ಕೆಎಸ್ಸಾರ್ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಚಾಲನೆ

Update: 2022-12-31 13:46 GMT

ಬೆಂಗಳೂರು, ಡಿ.31: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಂಚರಿಸಲು ಎಂಇಐಎಲ್ ಹಾಗೂ ಕೆಎಸ್‍ಆರ್‍ಟಿಸಿ ಜಂಟಿಯಾಗಿ ರಸ್ತೆಗಿಳಿದಿರುವ ಮೊದಲ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಶನಿವಾರ ಚಾಲನೆ ನೀಡಿದರು. 

ಇದೇ ವೇಳೆ ಮಾತನಾಡಿದ ಅವರು, ಎಲೆಕ್ಟ್ರಿಕ್ ಬಸ್‍ನಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿ ನಡುವೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿದೆ. ಈ ಹೊಸ ಬಸ್‍ಗೆ ಇ.ವಿ. ಪವರ್ ಪ್ಲಸ್ ಎಂದು ಹೆಸರಿಡಲಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ತಿಳಿಸಿದರು.

ಎರಡೂವರೆ ತಾಸು ಚಾರ್ಜ್ ಮಾಡಿದರೆ 300 ಕಿ.ಮಿ. ಕ್ರಮಿಸುವಷ್ಟು ಸಾಮಥ್ರ್ಯವನ್ನು ಹೊಂದಿದೆ. ಬಸ್ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಾಗಿದ್ದು, ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರೀಚಾರ್ಜ್ ಆಗುವ ರಿ ಜನರೇಷನ್ ಆಗುವ ವ್ಯವಸ್ಥೆಯನ್ನು ಬಸ್‍ನಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಖಾಲಿಯಾದರೆ ತಲೆಬಿಸಿ ಮಾಡುವ ಪ್ರಮೇಯವೇ ಇಲ್ಲ. ಏಕೆಂದರೆ, ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾಜಿರ್ಂಗ್ ಸ್ಪಾಟ್ಸ್ ಇದೆ. ಅಲ್ಲದೆ ಮನರಂಜನೆಗಾಗಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಇದಲ್ಲದೆ, ಈ ಪರಿಸರ ಸ್ನೇಹಿ ಬಸ್ ಸಂಪೂರ್ಣವಾಗಿ ಸೆನ್ಸಾರ್ ಹಿಡಿತದಲ್ಲಿ ಇರಲಿದ್ದು, ಒಟ್ಟಾರೆ ಬಸ್‍ನಲ್ಲಿ 43+2 ಸೀಟ್‍ಗಳಿವೆ. ಬಸ್ಸಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಚಾಲಕನ ಸ್ಥಳವು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯಿಂದ ಕೂಡಿದೆ ಎಂದರು.

ಅಪಘಾತ ಪರಿಹಾರ 1ಕೋಟಿ ರೂ. ವಿಮಾ ಸೌಲಭ್ಯ:

‘ರಾಜ್ಯ ರಸ್ತೆ ಸಾರಿಗೆ ನಿಗಮವು ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಿದೆ. ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಬಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯದ ರೂ.1 ಕೋಟಿ ಚೆಕ್ ನೀಡಲಾಗುತ್ತದೆ. ಅಂತರ ನಿಗಮ ವರ್ಗಾವಣೆ 1,013 ನೌಕರರಿಗೆ ವರ್ಗಾವಣೆ ಆದೇಶ ನೀಡಲಾಗುತ್ತದೆ’

-ಶ್ರೀರಾಮುಲು, ಸಾರಿಗೆ ಸಚಿವ

Similar News