×
Ad

ಹೊಸ ವರ್ಷಾಚರಣೆ; ಬೆಂಗಳೂರು ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಫ್ಲೈ ಓವರ್ ಗಳಲ್ಲಿ ಸಂಚಾರ ನಿಷೇಧ

8,500 ಪೊಲೀಸರ ನಿಯೋಜನೆ

Update: 2022-12-29 18:54 IST

ಬೆಂಗಳೂರು, ಡಿ.29: ಹೊಸ ವರ್ಷಾಚರಣೆಯ ದಿನದಂದು ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಬೆಂಗಳೂರು ನಗರದಾದ್ಯಂತ 8,500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸ ವರ್ಷಾಚರಣೆ ಹಿನ್ನೆಲೆ ಪಬ್, ಬಾರ್, ರೆಸ್ಟೋರೆಂಟ್ ಮಾಲಕರು ಪೊಲೀಸ್ ಇಲಾಖೆ ಸೂಚಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಹಾಗೂ ನಿಯಮಗಳನ್ನು ಪಾಲಿಸದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಫ್ಲೈ ಓವರ್ ಗಳಲ್ಲಿ ಸಂಚಾರ ನಿಷೇಧ: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ 30 ಫ್ಲೈ ಓವರ್‍ಗಳಲ್ಲಿ ಸಂಚಾರ ನಿಷೇಧಿಸಲಾಗಿದ್ದು, ವಾಹನ ಸವಾರರು ಫ್ಲೈ ಓವರ್ ಗಳನ್ನೊರತುಪಡಿಸಿ ಸರ್ವೀಸ್ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.31 ರಂದು ರಾತ್ರಿ 2 ಗಂಟೆಯಿಂದ ಜ. 1ರ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸ್ ವಾಹನಗಳು ಕರ್ತವ್ಯನಿರತ ತುರ್ತು ವಾಹನಗಳ ಸಂಚಾರವನ್ನು ಹೊರತುಪಡಿಸಿ ಇತರ ವಾಹನಗಳ ಪ್ರವೇಶವನ್ನು ಈ ಕೆಳಕಂಡ ರಸ್ತೆಗಳಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದರು. 

ಎಂಜಿ ರಸ್ತೆ, ಅನಿಲ್‍ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆಯಿಂದ ಅಪೇರಾ ಜಂಕ್ಷನ್‍ವರೆಗೆ, ಚರ್ಚ್‍ಸ್ಟ್ರೀಟ್‍ನಿಂದ ಮ್ಯೂಸಿಯಂ ರಸ್ತೆವರೆಗೆ, ಎಂಜಿ ರಸ್ತೆಯ ಜಂಕ್ಷನ್‍ನಿಂದ ಹಳೆ ಮದ್ರಾಸ್ ಬ್ಯಾಂಕ್ ವೃತ್ತದವರೆಗೆ, ರೆಸ್ಟ್‍ಹೌಸ್ ರಸ್ತೆಯ ಮ್ಯೂಸಿಯಂನಿಂದ ಬ್ರಿಗೇಡ್‍ರಸ್ತೆವರೆಗೆ, ರೆಸಿಡೆನ್ಸಿ ರಸ್ತೆಯಿಂದ ಎಂಜಿ ರಸ್ತೆ ಶಂಕರ್‍ನಾಗ್ ಚಿತ್ರಮಂದಿರವರೆಗೆ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ, ಉಳಿದಂತೆ ಹಲಸೂರು, ಕಾಮರಾಜ ರಸ್ತೆ, ಶಿವಾಜಿನಗರ ಶಾಪಿಂಗ್‍ಕಾಂಪ್ಲೆಕ್ಸ್ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. 

ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವವರು ಸುರಕ್ಷಿತವಾಗಿ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ಅತೀ ವೇಗ, ಅಜಾಗರೂಕತೆ ವಾಹನ ಚಾಲನೆ, ವ್ಹೀಲಿಂಗ್ ಹಾಗೂ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ರಾತ್ರಿ ಪೂರ್ತಿ ನಗರದಾದ್ಯಂತ ಕಾರ್ಯಾಚರಣೆ ನಡೆಯಲಿದೆ. ಇಂತಹ ಘಟನೆಗಳು ಕಂಡು ಬಂದರೆ ಸಾರ್ವಜನಿಕರು ದೂ.ಸಂ-112ಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

Similar News