ಲಿಂಗಾಯತ-ಒಕ್ಕಲಿಗ ಮೀಸಲಾತಿ ಹೆಚ್ಚಳ ಸಾಧ್ಯವೇ? ಸಿಂಧುವೇ?

Update: 2022-12-31 03:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಜನರಿಗೆ ಸಂಬಂಧಪಟ್ಟ ಯಾವುದೇ ವಿಷಯಗಳ ಬಗ್ಗೆ ಪರಿಣಾಮಕಾರಿ ಚರ್ಚೆಯಾಗದೆ ಬೆಳಗಾವಿ ಅಧಿವೇಶನ ಮುಕ್ತಾಯವಾಗಿಯೇ ಬಿಟ್ಟಿತು. ಬಿಜೆಪಿಯ ನಾಯಕ ಅಮಿತ್ ಶಾ ಅವರನ್ನು ಸ್ವಾಗತಿಸುವುದಕ್ಕಾಗಿ ಅಧಿವೇಶನವನ್ನೇ ಮೊಟಕು ಮಾಡಿದ ಕರ್ನಾಟಕ ಬಿಜೆಪಿ ಸರಕಾರ ರಾಜ್ಯಕ್ಕೆ ಅವಮಾನ ಮಾಡಿದೆ. ಅದರ ಜೊತೆಗೆ ಎರಡು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿದ್ದ ದಲಿತ ಸಮುದಾಯದ ಬೇಡಿಕೆಗಳ ಬಗ್ಗೆ ಉಪಸಮಿತಿಯನ್ನು ಮಾಡಿ ಕೈತೊಳೆದುಕೊಂಡ ಬಿಜೆಪಿ ಸರಕಾರ ಬಲಿಷ್ಠ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಬೇಡಿಕೆಗೆ ಮಾತ್ರ ಕೂಡಲೇ ಓಗೊಟ್ಟು ಹೊಸ ಪ್ರವರ್ಗಗಳನ್ನು ಮತ್ತು ಮೀಸಲಾತಿ ಹೆಚ್ಚಳವನ್ನು ಘೋಷಿಸಿದೆ. ಆದರೆ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಘೋಷಿಸಿರುವ ಮೀಸಲಾತಿಯಲ್ಲೂ ಬೊಮ್ಮಾಯಿ ಸರಕಾರ ನಿಜಾಯತಿ ತೋರಿಸಿದಂತೆ ಕಾಣುವುದಿಲ್ಲ. ಏಕೆಂದರೆ ಸರಕಾರ 3-ಎ ಮತ್ತು 3-ಬಿ ಪ್ರವರ್ಗಗಳನ್ನು ರದ್ದು ಮಾಡಿ ಅಲ್ಲಿ ಇದ್ದ ಎಲ್ಲಾ ಜಾತಿಗಳನ್ನು ಹೊಸದಾಗಿ ಸೃಷ್ಟಿಸಲಾದ 2-ಸಿ ಮತ್ತು 2-ಡಿ ಪ್ರವರ್ಗಗಳಲ್ಲಿ ಸೇರಿಸಿದೆ. ಹೀಗಾಗಿ ಬದಲಾಗಿರುವುದು ಪ್ರವರ್ಗಗಳ ಹೆಸರೇ ವಿನಾ ಮತ್ತೇನೂ ಅಲ್ಲ.

ಇದರ ಜೊತೆಗೆ ಹಿಂದುಳಿದ ಆಯೋಗದ ವರದಿ (ಅದು ಬರಲು ಇನ್ನೂ ಎರಡು ಮೂರು ತಿಂಗಳೇ ಆಗಬಹುದು) ಬಂದ ನಂತರ 2-ಸಿ ಮತ್ತು 2-ಡಿ ಪ್ರವರ್ಗಗಳ ಮೀಸಲಾತಿಯನ್ನು ಕನಿಷ್ಠ ಶೇ. 2-3ರಷ್ಟು ಏರಿಸಲಾಗುವುದು ಎಂದು ಸರಕಾರ ಹೇಳಿದೆ ಹಾಗೂ ಆ ಹೆಚ್ಚಳವನ್ನು ಇಡಬ್ಲುಎಸ್ ಮೀಸಲಾತಿಗೆ ನೀಡಲಾಗಿರುವ ಶೇ. 10ರಿಂದ ತೆಗೆದು ಭರ್ತಿ ಮಾಡಬೇಕು ಎಂಬುದು ಸರಕಾರ ಯೋಚಿಸುತ್ತಿದೆ. ಆದರೆ ಸರಕಾರವೇ ಹೇಳುವಂತೆ ಅದಕ್ಕೆ ಮುಂಚೆ ಕರ್ನಾಟಕದಲ್ಲಿ ಇಡಬ್ಲುಎಸ್ ವರ್ಗಕ್ಕೆ ಬರುವ ಬ್ರಾಹ್ಮಣ, ಆರ್ಯ ವೈಶ್ಯ, ಜೈನ, ಮೊದಲಿಯಾರ್ ಮತ್ತು ನಾಯರ್ ಸಮುದಾಯಗಳಲ್ಲಿ ಮೀಸಲಾತಿಗೆ ಅರ್ಹರಿರುವ ಪ್ರಮಾಣವನ್ನು ಅಧ್ಯಯನ ಮಾಡಬೇಕಿದೆ. ಆನಂತರವೇ ಉಳಿದದ್ದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ಎಷ್ಟು ಕೊಡುವುದೆಂಬ ತೀರ್ಮಾನಕ್ಕೆ ಬರಲು ಸಾಧ್ಯ. ಅಷ್ಟು ಮಾತ್ರವಲ್ಲ. ಈ ಅಧ್ಯಯನಕ್ಕೆ ಯಾವುದೇ ಕಾಲಮಿತಿಯನ್ನು ಸರಕಾರ ಹಾಕಿಕೊಂಡಿಲ್ಲ. ಹೀಗಾಗಿ ಇದು ಮೇಲ್ನೋಟಕ್ಕೆ ಅತ್ಯಂತ ತರಾತುರಿಯ ಮತ್ತು ಬೇಜವಾಬ್ದಾರಿ ನಿರ್ಣಯವೆಂದು ಸ್ಪಷ್ಟವಾಗುತ್ತದೆ. ಎಲ್ಲಕಿಂತ ಮುಖ್ಯವಾಗಿ ಈ ತೀರ್ಮಾನ ತೆಗೆದುಕೊಳ್ಳುವಾಗ ಬೊಮ್ಮಾಯಿ ಸರಕಾರ ಹಲವು ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸರಕಾರ ಸಾರಾಂಶದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇ. 7ರಷ್ಟು ಹೆಚ್ಚಿಸಲಿದೆ. ಈಗಾಗಲೇ ಬೊಮ್ಮಾಯಿ ಸರಕಾರ ಸುಗ್ರೀವಾಜ್ಞೆಯ ಮೂಲಕ ಪರಿಶಿಷ್ಟ ಮೀಸಲಾತಿಯನ್ನು ಶೇ. 6ರಷ್ಟು ಏರಿಸಿದೆ. ಈಗ ಅದು ಬೆಳಗಾವಿ ಅಧಿವೇಶನದಲ್ಲಿ ಶಾಸನವಾಗಿದೆ. ಇದರ ಜೊತೆಗೆ ಇಡಬ್ಲುಎಸ್ ಮೀಸಲಾತಿಯನ್ನು ಸೇರಿಸಿದರೆ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಶೇ. 66 ಆಗುತ್ತದೆ. ಆದರೆ ಇದರಲ್ಲಿ ಇಡಬ್ಲುಎಸ್ ಮೀಸಲಾತಿಗೆ ಮಾತ್ರ ಶೇ. 50ರ ಮೇಲ್ಮಿತಿ ಮೀರುವುದಕ್ಕೆ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠ ಒಪ್ಪಿಗೆ ಕೊಟ್ಟಿದೆ. ಹೀಗಾಗಿ ಪರಿಶಿಷ್ಟ ಮೀಸಲಾತಿಯ ಏರಿಕೆಯೂ ಶೆಡ್ಯೂಲ್ 9ಕ್ಕೆ ಸೇರದೆ ಅಥವಾ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿಯಾಗದೆ ಸಿಂಧುವಾಗುವುದಿಲ್ಲ. ಮೊನ್ನೆ ಕೇಂದ್ರದ ಮಂತ್ರಿಗಳೇ ಕೇಂದ್ರ ಸರಕಾರದ ಮುಂದೆ ಪರಿಶಿಷ್ಟ ಮೀಸಲಾತಿಯ ಹೆಚ್ಚಳಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುವ ಪ್ರಸ್ತಾವ ಇಲ್ಲವೆಂದು ಹೇಳಿದ್ದಾರೆ.

ಆದರೆ ಒಕ್ಕಲಿಗ-ಲಿಂಗಾಯತ ಮೀಸಲಾತಿಯ ಹೆಚ್ಚಳಕ್ಕೆ ಬೇಕಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಸಮ್ಮತಿಸಿರುವ ಶೇ. 10ರ ಇಡಬ್ಲುಎಸ್ ಮೀಸಲಾತಿಯಿಂದ ಪಡೆದುಕೊಳ್ಳುವುದಾಗಿ ಸರಕಾರ ಹೇಳುತ್ತಿದೆ. ಆದರೆ ಹಾಗೆ ಇಡಬ್ಲುಎಸ್ ಮೀಸಲಾತಿಯ ಕೋಟಾವನ್ನು ಹಿಂದುಳಿದ ಜಾತಿಗಳಿಗೂ ಹಂಚುವ ಅವಕಾಶವಿದೆಯೇ? ಏಕೆಂದರೆ ಹಿಂದುಳಿದ ಜಾತಿಗಳ ಮತ್ತು ಪರಿಶಿಷ್ಟ ಜಾತಿ-ವರ್ಗಗಳ ಒಟ್ಟು ಮೀಸಲಾತಿ ಶೇ. 50ರ ಮೇಲ್ಮಿತಿಯನ್ನು ದಾಟಬಾರದೆಂದು ಸುಪ್ರೀಂ ಕೋರ್ಟ್ ಶಾಸನವನ್ನೇ ಮಾಡಿದೆ. ಈ ನಡುವೆಯಂತೂ ರಾಜ್ಯ ಸರಕಾರಗಳು ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ. 50ರ ಮೇಲ್ಮಿತಿಯನ್ನು ಮೀರಿ ಹೆಚ್ಚಿಸಿದಾಗಲೆಲ್ಲಾ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿದೆ. 2021ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವೇ ಮಹಾರಾಷ್ಟ್ರ ಸರಕಾರ ಶೇ. 50ರ ಮೇಲ್ಮಿತಿಯನ್ನು ಮೀರಿ ಮರಾಠಾ ಸಮುದಾಯಕ್ಕೆ ಕಲ್ಪಿಸಿದ್ದ ಶೇ. 12 ಹೆಚ್ಚುವರಿ ಮೀಸಲಾತಿಯನ್ನು ಅಸಿಂಧುಗೊಳಿಸಿದ್ದು ಮಾತ್ರವಲ್ಲದೆ ಹಿಂದುಳಿದ ಜಾತಿಗಳ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರಕಾರಗಳಿಂದ ಕಿತ್ತು ಕೇಂದ್ರಕ್ಕೆ ವರ್ಗಾಯಿಸಿತ್ತು. ಆದರೆ ಸಂಸತ್ತು ಸಂವಿಧಾನಕ್ಕೆ 127ನೇ ತಿದ್ದುಪಡಿಯನ್ನು ಮಾಡಿ ಹಿಂದುಳಿದ ಜಾತಿಗಳ ವರ್ಗೀಕರಣದ ಅಧಿಕಾರವನ್ನು ರಾಜ್ಯಕ್ಕೆ ಮರಳಿಸುವುದಾಗಲೀ, ಶೇ. 50ರ ಮೇಲ್ಮಿತಿಯ ಅನ್ಯಾಯವನ್ನು ಸರಿಪಡಿಸುವ ನ್ಯಾಯಪರತೆಯನ್ನಾಗಲೀ ತೋರಲಿಲ್ಲ.

ಸರಕಾರಗಳು ಅದನ್ನು ಕೋರಿಯೂ ಇರಲಿಲ್ಲ! ಇಡಬ್ಲುಎಸ್ ಮೀಸಲಾತಿಯ ಬಗೆಗಿನ ತೀರ್ಪಿನಲ್ಲಿ ಐವರು ನ್ಯಾಯಾಧೀಶರ ಸಾಂವಿಧಾನಿಕ ಕೋರ್ಟ್ ವಿಶೇಷ ಸಂದರ್ಭಗಳಲ್ಲಿ ಶೇ. 50ರ ಮೇಲ್ಮಿತಿಯನ್ನು ಮೀರಬಹುದು ಎಂದು ಹೇಳಿದ್ದರೂ ಅದನ್ನು ಆರ್ಥಿಕ ಹಿಂದುಳಿದಿರುವಿಕೆ ಎಂಬ ವಿಶೇಷ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸಿದೆ. ಎಲ್ಲಿಯ ತನಕ ಎಂದರೆ ಹಿಂದುಳಿದ ಜಾತಿಗಳ ಜನಸಂಖ್ಯಾವಾರು ಹೆಚ್ಚಳವನ್ನು ಕೂಡ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇ. 50ರ ಮೇಲ್ಮಿತಿ ಮೀರುವುದಕ್ಕೆ ಒಂದು ಕಾರಣವನ್ನಾಗಿ ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಲಿಲ್ಲ. ಈ ವಿಷಯದಲ್ಲಿ ಬಹುಸಂಖ್ಯಾತ ನ್ಯಾಯಾಧೀಶರ ತೀರ್ಪನ್ನು ನೀಡಿದ್ದ ನ್ಯಾ. ದಿನೇಶ್ ಮಹೇಶ್ವರಿಯವರಂತೂ ಶೇ. 50ರ ಮೇಲ್ಮಿತಿ ಹಿಂದುಳಿದ ಜಾತಿಗಳ ಮೀಸಲಾತಿಗೆ ಅನ್ವಯವಾಗು ತ್ತದೆಯೇ ವಿನಾ ಇಡಬ್ಲುಎಸ್ ವರ್ಗಕ್ಕಲ್ಲ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಂದರೆ ಇಡಬ್ಲುಎಸ್ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯ ಲಾಭ ಇಡಬ್ಲುಎಸ್‌ಗೆ ಸೇರದ ಹಿಂದುಳಿದ ಜಾತಿಗಳಿಗೆ ಲಭ್ಯವಾಗುವುದಿಲ್ಲ. ಹೀಗಾಗಿ ಇಂದಿನ ಕಾನೂನು ಮತ್ತು ಶಾಸನಗಳ ಪ್ರಕಾರ ಲಿಂಗಾಯತ ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದರೆ ಅವೆರಡೂ ಜಾತಿಗಳು ಹಿಂದುಳಿದ ಜಾತಿಗಳ ವರ್ಗೀಕರಣದಿಂದ ಹೊರ ನಡೆದು ಇಡಬ್ಲುಎಸ್ ವರ್ಗೀಕರಣದಲ್ಲಿ ಸೇರಿಕೊಳ್ಳಬೇಕು ಮತ್ತು ಆ ರೀತಿಯ ವರ್ಗೀಕರಣ ಬದಲಾವಣೆಗಳನ್ನು ಸರಕಾರ ಸರಿಯಾದ ಅಧ್ಯಯನ ಮತ್ತು ಅಂಕಿಅಂಶಗಳಿಲ್ಲದೆ ಬೇಕಾಬಿಟ್ಟಿ ಮಾಡಲಾಗುವುದಿಲ್ಲ. ಹಾಗಲ್ಲದೆ ಒಕ್ಕಲಿಗರು ಮತ್ತು ಲಿಂಗಾಯತರು ಹಿಂದುಳಿದ ಜಾತಿಗಳಾಗಿಯೇ ಉಳಿದುಕೊಂಡು ಇಡಬ್ಲುಎಸ್‌ನಲ್ಲಿ ಉಳಿಯುವ ಮೀಸಲಾತಿಯ ಲಾಭವನ್ನು ಪಡೆಯಲಾಗುವುದಿಲ್ಲ. ಏಕೆಂದರೆ ಆಗ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣ ಶೇ. 50 ಮೇಲ್ಮಿತಿಯನ್ನು ಮೀರುತ್ತದೆ.

ಹಿಂದುಳಿದ ಜಾತಿಗಳ ಮೀಸಲಾತಿ ಶೇ. 50 ಮೀರುವಂತಿಲ್ಲ ಎಂದು ಮರಾಠಾ ಮೀಸಲಾತಿ ಹೆಚ್ಚಳದ ಪ್ರಕರಣದಲ್ಲಿ ಹಾಗೂ ಇಡಬ್ಲುಎಸ್ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠಗಳು ಸ್ಪಷ್ಟವಾದ ಆದೇಶ ಹೊರಡಿಸಿವೆ. ಇದು ಅನ್ಯಾಯ. ಅವೈಜ್ಞಾನಿಕ. ಅಪ್ರಜಾತಾಂತ್ರಿಕವಾದರೂ ದುರದೃಷ್ಟವಶತ್ ಇಂದಿನ ಮಟ್ಟಿಗೆ ಇದೇ ಶಾಸನ. ಇದು ಬದಲಾಗದೆ ಲಿಂಗಾಯತರಿಗಾಗಲೀ, ಒಕ್ಕಲಿಗರಿಗಾಗಲೀ, ದಲಿತರಿಗಾಗಲೀ ನ್ಯಾಯ ಸಿಗುವುದಿಲ್ಲ. ಹೀಗಾಗಿ ಬೊಮ್ಮಾಯಿ ಸರಕಾರ ಇಡಬ್ಲುಎಸ್ ಮೀಸಲಾತಿಯಿಂದ ತೆಗೆದು ಒಕ್ಕಲಿಗ ಹಾಗೂ ಲಿಂಗಾಯತ ಮೀಸಲಾತಿ ಹೆಚ್ಚಿಸುತ್ತೇವೆಂದು ಕೊಡುತ್ತಿರುವ ಭರವಸೆ ಶುದ್ಧ ವಂಚನೆಯೇ ಹೊರತು ಬೇರೇನೂ ಅಲ್ಲ. ಒಂದೊಮ್ಮೆ ಬೊಮ್ಮಾಯಿ ಸರಕಾರ ಅಂತಹ ಆದೇಶ ಮಾಡಿದರೂ ಶೇ. 50ರ ಮೇಲ್ಮಿತಿ ಶಾಸನ ಬದಲಾಗದೆ ಕೋರ್ಟಿನಲ್ಲಿ ಅದು ಊರ್ಜಿತವಾಗುವುದಿಲ್ಲ. ಜಾರಿಯಾಗುವುದಿಲ್ಲ. ಹೀಗಾಗಿ ಶೇ. 50ರ ಮೇಲ್ಮಿತಿಯನ್ನು ರದ್ದುಗೊಳಿಸುವ ಶಾಸನ ತರಲು ಎಲ್ಲಾ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಗಳು ಒಟ್ಟಾಗಿ ಹೋರಾಡುವುದೊಂದೇ ಇರುವ ಏಕೈಕ ಮಾರ್ಗ.

Similar News