ಬಿಲ್‍ಗಳನ್ನು ಪಾವತಿಸಲು ನೂತನ ಕ್ರಮಕ್ಕೆ ಬಿಬಿಎಂಪಿ ಚಿಂತನೆ

Update: 2022-12-31 18:28 GMT

ಬೆಂಗಳೂರು, ಡಿ. 31: ಬಿಬಿಎಂಪಿಯಲ್ಲಿ ಕಾಮಗಾರಿ, ವೇತನ ಸಹಿತ ಎಲ್ಲ ಬಿಲ್‍ಗಳನ್ನು ಅದೇ ತಿಂಗಳಿನಲ್ಲಿ ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ನೂತನ ಕ್ರಮವನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತಿಳಿಸಿದ್ದಾರೆ. 

ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ವಾರ್ಡ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಕೆಳಹಂತದ ನೌಕರರಿಗೆ ಮೊದಲು ಹಣವನ್ನು ಪಾವತಿ ಮಾಡಲು ನಿರ್ಧರಿಸಲಾಗಿದೆ. ಮಾರ್ಷಲ್‍ಗಳು, ಡಿ-ಗ್ರೂಪ್ ಮತ್ತು ಗುತ್ತಿಗೆ ನೌಕರರಿಗೆ ಮೊದಲು ಸಂಬಳವನ್ನು ನೀಡಲಾಗುತ್ತದೆ. ನಂತರ ಪೌರಕಾರ್ಮಿಕರಿಗೆ, ಕಸ ಸಂಗ್ರಹಿಸುವ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡಲಾಗುತ್ತದೆ ಎಂದರು. 

ಬೀದಿ ದೀಪ ಅಳವಡಿಕೆ, ಪಾರ್ಕ ನಿರ್ವಹಣೆ, ಕೆರೆ ನಿರ್ವಹಣೆ ಮತ್ತು ತ್ಯಾಜ್ಯ ನಿರ್ವಹಣೆಗೆ ಹಣವನ್ನು ಪಾವತಿ ಮಾಡಲು ಕ್ರಮ ವಹಿಸಲಾಗುತ್ತದೆ. ಹೀಗೆ ಬಿಲ್‍ಗಳನ್ನು ಪಾವತಿ ಮಾಡಿದ ಬಳಿಕವೇ ಬಿಬಿಎಂಪಿ ವ್ಯಾಪ್ತಿಯ ಎ-ಗ್ರೂಪ್ ಅಧಿಕಾರಿಗಳಿಗೆ ಸಂಬಳವನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದರು. 

ಪ್ರತಿವರ್ಷ ಡಿಸೆಂಬರ್ ಅಂತ್ಯಕ್ಕೆ ಶೇ.75ರಷ್ಟು ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ ಈ ವರ್ಷ ಶೇ.68ರಷ್ಟು ಮಾತ್ರ ಸಂಗ್ರಹವಾಗಿದೆ. ಆರ್ಥಿಕ ವರ್ಷಾಂತ್ಯಕ್ಕೆ ಇನ್ನೂ 1400 ಕೋಟಿ ರೂ.ಗಳು ಸಂಗ್ರಹ ಆಗಬೇಕಾಗಿರುತ್ತದೆ. ಮಾರ್ಚ್ ಅಂತ್ಯಕ್ಕೆ ಈ ತೆರಿಗೆಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಇನ್ನು ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಬ್ರಿಗೇಡ್ ರಸ್ತೆಯಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪೂರ್ವ ವಲಯದ ಜಂಟಿ ಆಯುಕ್ತರು ಕ್ರಮ ವಹಿಸುತ್ತದೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಸೇರಿ ಇತರೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಅವುಗಳಿಗೆ ಆಗುವ ಖರ್ಚುಗಳ ಬಗ್ಗೆ ಜಂಟಿ ಆಯುಕ್ತರು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು. 

Similar News