ಜ.1ರಂದು ಫ್ರೀಡಂ ಪಾರ್ಕ್‍ನಲ್ಲಿ ಕೋರೆಗಾಂವ್ ವಿಜಯೋತ್ಸವ

Update: 2022-12-27 18:07 GMT

ಬೆಂಗಳೂರು, ಡಿ.27: ಭೀಮ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಜ.1ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಧ್ವಜವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಸ್ವಾಭಿಮಾನ ಒಕ್ಕೂಟದ ಮುಖಂಡ ಬಿ.ಗೋಪಾಲ್ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ ಸೇನೆಯ ನಾಯಕ ಸಿದ್ದನಾಕನ ಕೇವಲ 500 ಜನರ ತಂಡದೊಂದಿಗೆ ಭೀಮಾನದಿ ದಂಡೆಯ ಕೋರೆಗಾಂವ್ ಎಂಬ ಸ್ಥಳದಲ್ಲಿ 28 ಸಾವಿರ ಸೇನೆಯ ಪೇಶ್ವೆಗಳನ್ನು ಸೋಲಿಸಿದ್ದರು. ಈ ವಿಜಯೋತ್ಸವವನ್ನು ದೇಶದ ವಿವಿಧ ಭಾಗಗಳಲ್ಲಿ ದಲಿತ ಸಮುದಾಯಗಳು ವಿಜೃಂಭಣೆಯಿಂದ ಆಚರಣೆ ಮಾಡುತ್ತಿವೆ ಎಂದು ಹೇಳಿದರು. 

ಕೋರೆಗಾಂವ್ ವಿಜಯೋತ್ಸವವನ್ನು ಮೊದಲ ಬಾರಿಗೆ ದಲಿತ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಚರಣೆ ಮಾಡುತ್ತಿವೆ. ಇದರ ಭಾಗವಾಗಿ ನಗರದ ಸಂಗೊಳ್ಳಿ ರಾಯಣ್ಣ ರೈಲೈ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ಬೃಹತ್ ಪಥಸಂಚಲನೆಯನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ವಿಜಯೋತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

ಆರೆಸ್ಸೆಸ್ ಹಾಗೂ ಬಿಜೆಪಿ ದೇಶದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಜಾರಿ ಮಾಡುವ ಹುನ್ನಾರ ನಡೆಸುತ್ತಿವೆ. ದಲಿತರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಿದ್ದರೂ, ಸರಕಾರ ದಲಿತ ಸಮುದಾಯಗಳಿಗೆ ಭದ್ರತೆಯನ್ನು ನೀಡುತ್ತಿಲ್ಲ. ಅಲ್ಲದೆ, ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದೆ. ಇದರ ವಿರುದ್ಧ ದಲಿತ ಸಮುದಾಯಗಳು ಒಗ್ಗೂಡಬೇಕು ಎಂದು ಅವರು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಶಂಕರ್ ರಾಮಲಿಂಗಯ್ಯ, ನಾಗರಾಜ, ಕೊಡಂದರಾಮ ಮತ್ತಿತರರು ಉಪಸ್ಥಿತರಿದ್ದರು. 

Similar News