ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ, ಹೊಂದಾಣಿಕೆ ರಾಜಕೀಯಕ್ಕೆ ಬಿಜೆಪಿ ಸಿದ್ಧವಿಲ್ಲ: ಅಮಿತ್ ಶಾ

''ಭ್ರಷ್ಟಾಚಾರವನ್ನು ದೂರವಿಡಲು BJP ಬೆಂಬಲಿಸಿ''

Update: 2022-12-31 14:06 GMT

ಬೆಂಗಳೂರು, ಡಿ. 31: ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬವಾದ, ಭ್ರಷ್ಟಾಚಾರವನ್ನು ದೂರವಿಡಲು ಬಿಜೆಪಿ ಬೆಂಬಲಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ಮನವಿ ಮಾಡಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬೂತ್ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸ್ಪಷ್ಟ ಬಹುಮತದೊಂದಿಗೆ ಗೆದ್ದು ಆಡಳಿತ ನಡೆಸಲಿದ್ದೇವೆ. ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ. ಆ ಪಕ್ಷ ಸೇರಿದಂತೆ ಯಾವುದೇ ಪಕ್ಷದ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.

‘ದೇಶಭಕ್ತರ ಜೊತೆ ನಿಲ್ಲಬೇಕೇ ಅಥವಾ ದೇಶವನ್ನು ಭಾಗಗಳನ್ನಾಗಿ ಮಾಡುವವರ ಜೊತೆ ನಿಲ್ಲಬೇಕೇ ಎಂದು ಜನರು ನಿರ್ಧಾರ ಮಾಡಬೇಕು’ ಎಂದು ಅವರು, ‘ಪಿಎಫ್‍ಐ ಬೆಂಬಲಿಗರ ಜೊತೆ ಇರಬೇಕೇ ಅಥವಾ ದೇಶವನ್ನು ಕಾಪಾಡುವ, ರಾಮಮಂದಿರ ನಿರ್ಮಿಸುವ ಪಕ್ಷದ ಜೊತೆ ನಿಲ್ಲಬೇಕೇ ಎಂದು ಜನರು ತೀರ್ಮಾನ ಮಾಡಬೇಕು. ಟಿಪ್ಪು ಸುಲ್ತಾನನನ್ನು ಹೀರೋ ಮಾಡುವವರನ್ನು ದೂರವಿಡಿ’ ಎಂದು ಕೋರಿದರು.

ಮೇಟ್ರೋ ರೈಲು ಯೋಜನೆ ಮೂಲಕ ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಿದ್ದೇವೆ. ಬೆಂಗಳೂರು ನಗರ- ವಿಮಾನ ನಿಲ್ದಾಣ ನಡುವಿನ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆದಿದೆ. ಯಡಿಯೂರಪ್ಪ- ಬೊಮ್ಮಾಯಿ ಜೋಡಿ ಬೆಂಗಳೂರು ವಿಕಾಸಕ್ಕಾಗಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ತಂದಿದ್ದಾರೆ ಎಂದು ಅವರು ವಿವರ ನೀಡಿದರು.

ಸ್ಟಾರ್ಟ್ ಅಪ್ ಕೇಂದ್ರ ಬೆಂಗಳೂರು. ಅಭಿವೃದ್ಧಿ, ಬಂಡವಾಳ ಹೂಡಿಕೆಯಲ್ಲೂ ಅದು ಮುಂದಿದೆ. ಹೆದ್ದಾರಿಗಳ ನಿರ್ಮಾಣ, ರೈಲ್ವೆ ಮಾರ್ಗಗಳ ಆಧುನೀಕರಣಕ್ಕೆ ಗರಿಷ್ಠ ಹಣ ಹರಿದು ಬಂದಿದೆ ಎಂದ ಅವರು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೆ ವಿಧಿ ರದ್ದತಿ ಮಾಡಿದ್ದು, ಕಾಂಗ್ರೆಸ್-ಜೆಡಿಎಸ್, ಸಮತಾ-ಮಮತಾ ಇದನ್ನು ವಿರೋಧಿಸಿದ್ದರು. ಕಾಶ್ಮೀರದಲ್ಲಿ ರಕ್ತಪ್ರವಾಹ ಹರಿಯುತ್ತದೆ ಎಂದು ಬೆದರಿಸಿದ್ದರು ಎಂದು ಹೇಳಿದರು.

ಮೋದಿ ದೇಶವನ್ನು ಸುರಕ್ಷತೆಯಿಂದ ಕಾಪಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಮತಬ್ಯಾಂಕಿಗಾಗಿ ಪಿಎಫ್‍ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.

ಉಚಿತ ಪಡಿತರ ಕೊಡುಗೆ ನಮ್ಮ ಸರಕಾರದ್ದು. ದೇವೇಗೌಡ, ಸಿದ್ದರಾಮಯ್ಯ ಅವರು ಬಡವರ ಬಗ್ಗೆ ಕೇವಲ ಮಾತನಾಡುತ್ತಾರೆ. ನಿಮ್ಮ ಮತ್ತು ನಮ್ಮ ಸಾಧನೆಯ ಹೋಲಿಕೆಗೆ ಸಿದ್ಧರಿದ್ದೇವೆ. ದಕ್ಷಿಣದಲ್ಲಿ ಬಿಜೆಪಿಯ ಆಡಳಿತದ ಮಹಾದ್ವಾರ ಕರ್ನಾಟಕ. ಮಂಡ್ಯದ ರ್ಯಾಲಿ ಅತ್ಯಂತ ಬೃಹತ್ತಾದುದು. ಕಾಂಗ್ರೆಸ್ ಪಕ್ಷದವರು ಹೊಸ ವಿಚಾರಗಳನ್ನು ತಂದು ಮತ ಕೇಳುತ್ತಾರೆ. ಕಾಂಗ್ರೆಸ್ಸಿಗೆ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ಅವರು ನೆನಪಿಸಿದರು.

ಜೆಡಿಎಸ್-ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜೊತೆಗೂಡುತ್ತವೆ. 2018ರಲ್ಲೂ ಹೀಗೆ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Similar News