ಅಂಬೇಡ್ಕರ್ ಬದುಕಿನ ಸುತ್ತಮುತ್ತ...

Update: 2023-06-30 10:50 GMT

ಡಾ.ಎಂ. ವೆಂಕಟಸ್ವಾಮಿ


ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗುತ್ತದೆ ಎನ್ನುವ ಈ ಕಾಲದಲ್ಲಿ ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ಅವರು ಹಾಕಿಕೊಟ್ಟ ಸಾಮಾಜಿಕ ಬುನಾದಿಯ ಬಗ್ಗೆ ಪದೇಪದೇ ಹೇಳುತ್ತಲೇ ಇರಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿಬಿಟ್ಟಿದೆ. ಪ್ರೊ. ಎಚ್.ಟಿ.ಪೋತೆ ಅವರು ಬರೆದಿರುವ ‘ಅಂಬೇಡ್ಕರ್ ಮತ್ತು...’ 290 ಪುಟಗಳ ಈ ಕೃತಿಯಲ್ಲಿ 25 ಲೇಖನಗಳಿದ್ದು, ಅಂಬೇಡ್ಕರ್ ಅವರ ವ್ಯಕ್ತಿ ಚಿತ್ರಣ, ಅವರ ಹೋರಾಟ ಮತ್ತು ಸಮಾಜಕ್ಕಾಗಿ ಅವರು ನಡೆಸಿದ ಅವಿರತ ಆಂದೋಲನಗಳು ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿದ ವಿಷಯಗಳ ಬಗ್ಗೆ ಚಿತ್ರಿಸಲಾಗಿದೆ. ಅಂಬೇಡ್ಕರ್ ಅವರ ತಂದೆ ರಾಮ್‌ಜಿ ಸಕ್ಪಾಲ್, ರಮಾಬಾಯಿ, ಸವಿತಾ ಅಂಬೇಡ್ಕರ್, ಇವರ ಜೊತೆಗಿನ ಸಂಬಂಧಗಳ ಚಿತ್ರಣ, ಅಂಬೇಡ್ಕರ್ ಅವರ ಮೂಲಕ ಹುಟ್ಟಿಕೊಂಡ ದಲಿತ ಚಳವಳಿ, ಕೋಮುಸೌಹಾರ್ದತೆ, ಸ್ತ್ರೀವಾದಿ ದೃಷ್ಟಿ ಮತ್ತು ಅಂಬೇಡ್ಕರ್ ಜೀವನದ ಕೆಲವು ವಿಶೇಷ ಘಟನೆಗಳನ್ನು ಚಿತ್ರಿಸಲಾಗಿದೆ. ಅಂಬೇಡ್ಕರ್ ಇಲ್ಲದೆ ಈ ಹೊತ್ತು, ದಲಿತಲೋಕ, ಮಾನವೀಯ ಮೌಲ್ಯ, ನೈತಿಕತೆ, ಅವರ ಪುಸ್ತಕ ಪ್ರೀತಿ, ಅವರನ್ನು ಪ್ರಭಾವಿಸಿದವರು ಹೀಗೆ ಅನೇಕ ವಿಷಯಗಳನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ.

ಕೃತಿಯಲ್ಲಿ ಅಂಬೇಡ್ಕರ್ ಅವರ ಈ ಮಾತುಗಳು ಇಲ್ಲಿ ಉಲ್ಲೇಖನಿಯ: ‘‘ಸ್ವಾಭಿಮಾನದಿಂದ ಈ ಜಗತ್ತಿನಲ್ಲಿ ಬದುಕುವುದನ್ನು ಕಲಿಯಿರಿ. ಈ ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಅಭಿಲಾಷೆಯನ್ನು ಹೊಂದಿರಿ, ಶ್ರಮ ಪಡುವವರನ್ನು ಇದೊಂದೇ ಮೇಲೆತ್ತುತ್ತದೆ. ವಿಶ್ವದಲ್ಲಿ ನಾನು ಮೇಲೆ ಬರಲು ಸಾಧ್ಯವೇ ಇಲ್ಲ ಎಂಬ ಕೀಳರಿಮೆಯನ್ನು ಬಿಟ್ಟುಬಿಡಿ, ಕಾಲ ಬದಲಾಗಿದೆ, ಹೊಸ ಯುಗ ಆರಂಭವಾಗಿದೆ. ಪ್ರತಿಯೊಬ್ಬರೂ ಎಲ್ಲಾ ಕಡೆ, ಎಲ್ಲಾ ಉದ್ಯಮಗಳಲ್ಲೂ ರಾಜಕೀಯದಲ್ಲಿ, ಶಾಸನ ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳು ಸೃಷ್ಟಿಯಾಗಿರುವುದರಿಂದ, ತಾವು ಸಾಧಿಸಬೇಕಾದದ್ದನ್ನು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿವೆ...’’ ಪ್ರೊ.ಎಚ್.ಟಿ. ಪೋತೆ ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ ಅನುವಾದಕ, ಚಿಂತಕ ಜನಪದ ವಿದ್ವಾಂಸ ಹಾಗೂ ಸಂಶೋಧಕರಾಗಿದ್ದಾರೆ. ಇವರ ಅನೇಕ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ‘ಅಂಬೇಡ್ಕರ್ ಭಾರತ’, ಮತ್ತು ‘ಬಯಲೆಂಬೋ ಬಯಲು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ. ಇವರ ಕೃತಿ ‘ಅಂಬೇಡ್ಕರ್ ಮತ್ತು...’ ಇನ್ನೊಂದು ರೀತಿಯ ಸಂಶೋಧನೆಯಾಗಿದ್ದು ಓದಲೇಬೇಕಾದ ಕೃತಿಯಾಗಿದೆ.


ಕೃತಿ: ಅಂಬೇಡ್ಕರ್ ಮತ್ತು...
(ಅಂಬೇಡ್ಕರ್ ಕುರಿತ ಪುಸ್ತಕ)
ಲೇಖಕರು: ಪ್ರೊ.ಎಚ್.ಟಿ.ಪೋತೆ

ಬೆಲೆ: 300 ರೂ

ಪ್ರಕಾಶಕರು: ಸಪ್ನಾ ಬುಕ್ ಹೌಸ್

Similar News