ಕಾವ್ಯವನ್ನೇ ಬದುಕಿದ್ದ ಕುವೆಂಪು ಅವರನ್ನು ನೆನೆಯುತ್ತ...

ಇಂದು ರಾಷ್ಟ್ರಕವಿ ಕುವೆಂಪು ಜನ್ಮದಿನ

Update: 2022-12-29 05:55 GMT

ಇಡೀ ಭಾರತೀಯ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲೇ ಮುಖ್ಯ ಹೆಸರುಗಳಲ್ಲೊಂದಾದ ಕುವೆಂಪು ಅವರು ತಮ್ಮ ಹುಟ್ಟೂರು ಮಲೆನಾಡಿನ ಮಾನಸದಿಂದಲೂ ಮರೆಯಾದಂತಿರುವುದಕ್ಕೆ ವಿವರಣೆ ಬೇಕಿಲ್ಲ. ಕೆಲವು ಮೂರ್ತ ರೂಪದ ಚಿತ್ರಗಳನ್ನು ಬಿಟ್ಟರೆ ಮಲೆನಾಡಿಗರ ಅಂತಃಕರಣದೊಳಗೆ ಕವಿಶೈಲವಿದ್ದಂತಿಲ್ಲ. ಹಲವು ಹೋರಾಟಗಳು ರೂಪುಗೊಂಡಿದ್ದ ಇಡೀ ಮಲೆನಾಡಿನ ವಾತಾವರಣವನ್ನು ಇವತ್ತು ಯಾವುದು ಆಳುತ್ತಿದೆ, ಅಲ್ಲಿನ ರಾಜಕೀಯ ಏನು ಎಂಬುದನ್ನು ಗಮನಿಸಿದರೂ ಇದು ಗೊತ್ತಾಗುತ್ತದೆ.

ಪ್ರಕೃತಿಯ ಮಡಿಲಿಂದ ಮತ್ತೆ ಮತ್ತೆ ಕಾವ್ಯವನ್ನು ಮೊಗೆದ ಕವಿ ಕುವೆಂಪು. ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು. ಪ್ರಕೃತಿಯ ಸಮೀಪದಲ್ಲಿ ಕುವೆಂಪು ಕಂಡಿದ್ದು ರಮ್ಯತೆಯನ್ನು ಮಾತ್ರ ಅಲ್ಲ; ವಾಸ್ತವವನ್ನು ಧ್ಯಾನಿಸುವ ಶಿವತ್ವದ ಅನುಭೂತಿಯನ್ನೂ ಪಡೆದರು. ಶಿವನಿಲ್ಲದೆ ಸೌಂದರ್ಯವೆ, ಶಿವ ಕಾಣದೆ ಕವಿ ಕುರುಡನೊ ಎಂಬ, ಒಂದೆಡೆಯಿಂದ ಆಧ್ಯಾತ್ಮಿಕವೂ ಇನ್ನೊಂದೆಡೆಯಿಂದ ವೈಚಾರಿಕವೂ ಆದ ಅನುಸಂಧಾನವನ್ನು ಮುಟ್ಟಿದರು. ಇದೊಂದು ಅಪರೂಪದ ತಾದಾತ್ಮ್ಯ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ಕುವೆಂಪು, ನೀರೆಲ್ಲವೂ ತೀರ್ಥ ಎಂದು ಕಾಣುತ್ತಾರೆ. ಆ ಭಾವವೇ ಜೀವ ಪಡೆದಂತಿರುವುದು ಅವರ ತೇನವಿನಾ ಕವಿತೆ.

‘‘ತೇನವಿನಾ ತೇನವಿನಾ

ತೃಣಮಪಿ ನ ಚಲತಿ

ತೇನವಿನಾ’’

ಕಣ್ಣಿಗೆ ಕಂಡರೂ ಕಂಡು ಮುಗಿಯದ, ಅನಂತವೇ ತಾನಾದ ಪ್ರಕೃತಿಯು ಆಖೈರು ಸತ್ಯ. ಅದರ ಭಾಗವಾಗಿರುವ ನಾವು ಅದರ ಭಾವವೂ ಆಗಿ ಕ್ರಿಯಾಶೀಲರಾಗಬೇಕು. ಹೀಗೆ ಆಗುವುದಕ್ಕೆ ಸ್ವಮಮಕಾರವನ್ನು ಮೀರುವ ಅರಿವಿನ ಧೈರ್ಯ ಬೇಕಿರುತ್ತದೆ, ಶ್ರದ್ಧೆ ಬೇಕಿರುತ್ತದೆ ಮತ್ತು ಅರ್ಪಿಸಿಕೊಳ್ಳುವಿಕೆ ಅಗತ್ಯವಾಗುತ್ತದೆ.

ರವಿಗಿಲ್ಲದ ಭಯ ಶಶಿಗಿಲ್ಲದ ಭಯ

ತಾರಾ ನಿವಹಕೆ ಇರದ ಭಯ

ನಿನಗೇತಕೆ ಬಿಡು ಅಣು ಶ್ರದ್ಧೆಯನಿಡು

ನಿನ್ನನೆ ನೈವೇದ್ಯವ ನೀಡು

ಆನಂತರದ ಅನುಭೂತಿಯಲ್ಲಿ ವ್ಯಕ್ತವಾಗುವುದು ಅಂತರ್ಮುಖಿ ಶಕ್ತಿ.

ಎಲ್ಲೆಲ್ಲಿಯು ಕೈ ಎಲ್ಲೆಲ್ಲಿಯು ಕಾಲ್

ಎಲ್ಲೆಲ್ಲಿಯು ಕಣ್ ತಾನಾದ

ಸತ್ ಚಿತ್ ಶಕ್ತಿಯ ಆನಂದವಿರಲ್

ಬಿಡು ಏತಕೆ ನಿನಗೆ ವಿಷಾದ

ಕುವೆಂಪು ಒಂದು ಕಡೆ ಬರೆಯುತ್ತಾರೆ:

ಎಲ್ಲಾ ದೇವಸ್ಥಾನಗಳಲ್ಲಿಯೂ ವಿಗ್ರಹಗಳಿವೆ, ಸ್ವರಮೇಳವಿದೆ, ಹೂಮಾಲೆಗಳಿವೆ, ಗೋಪುರಗಳಿವೆ, ಧರ್ಮಶಾಸ್ತ್ರಗಳಿವೆ, ಶಾಸನಗಳಿವೆ, ಅರ್ಚಕರಿದ್ದಾರೆ. ಆದರೆ ಯಾವ ಗುಡಿಯಲ್ಲಿ ಕಡಲಿನಂತಹ ಪಂಚಪಾತ್ರೆ ಇದೆ? ಆಕಾಶದಂತಹ ಗೋಪುರವಿದೆ? ಸೂರ್ಯ ಚಂದ್ರ ತಾರಕೆಗಳಂತಹ ದೀಪಗಳಿವೆ? ಮಾನವರಂಥ ಸಜೀವರಾದ, ಪ್ರೇಮಮಯರಾದ,, ಸಮಯಕ್ಕೊದಗುವ ವಿಗ್ರಹಗಳಿವೆ? ವಿಹಂಗಮ ಗಾನಕ್ಕೆ ಸರಿಸಾಟಿಯಾದ ಸ್ವರಮೇಳವು ಯಾವ ದೇವರ ನಿಲಯದಲ್ಲಿದೆ? ವನಮಾಲೆಗಿಂತಲೂ ದಿವ್ಯವಾದ ಹೂಮಾಲೆ ಯಾವುದಿರುವುದು? ಹೃದಯದಲ್ಲಿ ಬರೆದ ಧರ್ಮಶಾಸ್ತ್ರಕ್ಕಿಂತಲೂ ಉತ್ಕೃಷ್ಟವಾದ ಧರ್ಮಶಾಸ್ತ್ರವಿದೆಯೇ? ಹೊಳೆ ತೊರೆ ಕೆರೆಗಳ ನಿರ್ಮಲವಾದ ಅಗ್ರೋದಕಕ್ಕಿಂತಲೂ ದಿವ್ಯವಾದ ತೀರ್ಥ ಬೇರೊಂದಿದೆಯೇ?

ಕುವೆಂಪು ಮಾತುಗಳು ಅವರ ಕಾವ್ಯದ್ದೇ ಅಂತರಂಗ. ಜಂಗಮ ಗುಣವನ್ನು ನಿರಾಕರಿಸುತ್ತ ಸ್ಥಾವರಕ್ಕೆ ಜೋತುಬೀಳುತ್ತಿರುವ ಈ ಹೊತ್ತಿನಲ್ಲಿ, ಮಾನವೇತಿಹಾಸದ ಮಜಲುಗಳ ಕಥನದೊಡನೆ ಕೂಡಿಸಿಕೊಂಡು ಕುವೆಂಪು ಕವಿತೆಯನ್ನು ನೋಡಬೇಕೆನಿಸುತ್ತದೆ. ಇಂದಿನ ಮನಃಸ್ಥಿತಿಯೆದುರು, ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ, ಆಗು ನೀ ಅನಿಕೇತನ, ನಿರಂಕುಶಮತಿಗಳಾಗಿ ಎಂಬುದೆಲ್ಲ ಮತ್ತೆ ಮಾರ್ದನಿಸಬೇಕು ಮತ್ತು ಅದು ಮಾರ್ದನಿಸುವಲ್ಲಿ ನುಡಿಗೊಳ್ಳುವುದು ತೇನವಿನಾ ಎಂಬ ದನಿಯೇ.

ಪೂಜಿಸುವುದನ್ನು ಮೀರಿ ಪ್ರಶ್ನಿಸುವ ಪರಿಪಾಠವನ್ನು ಪ್ರೇರೇಪಿಸಿದವರು ಕುವೆಂಪು. ಜಡ್ಡುಗಟ್ಟಿದ ವ್ಯವಸ್ಥೆಯನ್ನು ವಿರೋಧಿಸಿದ ಸೌಮ್ಯ ಸ್ವರೂಪಿಯೊಬ್ಬನ ಕಾಣ್ಕೆಗಳಂತೆ ನಮ್ಮೆದುರು ಅವರ ಕೃತಿಗಳಿವೆ. ಕುವೆಂಪು ಅವರನ್ನು ನಾವು ಕಾಣಬೇಕಾದ, ಕಂಡುಕೊಳ್ಳಬೇಕಾದ ಬಗೆಯೂ ಭಾವುಕತೆಯನ್ನು ದಾಟಿದ್ದಾಗಿರಬೇಕು. ಅದು ಭಾವುಕತೆ ಮಾತ್ರವೇ ಆದರೆ, ಅವರ ಅಂಥ ಕೃತಿಗಳನ್ನು ಒಳಗೊಳ್ಳದೆ ಪೂಜೆಗಿಟ್ಟಂತಾಗುವ ಥರದ ಅಪಾಯವೂ ಹೌದು.

ಈಗಾಗಲೇ ಇಂಥ ಅಪಾಯದ ಹಲವು ನೆಲೆಗಳನ್ನು ನಾವು ಗ್ರಹಿಸಬಹುದು. ಇಡೀ ಭಾರತೀಯ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲೇ ಮುಖ್ಯ ಹೆಸರುಗಳಲ್ಲೊಂದಾದ ಕುವೆಂಪು ಅವರು ತಮ್ಮ ಹುಟ್ಟೂರು ಮಲೆನಾಡಿನ ಮಾನಸದಿಂದಲೂ ಮರೆಯಾದಂತಿರುವುದಕ್ಕೆ ವಿವರಣೆ ಬೇಕಿಲ್ಲ. ಕೆಲವು ಮೂರ್ತ ರೂಪದ ಚಿತ್ರಗಳನ್ನು ಬಿಟ್ಟರೆ ಮಲೆನಾಡಿಗರ ಅಂತಃಕರಣದೊಳಗೆ ಕವಿಶೈಲವಿದ್ದಂತಿಲ್ಲ. ಹಲವು ಹೋರಾಟಗಳು ರೂಪುಗೊಂಡಿದ್ದ ಇಡೀ ಮಲೆನಾಡಿನ ವಾತಾವರಣವನ್ನು ಇವತ್ತು ಯಾವುದು ಆಳುತ್ತಿದೆ, ಅಲ್ಲಿನ ರಾಜಕೀಯ ಏನು ಎಂಬುದನ್ನು ಗಮನಿಸಿದರೂ ಇದು ಗೊತ್ತಾಗುತ್ತದೆ.

ಧಾರ್ಮಿಕತೆ ಮತ್ತು ರಾಜಕಾರಣದ ಮುಖಾಂತರ ಬಿಂಬಿತವಾಗುವ ಚಹರೆಯನ್ನು ನೆನಪಿಟ್ಟುಕೊಳ್ಳುವ ಸನ್ನಿವೇಶ ಇವತ್ತಿನದು. ಇಂತಹ ಸನ್ನಿವೇಶದಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ನಾಯಕನಂತಿರುವ ಕುವೆಂಪು ಅವರು ಅಪರಿಚಿತ ಅಥವಾ ಅಪ್ರಸ್ತುತವಾಗುತ್ತಿರುವುದು ಕಟು ಸತ್ಯವಾದರೂ ಅನಿರೀಕ್ಷಿತವೇನೂ ಅಲ್ಲ. ಯಾಕೆಂದರೆ, ಚರಿತ್ರೆಯನ್ನು ಕಟ್ಟಿದವರ ಕಥನಗಳು, ಚರಿತ್ರೆಯನ್ನು ತಮಗೆ ಅನುಕೂಲಸಿಂಧುವಾಗಿ ಬದಲಿಸಿಕೊಳ್ಳುವವರಿಗೆ ಬೇಡವಾಗಿವೆ.

ಆದರೆ, ಇಂತಹ ಆತಂಕದ ಸನ್ನಿವೇಶಗಳೇ ಕುವೆಂಪು ಅವರನ್ನು ಭಾವುಕ ನೆಲೆಯಲ್ಲಿ ನೋಡುವಂತೆ ಮಾಡುವ ಅಪಾಯವನ್ನೂ ತಂದೊಡ್ಡಿವೆ. ಆದರೆ ಇಂತಹ ತವಕಗಳು ನಮ್ಮ ತಲ್ಲಣಗಳನ್ನು ಇನ್ನಷ್ಟಾಗಿಸಬಲ್ಲವೇ ಹೊರತು, ಇವತ್ತಿನ ಸಾಂಸ್ಕೃತಿಕ ಬಿಕ್ಕಟ್ಟಿಗೆ ಪರಿಹಾರವಾಗಲಾರವು. ಎಂಥ ಭಾವುಕತೆಯಲ್ಲೂ ಈ ಎಚ್ಚರವನ್ನು ನಾವು ಕಾಯ್ದುಕೊಳ್ಳುವುದು, ಕುವೆಂಪು ಅವರನ್ನು ಕನ್ನಡದ ಅಸ್ಮಿತೆಯಾಗಿ, ಎಲ್ಲ ರಾಜಕಾರಣಗಳಿಂದ ದೂರವಿರಿಸಿ ಕಾಣುವುದಕ್ಕೆ ಅಗತ್ಯ. ಕುವೆಂಪು ಅವರು ಒಂದೆಡೆ ಹೇಳಿದ್ದರು: ಕಾವ್ಯವನ್ನೇ ಬದುಕುತ್ತಿದ್ದೇನೆ, ಬರೆಯುತ್ತಿಲ್ಲ ಎಂದು. ಹಾಗೆಯೇ ನಾವೂ ಅವರ ಕಾಣ್ಕೆಗಳನ್ನು ಬದುಕಬೇಕಾಗಿದೆ.

Similar News