​ನೋಟು ನಿಷೇಧ: ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು

Update: 2023-01-01 17:08 GMT

ಹೊಸದಿಲ್ಲಿ,ಜ.1: ಒಂದು ಸಾವಿರ ಮತ್ತು ಐದು ನೂರು ರೂ.ಮುಖಬೆಲೆಗಳ ನೋಟುಗಳನ್ನು ನಿಷೇಧಿಸುವ ಕೇಂದ್ರ ಸರಕಾರದ 2016ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪ್ರಕಟಿಸಲಿದೆ.

ಚಳಿಗಾಲದ ರಜೆಯ ಬಳಿಕ ಸರ್ವೋಚ್ಚ ನ್ಯಾಯಾಲಯವು ಜ.2ರಂದು ಪುನರಾರಂಭಗೊಳ್ಳಲಿದ್ದು,ಜ.4ರಂದು ನಿವೃತ್ತರಾಗಲಿರುವ ನ್ಯಾ.ಎಸ್.ಎ.ನಝೀರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೋಟು ನಿಷೇಧ ಕುರಿತು ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸರ್ವೋಚ್ಚ ನ್ಯಾಯಾಲಯದ ಸೋಮವಾರದ ಕಲಾಪ ಪಟ್ಟಿಯಂತೆ ಈ ವಿಷಯದಲ್ಲಿ ಎರಡು ಪ್ರತ್ಯೇಕ ತೀರ್ಪುಗಳಿರಲಿದ್ದು, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನಾ ಅವರು ಅವುಗಳನ್ನು ಪ್ರಕಟಿಸಲಿದ್ದಾರೆ.

ಎರಡೂ ತೀರ್ಪುಗಳು ಏಕರೂಪದ್ದಾಗಿವೆಯೇ ಅಥವಾ ಭಿನ್ನವಾಗಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ನ್ಯಾಯಮೂರ್ತಿಗಳಾದ ನಝೀರ್,ಗವಾಯಿ ಮತ್ತು ನಾಗರತ್ನಾ ಜೊತೆಗೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರು ಐವರು ನ್ಯಾಯಾಧೀಶರ ಪೀಠದ ಇತರ ಸದಸ್ಯರಾಗಿದ್ದಾರೆ.

Similar News