ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ: ಕಮಿಷನರ್ ಶಶಿಕುಮಾರ್

Update: 2022-12-31 07:06 GMT

ಮಂಗಳೂರು, ಡಿ.31: ಹೊಸ ವರ್ಷಾಚರಣೆಗೆ ಮಂಗಳೂರು ನಗರದಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಯ ಸಭೆಯಂತೆ ನಿಯಮಾವಳಿ ರೂಪಿಸಲಾಗಿದೆ. ನ್ಯೂ ಈಯರ್ ಪಾರ್ಟಿ ಆಯೋಜಿಸುವವರು ಡಿ.31ರಂದು 12:30ಕ್ಕೆ ಕಾರ್ಯಕ್ರಮ ಮುಗಿಸಬೇಕು. ಅನುಮತಿ ಪಡೆದಿದ್ದರೂ ರಾತ್ರಿ 10 ಗಂಟೆಗೆ ಧ್ವನಿವರ್ಧಕಗಳನ್ನು ಬಂದ್ ಮಾಡಬೇಕು ಎಂದು ತಿಳಿಸಿದರು.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಈ ಪೈಕಿ 16 ಚೆಕ್ ಪಾಯಿಂಟ್ ಗಳಿರುತ್ತವೆ. ಅತಿ ವೇಗ, ಅಜಾಗರೂಕತೆಯ ವಾಹನ ಚಾಲನೆಯ ಮೇಲೆ ನಿಗಾ ವಹಿಸಲಾಗುವುದು ಎಂದವರು ತಿಳಿಸಿದರು.

ರಾತ್ರಿ 12:30ಕ್ಕೆ ಎಲ್ಲವೂ ಬಂದ್ ಆಗಬೇಕು. ಆ ಬಳಿಕ ಯಾರೂ ರಸ್ತೆಯಲ್ಲಿ ಇರಬಾರದು. ತ್ರಿಬಲ್ ರೈಡಿಂಗ್ ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆಗೆ ಅವಕಾಶ ಇರುವುದಿಲ್ಲ. ಅದೇರೀತಿ ಬೀಚ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಆಯೋಜಿಸಬೇಕು. ಪರವಾನಿಗೆ ಇಲ್ಲದೇ ಯಾವುದೇ ಆಚರಣೆಗೆ ಅವಕಾಶವಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದರು.

ನಿಯಮಗಳನ್ನು ಪಾಲಿಸಿ ಜವಾಬ್ದಾರಿಯುತವಾಗಿ ಹೊಸ ವರ್ಷಾಚರಣೆ ಆಚರಿಸಿ, ಯಾರಿಗೂ ಯಾವುದೇ ತೊಂದರೆ ಉಂಟಾಗದಂತೆ ಸಂಭ್ರಮಿಸಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

Full View

Similar News