ಜ.1ರಿಂದ ನಮ್ಮ ಮೆಟ್ರೊ ಗುಂಪು ಪ್ರಯಾಣಕ್ಕೆ ಶೇ 20ರಷ್ಟು ರಿಯಾಯಿತಿ

Update: 2022-12-31 14:42 GMT

ಬೆಂಗಳೂರು, ಡಿ.31: ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‍ಸಿಎಲ್)ವು ಜ.1ರಿಂದ ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ ಕ್ರಮವಾಗಿ ಶೇ.15 ಮತ್ತು ಶೇ.20ರಷ್ಟು ರಿಯಾಯಿತಿ ನೀಡುವ ಕೊಡುಗೆಯನ್ನು ಪ್ರಕಟಿಸಿದೆ. 

ಮಧ್ಯಮ ಗುಂಪಿನ(100-1000 ಜನರು) ಎಲ್ಲರೂ ಒಂದೇ ನಿಲ್ದಾಣದಲ್ಲಿ ಪ್ರವೇಶ ಪಡೆದು, ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಶೇ.15ರಷ್ಟು ರಿಯಾಯಿತಿ ಸಿಗಲಿದೆ. ನಮೂದಿಸಿದ ವಿವಿಧ ನಿಲ್ದಾಣಗಳಿಂದ 35 ರೂ. ಪ್ರತ್ಯೇಕವಾಗಿ ಪಾವತಿಸಿ ಸಂಚರಿಸಲಿರುವ ಪ್ರಯಾಣಿಕರು, ನಿರ್ದಿಷ್ಟ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

ದೊಡ್ಡ ಗುಂಪು(1,000ಕ್ಕಿಂತ ಹೆಚ್ಚು) ಸಗಟು ಟಿಕೆಟ್ ಖರೀದಿ ಮಾಡಿದರೆ ಒಂದೇ ನಿಲ್ದಾಣದಲ್ಲಿ ಪ್ರವೇಶ ಪಡೆದು, ಎಲ್ಲರೂ ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತದೆ. 30 ರೂ. ಪ್ರತ್ಯೇಕವಾಗಿ ನೀಡಿ ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಿ, ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬಹುದು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

ಈಗಾಗಲೇ 25 ರಿಂದ 99 ಸಂಖ್ಯೆಯ ಚಿಕ್ಕಗುಂಪಿನ ಪ್ರಯಾಣಿಕರ ಅನುಕೂಲಕ್ಕೆ ಶೇ. 10ರಷ್ಟು ರಿಯಾಯಿತಿ ನೀಡಲಾಗಿದೆ. ಇದು ಒಂದೇ ಪ್ರಯಾಣಕ್ಕೆ ಸೀಮಿತವಾಗಿರುತ್ತದೆ.

ಮಧ್ಯಮ ಮತ್ತು ದೊಡ್ಡ ಗುಂಪಿನಲ್ಲಿ ಪ್ರಯಾಣಿಸಲು ಪ್ರಯಾಣದ ದಿನಾಂಕ, ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ನಿಲ್ದಾಣ, ನಿರ್ಗಮನ ನಿಲ್ದಾಣ ಮತ್ತು ಪ್ರಯಾಣದ ಉದ್ದೇಶವನ್ನು ಸೂಚಿಸುವ ಮೂಲಕ, ಪ್ರಯಾಣದ ದಿನಾಂಕದಿಂದ ಕನಿಷ್ಠ 7 ದಿನಗಳ ಮುಂಚಿತವಾಗಿ ನಿಗಮಕ್ಕೆ ಬರಹದ ಮೂಲಕ ಮನವಿ ಸಲ್ಲಿಸಬೇಕು. ನಿಗಮವು ಪ್ರಯಾಣದ ವಿವರಗಳನ್ನು ಸೂಚಿಸುವ ಪತ್ರ ಅಥವಾ ಗುಂಪು ಟಿಕೆಟ್‍ಗಳನ್ನು ನೀಡುತ್ತದೆ ಎಂದು ಬಿಎಂಆರ್‍ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Similar News