×
Ad

ನ್ಯಾಯಾಂಗದ ತನ್ನ ಮಿತಿಯನ್ನು ಮೀರಕೂಡದು: ಕಾನೂನು ಸಚಿವ ಕಿರಣ್ ರಿಜಿಜು

Update: 2022-12-28 23:05 IST

ಹೊಸದಿಲ್ಲಿ, ಡಿ.28: ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ಇತರ ಅಂಗಗಳ ಅಧಿಕಾರವನ್ನು ಅತಿಕ್ರಮಿಸಲು ಯತ್ನಿಸುವುದಿಲ್ಲವೆಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ. ಆದರೆ ನ್ಯಾಯಾಂಗ ಕೂಡಾ ಅದರ ಮಿತಿಯೊಳಗಿರಬೇಕೆಂದು ಅವರು ಪ್ರತಿಪಾದಿಸಿದ್ದಾರೆ.

‘ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಂದೆ ಇರುವ ನೂತನ ಸವಾಲುಗಳು ಹಾಗೂ ಅವಕಾಶಗಳು ’’ ಕುರಿತಂತೆ ಅಖಿಲ ಭಾರತೀಯ ಅಧಿವಕ್ತಾ (ನ್ಯಾಯವಾದಿ) ಪರಿಷದ್ ನ 16ನೇ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘‘ನಾವು (ಸರಕಾರ)ನಮ್ಮ ಮಿತಿಗಳನ್ನು ಮೀರುವುದಿಲ್ಲ ಹಾಗೂ ನ್ಯಾಯಾಂಗ ಕೂಡಾ ಅದರ ಸಾಂವಿಧಾನಿಕ ಮಿತಿಯಲ್ಲಿರಬೇಕಾಗಿದೆ ಮತ್ತು ಆಗ ಸುದ್ದಿ ಮಾಧ್ಯಮಗಳಿಗೆ ಮಸಾಲೆ ದೊರೆಯುವುದಿಲ್ಲ. ಆದರೆ ಒಂದು ವೇಳೆ ನೀವು ನಿಮ್ಮ ಮಿತಿಯನ್ನು ಮೀರಿದಲ್ಲಿ,ನೀವು ಮಾಧ್ಯಮಗಳಿಗೆ ಮೇವು ನೀಡುತ್ತೀರಿ’’ ಎಂದು ರಿಜಿಜು ತಿಳಿಸಿದರು.
 ದೇಶದಲ್ಲಿ ನ್ಯಾಯಾಂಗ ನೇಮಕಾತಿಗಳ ಪ್ರಕ್ರಿಯೆ ಕುರಿತು ಕೇಂದ್ರ ಸರಕಾರ ಹಾಗೂ ನ್ಯಾಯಾಂಗದ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವ ನಡುವೆಯೇ ರಿಜಿಜು ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ನ್ಯಾಯಾಂಗವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

‘‘ಕಾರ್ಯಾಂಗ ಹಾಗೂ ನ್ಯಾಯಾಂಗಗಳ ನಡುವೆ ತಿಕ್ಕಾಟ ನಡೆದಿರುವುದನ್ನು ನೀವು ಕೇಳಿದ್ದೀರಿ. ಕೇಂದ್ರ ಸರಕಾರವು ನ್ಯಾಯಾಂಗವನ್ನು ತನ್ನ ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದೆಯೆಂಬ ಮಾತುಗಳನ್ನು ನೀವು ಕೇಳುತ್ತಿದ್ದೀರಿ. ಕೆಲವು ರಾಜಕೀಯ ಪಕ್ಷಗಳು ಇಂತಹ ಹೇಳಿಕೆಗಳನ್ನು ನೀಡುತ್ತಿವೆ ಹಾಗೂ ಕೆಲವೊಮ್ಮೆ ಸುದ್ದಿವಾಹಿನಿಗಳು ತಮ್ಮ ಸುದ್ದಿಗಳಿಗೆ ಮಸಾಲೆ ಬೆರೆಸುವ ಉದ್ದೇಶದಿಂದ ಹೀಗೆ ಮಾಡುತ್ತವೆ. ಆದರೆ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದೆ ಹಾಗೂದೇಶವು ಸಂವಿಧಾನದಿಂದ ನಡೆಯುತ್ತಿದೆ ಎಂದು ಪ್ರಧಾನಿ ಮೋದಿಯವರು ಯಾವತ್ತಿಗೂ ಹೇಳುತ್ತಲೇ ಬಂದಿದ್ದಾರೆ ಎಂದರು.
ಆದಾಗ್ಯೂ ನ್ಯಾಯಾಧೀಶರುಗಳು ಸಾರ್ವಜನಿಕರಿಗೆ ಉತ್ತರದಾಯಿಗಳಾಗಿದ್ದಾರೆ ಎಂದು ಅಭಿಪ್ರಾಯಿಸಿದರು. 

Similar News