.

Similar News