ಸುಳ್ಯ: ಅರಂತೋಡಿನಲ್ಲಿ ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ಸಭೆ

Update: 2023-01-01 13:07 GMT

ಸುಳ್ಯ: ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ಸಭೆ ಶುಕ್ರವಾರ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು ಮತ್ತು ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರು ಸುಳ್ಯ ತಾಲೂಕು ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಕಳೆದ 35 ವರ್ಷಗಳಿಂದ ಈ ಭಾಗದ ರೈತರ ಮೂಲ ಕೃಷಿಯಾದ ಅಡಿಕೆ ಬೆಳೆಗೆ ಹಳದಿ ರೋಗ ಬಂದು ಸಂಪೂರ್ಣ ನಾಶ ಹೊಂದಿದ ಗ್ರಾಮಗಳಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮದವರು ಸೇರಿದ್ದಾರೆ. ಇದರಿಂದ ಕಂಗಾಲದ ರೈತರು ಎಲ್ಲಾ ಸ್ಥರದ ಜನಪ್ರತಿನಿಧಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ತಮ್ಮ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸುವ ಪ್ರಯತ್ನ ವಿಫಲವಾಗಿದೆ. ಆದ್ದರಿಂದ ಕೃಷಿಕರೆಲ್ಲ ಯಾವುದೇ ರಾಜಕೀಯವನ್ನು ಮಾಡದೆ ಪಕ್ಷೇತರವಾಗಿ ಡಾ. ವೀರೇಂದ್ರ ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಮೂಡಿಸುವ ಪ್ರಯತ್ನ ಇದಾಗಿದೆ ಈ ಬಗ್ಗೆ ಅವರು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಈ ಒಂದು ಹೋರಾಟದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಡುವಲ್ಲಿ ಮತ್ತು ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ಪರ್ಯಾಯ ಕೃಷಿ ಮಾಡಲು ಸರಕಾರದಿಂದ ಎಕರೆ ಒಂದಕ್ಕೆ 5 ಲಕ್ಷ ಮತ್ತು ದೀರ್ಘಾವಧಿ ಸಾಲಗಳನ್ನು ಬಡ್ಡಿ ರಹಿತವಾಗಿ 10 ವರ್ಷಗಳ ಕಾಲ ಮುಂದೂಡಲು ಪ್ರಮುಖ ಬೇಡಿಕೆಯನ್ನು ಸಭೆಯ ಮುಂದೂಡಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್ ಎ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಸುಳ್ಯ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ವೆಂಕಪ್ಪ ಗೌಡ ಎಂ., ಅನಂತ ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜನಜಾಗೃತಿ ಅರಂತೋಡು ವಲಯದ ಅಧ್ಯಕ್ಷ ಸೋಮಶೇಖರ ಪೈಕ, ಅಡಿಕೆ ಹಳದಿ ರೋಗ ಪೀಡಿತ ಸಮಿತಿ ಸಂಚಾಲಕ ದೀಪಕ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಿ ದೇರಾಜೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಉಳುವಾರು, ಮಕರ್ಂಜ ಗ್ರಾಮದ ಅಡಿಕೆ ಹಳದಿ ರೋಗ ಪೀಡಿತ ಸಮಿತಿ ಸಂಚಾಲಕ ಜಗನ್ನಾಥ ಕಾಯರ, ಸೂಪರ್ ಮೊದಲಾದವರು ಉಪಸ್ಥಿತರಿದ್ದರು.

ಸಭೆಯ ಉದ್ದೇಶದ ಬಗ್ಗೆ ಸಂಚಾಲಕರಾದ ಎನ್.ಎ. ರಾಮಚಂದ್ರ, ಭವಾನಿ ಶಂಕರಾಚಾರ್ಯ ದೀಪಕ್ ಕುತ್ತಮೊಟ್ಟೆ, ವೆಂಕಪ್ಪಗೌಡ ಎಂ., ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಊರವರಾದ ಕೆ.ಆರ್. ಗಂಗಾಧರ, ಉಮಾಶಂಕರ ತೊಡಿಕಾನ, ಶಿವಾನಂದ ಕುಕ್ಕುಂಬಳ, ಕೇಶವ ಅಡ್ತಲೆ ಮಾತನಾಡಿದರು.

ಮುಂದಿನ ಹೋರಾಟಕ್ಕಾಗಿ ಅರಂತೋಡು- ತೊಡಿಕಾನ ಗ್ರಾಮಗಳ ಜಂಟಿ ಸಮಿತಿಯನ್ನು ಮಾಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುಧೀರ್ ಸ್ವಾಗತಿಸಿ, ಭವಾನಿಶಂಕರ ಅಡ್ತಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Similar News