ನರೇಗಾ ಯೋಜನೆಗೆ ಗರ

Update: 2022-12-30 04:16 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೊರೋನ ಈ ದೇಶದಲ್ಲಿ ಜನರ ಆರೋಗ್ಯದ ಮೇಲೆ ಮಾಡಿದ ದಾಳಿಗಿಂತ, ದೇಶದ ಆರ್ಥಿಕತೆಯ ಮೇಲೆ ಮಾಡಿದ ದಾಳಿ ದೊಡ್ಡದು.  ಕೊರೋನ ಸೋಂಕು ನೇರವಾಗಿ ಜನರ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮಗಳನ್ನು ಬೀರಲಿಲ್ಲ. ಆದರೆ ಕೊರೋನದ ಹೆಸರಿನಲ್ಲಿ ಬಿತ್ತಿದ ಭೀತಿ, ವದಂತಿಗಳು ಆಸ್ಪತ್ರೆಗಳನ್ನು ದುಬಾರಿ ಮಾಡಿದವು. ಇತರ ರೋಗಗಳಿಗೆ ಬಲಿಯಾದ ಜನರಿಗೆ ಸರಿಯಾದ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಸಿಗದಂತಹ ಸ್ಥಿತಿ ನಿರ್ಮಾಣವಾಯಿತು. ಕ್ಷಯ, ಎಚ್‌ಐವಿಯಂತಹ ರೋಗಗಳು ಈ ಕೊರೋನದ ಗದ್ದಲಗಳ ಮರೆಯಲ್ಲಿ ವಿಜೃಂಭಿಸಿದವು. ಯಾವುದೇ ಕಾಯಿಲೆಯಿಂದ ಮೃತರಾದರೂ, ಅವರಲ್ಲಿ ಕೊರೋನ ಸೋಂಕು ಕಂಡು ಬಂದಿದ್ದರೆ, ‘ಕೊರೋನ ಸೋಂಕಿಗೆ ಬಲಿ’ ಎಂದೇ ಶರಾ ಬರೆಯಲಾಯಿತು. ಇದೇ ಸಂದರ್ಭದಲ್ಲಿ  ಕೊರೋನ ತಡೆಯುವುದಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ದೇಶದ ಆರ್ಥಿಕ ಆರೋಗ್ಯದ ಮೇಲೆ ಬೀರಿದ ಪರಿಣಾಮ ಇನ್ನಷ್ಟು ಭೀಕರ. ಹಲವು ಉದ್ದಿಮೆಗಳು ಮುಚ್ಚಲ್ಪಟ್ಟವು. ಸಹಸ್ರಾರು ಜನರು ನಿರುದ್ಯೋಗಿಗಳಾದರು. ನಗರಗಳಲ್ಲಿ ನೆಲೆಸಿದ್ದ ಕಾರ್ಮಿಕರ ಸ್ಥಿತಿಯನ್ನು ಕೇಳುವವರೇ ಇಲ್ಲವಾಗಿತ್ತು. ನಗರಗಳಿಂದ ಜನರು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋದರು. ಇಂತಹ ಸಂದರ್ಭದಲ್ಲಿ ಅವರನ್ನು ಆದರಿಂದ ಸ್ವೀಕರಿಸಿದ್ದು  ಕೇಂದ್ರ ಸರಕಾರದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಅಥವಾ ನರೇಗಾ ಯೋಜನೆ. ಉದ್ಯೋಗವಿಲ್ಲದೆ ನಗರಗಳಿಂದ ಮರಳಿದವರಿಗೆ ಈ ಯೋಜನೆ ತಕ್ಷಣದ ಆಸರೆಯಾಯಿತು. ನೂರಾರು ಜನರು ಆ ಯೋಜನೆಯ ದಿಸೆಯಿಂದ ದಿನದ ಕೂಳು ಸಂಪಾದಿಸುವಂತಾಯಿತು. ಆದರೆ ಇದೀಗ ಆ ನರೇಗಾ ಯೋಜನೆಗೇ ಗರ ಬಡಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಯೋಜನೆಯಡಿ ಕೇಂದ್ರ ಸರಕಾರವು ರಾಜ್ಯಗಳಿಗೆ ಸುಮಾರು 8,305 ಕೋಟಿ ರೂಪಾಯಿ ಬಾಕಿ ಉಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡ ಜನರು ಇರುವ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಮಾಡಿದ ಕೆಲಸಕ್ಕೂ ಸರಿಯಾದ ಸಮಯಕ್ಕೆ ಕೂಲಿಯನ್ನು ಪಡೆಯಲಾಗದ ಅತಂತ್ರ ಸ್ಥಿತಿಯಲ್ಲಿದ್ದಾರೆ.

ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂದು ನರೇಗಾ ಮಾನ್ಯವಾಗಿದೆ. ಗ್ರಾಮೀಣ ಭಾಗದ ಜನರ ಬದುಕಿಗೆ ಕನಿಷ್ಠ 100 ದಿನಗಳ ಉದ್ಯೋಗ ಭರವಸೆಯನ್ನು ಈ ಯೋಜನೆ ನೀಡುತ್ತಾ ಬಂದಿದೆ. ಯುಪಿಎ ಅಧಿಕಾರಾವಧಿಯಲ್ಲಿ ಇದು ಜಾರಿಗೆ ಬಂದಾಗ ವಿರೋಧ ಪಕ್ಷವಾಗಿರುವ ಬಿಜೆಪಿ ವ್ಯಂಗ್ಯವಾಡಿತ್ತು. ಟೀಕೆಗಳನ್ನೂ ಮಾಡಿತ್ತು. ಈ ಯೋಜನೆಯಲ್ಲಿರುವ ಅಕ್ರಮ, ಅವ್ಯವಹಾರಗಳನ್ನು ಬೊಟ್ಟು ಮಾಡಿ ಈ ಯೋಜನೆಯನ್ನೇ ನಿಲ್ಲಿಸಬೇಕು ಎಂದು ಒತ್ತಡ ಹಾಕಿತ್ತು. ಆದರೆ ಈ ಯೋಜನೆ ಗ್ರಾಮೀಣ ಪ್ರದೇಶದ ಜನರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿತು. ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ಇದು ತನ್ನದೇ ಆದ ಪಾತ್ರಗಳನ್ನು ನಿರ್ವಹಿಸಿತು. ಹತ್ತು ಹಲವು ಅಕ್ರಮಗಳ ನಡುವೆಯೂ ಈ ಯೋಜನೆ ಯಶಸ್ವಿಯಾದ ಕಾರಣದಿಂದ, ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ಯೋಜನೆಗೆ ತನ್ನ ನೆರವನ್ನು ಮುಂದುವರಿಸಿತು ಮಾತ್ರವಲ್ಲ, ಈ ಯೋಜನೆಗೆ ದೊಡ್ಡ ಮಟ್ಟದ ಹಣವನ್ನು ಮೀಸಲಿಟ್ಟು, ಅದನ್ನು ಏಕಾಏಕಿ ಹಾಡಿ ಹೊಗಳತೊಡಗಿತು. 2021-22ನೇ ಸಾಲಿಗೆ ಈ ಯೋಜನೆಗಾಗಿ ಸರಕಾರ 73 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಈ ಯೋಜನೆಯ ಮಹತ್ವ ಅರಿವಾಗಿದ್ದು ಕೊರೋನ ಕಾಲದಲ್ಲಿ. ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ವಾಪಸಾದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಸವಾಲು ಸರಕಾರದ ಮುಂದೆ ಎದುರಾದಾಗ ಆಗ ಆಸರೆಯಾದುದು ನರೇಗಾ ಯೋಜನೆ. ಈ ಯೋಜನೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿ, ಕಾರ್ಮಿಕರಿಗೆ ಕೂಲಿಯನ್ನು ಹೆಚ್ಚಿಸಿ ಆಕರ್ಷಣೀಯಗೊಳಿಸಿದರೆ ಗ್ರಾಮೀಣ ಪ್ರದೇಶಗಳಿಗೆ ಇದು ಬಹುದೊಡ್ಡ ಕೊಡುಗೆಯನ್ನು ನೀಡಲಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಮತವಾಗಿದೆ. ಆದರೆ ಸಾಮಾಜಿಕ ವಲಯದ ಬಗ್ಗೆ ಸಂಪೂರ್ಣ ಆಸಕ್ತಿ ಕಳೆದುಕೊಂಡಿರುವ ಸರಕಾರ ನರೇಗಾ ಯೋಜನೆಗೆ ನೀಡುವ ನೆರವನ್ನು ಇಳಿಮುಖಗೊಳಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಸರಕಾರದ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರವು ನರೇಗಾ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 8,305 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಗಳನ್ನು ಬಾಕಿಯಿರಿಸಿದೆ. ಕಾರ್ಮಿಕರೇ ಹೆಚ್ಚಿರುವ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚಿನ ಮೊತ್ತವನ್ನು  ಅಂದರೆ, 1,711 ಕೋಟಿ ರೂಪಾಯಿಯನ್ನು ಬಾಕಿಯಿರಿಸಿದೆ. ಆಂಧ್ರ ಪ್ರದೇಶ ಮತ್ತು ಪಶ್ಚಿಮಬಂಗಾಳ ಆನಂತರದ ಸ್ಥಾನದಲ್ಲಿದೆ. ಆಂಧ್ರಪ್ರದೇಶಕ್ಕೆ 1,005 ಕೋಟಿ ರೂಪಾಯಿ ಬಾಕಿ ಉಳಿಸಿದ್ದರೆ, ಪಶ್ಚಿಮ ಬಂಗಾಳಕ್ಕೆ 664 ಕೋಟಿ ರೂಪಾಯಿಯನ್ನು ಬಾಕಿಯಿರಿಸಿದೆ.  ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ಕಾರ್ಮಿಕರಿಗೆ 2,744 ಕೋಟಿ ರೂಪಾಯಿ ಬಾಕಿಯಿದೆ ಎಂದು ಸರಕಾರೇತರ ಸಂಸ್ಥೆಯೊಂದರ ಸಮೀಕ್ಷೆಯಿಂದ ಬಹಿರಂಗವಾಗಿದೆ. ನರೇಗಾ ಕಾಮಗಾರಿಗಳ ಸ್ಥಗಿತದಿಂದಾಗಿ ಕಾರ್ಮಿಕರು ಪ್ರಸಕ್ತ ವರ್ಷದಲ್ಲಿ ವೇತನಗಳ ರೂಪದಲ್ಲಿ ಸುಮಾರು 3,891 ಕೋಟಿ ರೂ.ಯಿಂದ 6, 046 ಕೋಟಿ ರೂಪಾಯಿವರೆಗೆ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಅಂದರೆ, ಕೇಂದ್ರ ಸರಕಾರ ಹಣವನ್ನು ಬಾಕಿಯಿರಿಸಿರುವುದರಿಂದಾಗಿ ಕಾರ್ಮಿಕರಿಗೆ ನೀಡಬೇಕಾದ 100 ದಿನಗಳ ಕೆಲಸದ ಭರವಸೆಯನ್ನು ಈಡೇರಿಸುವುದಕ್ಕೆ ಯೋಜನೆಗೆ ಸಾಧ್ಯವಾಗುತ್ತಿಲ್ಲ.

ವಿಪರ್ಯಾಸವೆಂದರೆ, ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳಿಗೆ ಬೇಡಿಕೆ ತಗ್ಗುತ್ತಿದೆ. ನರೇಗಾ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದರು. ನರೇಗಾ ಯೋಜನೆಯಲ್ಲಿ ಸರಕಾರದ ವೈಫಲ್ಯವನ್ನು ಮುಚ್ಚಿಡುವುದಕ್ಕಾಗಿ ವಿತ್ತ ಸಚಿವರು ನೀಡಿರುವ ಗೊಂದಲಕಾರಿ ಹೇಳಿಕೆಯಿದು. ವಿತ್ತ ಸಚಿವರ ಹೇಳಿಕೆಯ ಸತ್ಯಾಸತ್ಯಾತೆಯನ್ನು ಫ್ಯಾಕ್ಟ್‌ಚೆಕ್ ಡಾಟ್ ಇನ್ ಪರಿಶೀಲಿಸಿದಾಗ ಅವರ ಮಾತಿನ ಪೊಳ್ಳುಗಳು ಬಯಲಾದವು. ಈ ವೆಬ್‌ಸೈಟ್ 2018-2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಇರುವ ಬೇಡಿಕೆಯ ಕುರಿತು ನರೇಗಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಶೀಲಿಸಿದಾಗ ಬೇರೆಯೇ ಮಾಹಿತಿಗಳು ದೊರಕಿದವು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿರುವುದು ಇದರಿಂದ ಬೆಳಕಿಗೆ ಬಂತು. 2018ರಲ್ಲಿ 5.78 ಕೋಟಿ ಕುಟುಂಬಗಳಿಂದ ಅಂದರೆ ಸುಮಾರು 9.11 ಕೋಟಿ ಜನರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಯು 2019-20ರಲ್ಲಿ 6.16 ಕೋಟಿ ಕುಟುಂಬಗಳಿಗೆ ಅಂದರೆ ಸುಮಾರು 9.33 ಕೋಟಿ ಜನರಿಗೆ ಏರಿಕೆಯಾಗಿದೆ. ಕೋವಿಡ್ ಕಾಲದಲ್ಲಿ ಈ ಬೇಡಿಕೆ ಸಹಜವಾಗಿಯೇ ಇನ್ನಷ್ಟು ಏರಿಕೆಯಾಯಿತು. ಯಾಕೆಂದರೆ ಅದಾಗಲೇ ನಗರಗಳಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ಕಾರ್ಮಿಕರು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಮರಳಿದ್ದರು. 2020-21ರಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನರೇಗಾದಡಿ ಕೆಲಸಕ್ಕೆ ಬೇಡಿಕೆ 38.7ರಷ್ಟು ಏರಿಕೆಯಾಗಿತ್ತು ಎನ್ನುವ ಅಂಶವನ್ನು ಸರಕಾರಿ ವೈಬ್‌ಸೈಟ್ ಹೇಳುತ್ತದೆ.

ಬೇಡಿಕೆಯ ಕೊರತೆಯಿಂದಲ್ಲ, ಬಾಕಿವುಳಿಸಿರುವ ಹಣದ ಕಾರಣದಿಂದಾಗಿ ಜನರಿಗೆ ಉದ್ಯೋಗಗಳನ್ನು ನೀಡುವುದಕ್ಕೆ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಇದೀಗ ಸರಕಾರ ನರೇಗಾ ಯೋಜನೆಗೇ ಕತ್ತರಿ ಹಾಕಲು ಹೊರಟಂತಿದೆ. ಅದರ ಮೊದಲ ಭಾಗವಾಗಿ ಈ ಯೋಜನೆಗೆ ಬೇಡಿಕೆ ಬರುತ್ತಿಲ್ಲ ಎನ್ನುವ ಸುಳ್ಳನ್ನು ವಿತ್ತ ಸಚಿವರ ಮೂಲಕ ಸರಕಾರ ನೀಡಿದೆ. ಭಾರತದ ಆರ್ಥಿಕ ಸ್ಥಿತಿಗತಿಯನ್ನು ಯಾವ ದಿಕ್ಕಿನಿಂದ ನೋಡಿದರೂ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆಯೇ ಹೊರತು, ಇಳಿಕೆಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಬೇಡಿಕೆ ಇಳಿಕೆಯಾಗುತ್ತಿದೆ ಎನ್ನುವ ಸ್ಪಷ್ಟನೆಯೇ ಬೇಜವಾಬ್ದಾರಿಯಿಂದ ಕೂಡಿರುವುದು. ನರೇಗಾ ಯೋಜನೆಗೆ  ಬಾಕಿಯಿರಿಸಿರುವ ಹಣವನ್ನು ಪಾವತಿ ಮಾಡುವುದರ ಬಗ್ಗೆ ಸರಕಾರ ಮುತುವರ್ಜಿ ವಹಿಸಬೇಕು. ಹಾಗೆಯೇ ಈಗಾಗಲೇ ಇರುವ ದಿನದ ವೇತನವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವೂ ಇದೆ. ಕೆಲವು ರಾಜ್ಯಗಳಲ್ಲಿ ಈ ಯೋಜನೆಯ ಮೂಲಕ ಕಾರ್ಮಿಕರಿಗೆ ಸಿಗುವ ಕೂಲಿ ತೀರಾ ಕಡಿಮೆ ಎನ್ನುವ ಆರೋಪಗಳಿವೆ. ಆರ್ಥಿಕ ಪತನದಿಂದ ಗ್ರಾಮೀಣ ಪ್ರದೇಶದ ಜನರನ್ನು ಮೇಲೆತ್ತಲು ಈ ಯೋಜನೆಯನ್ನು ಇನ್ನಷ್ಟು ಸಬಲಗೊಳಿಸುವುದೊಂದೇ ದಾರಿ. ಈ ನಿಟ್ಟಿನಲ್ಲಿ ಸರಕಾರ ನರೇಗಾ ಯೋಜನೆಗೆ ಜೀವ ತುಂಬುವ ಕೆಲಸವನ್ನು ಮಾಡಬೇಕು.

Similar News