ಆರ್‌ಬಿಐ ತಿರಸ್ಕರಿಸಿದ್ದ ನೋಟ್‌ಬ್ಯಾನ್ ಪ್ರಸ್ತಾವ

Update: 2023-01-02 05:18 GMT

2016ರ ನವೆಂಬರ್ 8ರಂದು ನರೇಂದ್ರ ಮೋದಿ ಸರಕಾರವು ಕೈಗೊಂಡ ಸಾವಿರ ಮತ್ತು ಐನೂರು ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ತಿಂಗಳ ಮೊದಲು,ಭಾರತೀಯ ರಿಸರ್ವ್ ಬ್ಯಾಂಕ್ ಈ ಯೋಚನೆಯನ್ನು ಬಲವಾಗಿ ವಿರೋಧಿಸಿತ್ತು.

2016ರ ಮಾರ್ಚ್ 15ರಂದು, ಕರ್ನಾಟಕದ ಭ್ರಷ್ಟಾಚಾರ ವಿರೋಧಿ ಸಮಿತಿಯು ಪ್ರಧಾನಿ, ಹಣಕಾಸು ಸಚಿವರು ಮತ್ತು ಆರ್‌ಬಿಐ ಗವರ್ನರ್‌ಗೆ ಬರೆದ ಪತ್ರದಲ್ಲಿ ಕಪ್ಪುಹಣವನ್ನು ನಿಭಾಯಿಸಲು 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಬೇಕು ಎಂದು ಸೂಚಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್‌ಬಿಐ, 500 ಮತ್ತು 1,000 ರೂ. ಮುಖ ಬೆಲೆಯ ನೋಟುಗಳು ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಶೇ.85ರಷ್ಟಿವೆ ಮತ್ತು ಸಾರ್ವಜನಿಕರಿಗೆ ನಗದು ಅಗತ್ಯಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿವೆ. ಈ ದೃಷ್ಟಿಯಿಂದ, ಹೆಚ್ಚಿನ ಮುಖಬೆಲೆಯ 500 ಮತ್ತು 1,000 ನೋಟುಗಳನ್ನು ಹಿಂಪಡೆಯುವುದು ಪ್ರಸಕ್ತ ಕಾರ್ಯಸಾಧ್ಯವಲ್ಲ ಎಂದಿತ್ತು. ಹೀಗೆ ರಘುರಾಮ್ ರಾಜನ್ ನೇತೃತ್ವದ ಆರ್‌ಬಿಐ ನೋಟು ಅಮಾನ್ಯೀಕರಣವನ್ನು ತಿರಸ್ಕರಿಸಿತ್ತು

ರಘುರಾಮ್ ರಾಜನ್ ಅವರು ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ಆಗಿದ್ದಾಗ ಕೇಂದ್ರ ಸರಕಾರದ ನೋಟುಅಮಾನ್ಯೀಕರಣದ ಕ್ರಮವನ್ನು ಆರ್‌ಬಿಐ ರಸ್ಕರಿಸಿತ್ತು. ಆದಾಗ್ಯೂ, ರಾಜನ್ ಸೆಪ್ಟಂಬರ್ 4, 2016 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಸರಕಾರವು ನೋಟು ಅಮಾನ್ಯೀಕರಣದ ಕಸರತ್ತಿಗೆ ಮುಂದಾಯಿತು. ರಾಜನ್ ಅವಧಿಯಲ್ಲಿ ಉಪ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ಗವರ್ನರ್ ಸ್ಥಾನಕ್ಕೆ ಬಂದ ಎರಡೇ ತಿಂಗಳಲ್ಲಿ ಇದು ಆಯಿತು.

ಆದಾಗ್ಯೂ, ಕಳೆದ ತಿಂಗಳು, ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತು. ಆರ್‌ಬಿಐನ ಕೇಂದ್ರೀಯ ಮಂಡಳಿಯ ನಿರ್ದಿಷ್ಟ ಶಿಫಾರಸಿನ ಮೇರೆಗೆ ನೋಟು ನಿಷೇಧವನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿತು. ಶಿಫಾರಸಿನ ಅನುಷ್ಠಾನಕ್ಕಾಗಿ ಆರ್‌ಬಿಐ ಕರಡು ಯೋಜನೆಯನ್ನು ಸಹ ಪ್ರಸ್ತಾವಿಸಿತ್ತು ಎಂದೂ ಕೇಂದ್ರ ನೋಟು ಅಮಾನ್ಯೀಕರಣದ ಕ್ರಮವನ್ನು ಪ್ರಶ್ನಿಸಿದ 58 ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೇಳಿದೆ. 

ಅಸ್ತಿತ್ವದಲ್ಲಿರುವ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳ ಕಾನೂನು ಟೆಂಡರ್ ಸ್ವರೂಪವನ್ನು ಹಿಂಪಡೆಯಲು ಆರ್‌ಬಿಐ ಕೇಂದ್ರೀಯ ಮಂಡಳಿಯು ಕೇಂದ್ರ ಸರಕಾರಕ್ಕೆ ನಿರ್ದಿಷ್ಟ ಶಿಫಾರಸು ಮಾಡಿತ್ತು ಎಂದು ಸರಕಾರ ಹೇಳಿಕೊಂಡಿದೆ. ಶಿಫಾರಸು ಮತ್ತು ಕರಡು ಯೋಜನೆಯನ್ನು ಕೇಂದ್ರ ಸರಕಾರವು ಸರಿಯಾಗಿ ಪರಿಗಣಿಸಿದೆ ಮತ್ತು ಅದರ ಆಧಾರದ ಮೇಲೆ, ನಿಗದಿತ ಬ್ಯಾಂಕ್ ನೋಟುಗಳು ಕಾನೂನುಬದ್ಧ ಟೆಂಡರ್ ಆಗುವುದಿಲ್ಲ ಎಂದು ಘೋಷಿಸುವ ಅಧಿಸೂಚನೆಯನ್ನು ಭಾರತದ ಗಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅದು ಸೇರಿಸಿದೆ.

ಆರ್‌ಬಿಐ ಮಂಡಳಿಗೆ ಯಾವುದೇ ಯೋಜನೆ ಬಗ್ಗೆ ತಿಳಿದಿರಲಿಲ್ಲ. ನವೆಂಬರ್ 8, 2016 ರಂದು ಪ್ರಧಾನ ಮಂತ್ರಿಯವರು ನಿರ್ಧಾರವನ್ನು ಪ್ರಕಟಿಸುವ ಗಂಟೆಗಳ ಮೊದಲು ನಡೆದ ಆರ್‌ಬಿಐ ಕೇಂದ್ರ ಮಂಡಳಿಯ ಸಭೆಯ ನಡಾವಳಿಗಳು ಬೇರೆ ರೀತಿಯಲ್ಲಿ ಬಹಿರಂಗಗೊಂಡಿವೆ ಎಂಬುದನ್ನು ದಿ ವೈರ್ ವರದಿ ಹೇಳುತ್ತದೆ.

ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯ ಮೂಲಕ ಮಂಡಳಿಯ 561ನೇ ಸಭೆಯ ನಡಾವಳಿಯನ್ನು ಪಡೆದ ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಪ್ರಕಾರ, ಮಂಡಳಿಗೆ ಈ ಯೋಜನೆಯ ಬಗ್ಗೆ ತಿಳಿದಿರಲಿಲ್ಲ ಎಂದು ಸೂಚಿಸುವ ನಿರ್ಣಯವಿದೆ. ಈ ವಿಷಯವು ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವೆ ಚರ್ಚೆಯಲ್ಲಿದೆ ಎಂದು ಮಂಡಳಿಗೆ ಭರವಸೆ ನೀಡಲಾಗಿದೆ ಎಂದು ಮಂಡಳಿ ಸಭೆ ನಿರ್ಣಯವು ಸ್ಪಷ್ಟವಾಗಿ ಹೇಳಿವೆ.

 ಸರಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಱಱನಿಗದಿತ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಸ್ವರೂಪವನ್ನು ಹಿಂದೆಗೆದುಕೊಳ್ಳುವುದು ಸ್ವತಃ ಪರಿಣಾಮಕಾರಿ ಕ್ರಮವಾಗಿದೆ ಮತ್ತು ನಕಲಿ ಹಣ, ಭಯೋತ್ಪಾದಕ ಹಣಕಾಸು, ಕಪ್ಪುಹಣ ಮತ್ತು ತೆರಿಗೆ ವಂಚನೆ ವಿರುದ್ಧದ ಹೋರಾಟದ ದೊಡ್ಡ ಕಾರ್ಯತಂತ್ರದ ಒಂದು ಭಾಗವಾಗಿದೆ. ಆದರೆ ಅದಕ್ಕೆ ಮಾತ್ರ ಸೀಮಿತವಾಗಿಲ್ಲೞೞಎಂದಿದೆ.

ಬೆಂಗಳೂರಿನ ಭೂಕಬಳಿಕೆ ವಿರೋಧಿ ಕ್ರಿಯಾ ಸಮಿತಿಯು ಜನವರಿ 12, 2016 ರಂದು ಪ್ರಧಾನಿಗೆ ಕಳುಹಿಸಿರುವ ಪತ್ರದಲ್ಲಿ ಬಹುತೇಕ ಇದೇ ಕಳವಳವನ್ನು ವ್ಯಕ್ತಪಡಿಸಿರುವುದು ಕುತೂಹಲಕಾರಿಯಾಗಿದೆ. ಭಾರತದಲ್ಲಿರುವ ಕಪ್ಪುಹಣದ ಸಮಸ್ಯೆ ಯನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್ ರಾಜನ್‌ಗೆ ಕೂಡ ಆ ಪತ್ರದ ಪ್ರತಿಯನ್ನು ಲಗತ್ತಿಸಿತ್ತು.

ಪತ್ರದಲ್ಲಿ ಮಾಜಿ ಶಾಸಕ ಹಾಗೂ ಸಮಿತಿಯ ಸಂಚಾಲಕ ಎ.ಕೆ. ರಾಮಸ್ವಾಮಿ ಅವರು ಕಪ್ಪುಹಣವು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯಾಗಿದೆ ಎಂದು ಬರೆದಿದ್ದರು. ರಾಮಸ್ವಾಮಿ ಅವರು 2006ರಲ್ಲಿ ಬೆಂಗಳೂರಿನಲ್ಲಿ ಸರಕಾರಿ ಜಮೀನುಗಳ ಒತ್ತುವರಿ ಕುರಿತು ತನಿಖೆ ನಡೆಸಿ ವರದಿ ನೀಡಲು ಕರ್ನಾಟಕ ಸರಕಾರ ರಚಿಸಿದ್ದ ಜಂಟಿ ಶಾಸಕಾಂಗ ಸಮಿತಿಯ ಅಧ್ಯಕ್ಷರಾಗಿದ್ದರು. ರಿಯಲ್ ಎಸ್ಟೇಟ್ ಮತ್ತು ಕಪ್ಪುಹಣದ ನಡುವೆ ನಿಕಟ ಸಂಬಂಧವಿದೆ ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದರು.

ಕಪ್ಪುಹಣದ ಚಲಾವಣೆ ತಡೆಯಲು ಮತ್ತು ಅದರ ಉತ್ಪಾದನೆಯನ್ನು ತಡೆಯುವ ಅಗತ್ಯವಿದೆ ಎಂದು ಹೇಳಿದ ಅವರು 1,000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಕ್ರಮವನ್ನು ಸೂಚಿಸಿದ್ದರು. ಹೀಗಾಗಿ ನೆಲಮಾಳಿಗೆಯಲ್ಲಿ ಇಟ್ಟಿರುವ ಕಪ್ಪುಹಣ ಒಂದೇ ಬಾರಿಗೆ ನಿಷ್ಪ್ರಯೋಜಕವಾಗಲಿದೆ ಎಂದು ಹೇಳಿದ್ದರು.

ಈ ಪತ್ರಕ್ಕೆ ಪ್ರಧಾನಿ, ಅವರ ಕಚೇರಿ ಮತ್ತು ಹಣಕಾಸು ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಆರ್‌ಬಿಐ ರಾಮಸ್ವಾಮಿ ಅವರಿಗೆ 2016ರ ಮಾರ್ಚ್ 15ರಂದು ಪತ್ರ ಬರೆದಿತ್ತು. ನೋಟುಗಳನ್ನು ಹಿಂಪಡೆಯುವುದು ಸೂಕ್ತ ಕ್ರಮವಲ್ಲ ಎಂದಿತ್ತು. ಇದಲ್ಲದೆ, ಆರ್‌ಬಿಐ ಕಾಯ್ದೆ, 1934ರ ಸೆಕ್ಷನ್ 24ರಂತೆ, ನೋಟುಗಳ ಮುಖಬೆಲೆ/ವಿತರಣೆ ಮಾಡದಿರುವಿಕೆ/ಮುಕ್ತಾಯಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಕೇಂದ್ರ ಸರಕಾರದ ಅನುಮೋದನೆಯ ಮೇರೆಗೆ ತೆಗೆದುಕೊಳ್ಳಲಾಗುತ್ತದೆ ಎಂದೂ ವಿವರಿಸಿತ್ತು.

ನಾಯಕ್ ಅವರು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಆಗಿ ಕೆಲಸ ಮಾಡುವಾಗ, ಆರ್‌ಟಿಐಗಳ ಮೂಲಕ ನೋಟು ಅಮಾನ್ಯೀಕರಣ ಪ್ರಕ್ರಿಯೆ ಮತ್ತು ಅದರ ಪರಿಣಾಮಗಳನ್ನು ವ್ಯಾಪಕವಾಗಿ ಗಮನಿಸಿದ್ದರು. ಆರ್‌ಬಿಐನ ನಿರ್ದೇಶಕರು ಸರಕಾರದ ನಿಲುವಿಗೆ ವಿರುದ್ಧವಾಗಿ, ಹೆಚ್ಚಿನ ಕಪ್ಪುಹಣವನ್ನು ನಗದು ರೂಪದಲ್ಲಿ ಇರಿಸಲಾಗಿಲ್ಲ. ಆದರೆ ಚಿನ್ನ ಅಥವಾ ರಿಯಲ್ ಎಸ್ಟೇಟ್‌ನಂತಹ ಆಸ್ತಿಗಳ ರೂಪದಲ್ಲಿ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ನೋಟು ಅಮಾನ್ಯೀಕರಣವು ಆ ಆಸ್ತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಅವರ ನಿಲುವಾಗಿತ್ತು.

ವಾಸ್ತವವಾಗಿ, ನವೆಂಬರ್ 8, 2016ರಂದು ಮೋದಿಯವರು ನೋಟು ಅಮಾನ್ಯೀಕರಣದ ಘೋಷಣೆಗೆ ಗಂಟೆಗಳ ಮೊದಲು ನಡೆದ ಆರ್‌ಬಿಐ ಮಂಡಳಿಯ ಸಭೆಯಲ್ಲಿ ಕೂಡ ಮಂಡಳಿಯು, ಹೆಚ್ಚಿನ ಕಪ್ಪುಹಣವು ರೂಪದಲ್ಲಿರುವುದಿಲ್ಲ ಎಂದು ತಿಳಿಸಿತ್ತು. ಈ ಕ್ರಮವು ನಕಲಿ ನೋಟುಗಳನ್ನು ತೊಡೆದುಹಾಕುತ್ತದೆ ಎಂಬ ಸರಕಾರದ ನಿಲುವನ್ನು ಆರ್‌ಬಿಐ ನಿರ್ದೇಶಕರು ತಿರಸ್ಕರಿಸಿದ್ದರು ಎಂದು ನಾಯಕ್ ಹೇಳುತ್ತಾರೆ. ನೋಟು ನಿಷೇಧದ ಪರಿಣಾಮದ ಬಗ್ಗೆ ಯಾವುದೇ ಅಧ್ಯಯನದ ಬಗ್ಗೆ ಆರ್‌ಬಿಐಗೆ ತಿಳಿದಿರಲಿಲ್ಲ. 

1,000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರದ ಕಾರ್ಯಸಾಧ್ಯತೆ, ವೆಚ್ಚ-ಪ್ರಯೋಜನ ವಿಶ್ಲೇಷಣೆ ಅಥವಾ ಪರಿಣಾಮಗಳನ್ನು ವಿಶ್ಲೇಷಿಸಲು ಕೈಗೊಂಡ ಯಾವುದೇ ಅಧ್ಯಯನದ ಬಗ್ಗೆ ತನಗೆ ತಿಳಿದಿಲ್ಲ ಎಂದು ಆರ್‌ಬಿಐ ಹೇಳಿತ್ತು.

ಮಾರ್ಚ್ 15, 2019 ರಂದು, ನಾಯಕ್ ಅವರು ಆರ್‌ಬಿಐಗೆ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ಅವರು ಭಾರತ ಸರಕಾರದ ನಿರ್ಧಾರದ ಮೊದಲು ಆರ್‌ಬಿಐ ಕೈಗೊಂಡ ಅಥವಾ ನಿಯೋಜಿಸಿದ ಅಥವಾ ಲಭ್ಯವಾಗುವಂತೆ ಮಾಡಿದ ಯಾವುದೇ ಕಾರ್ಯಸಾಧ್ಯತೆಯ ಅಧ್ಯಯನದ ಫೋಟೊಕಾಪಿಯನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ, ಆರ್‌ಬಿಐನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಜೂನ್ 17, 2019 ರಂದು ಅವರಿಗೆ ಅಂತಹ ಯಾವುದೇ ಮಾಹಿತಿ ಆರ್‌ಬಿಐನಲ್ಲಿ ಲಭ್ಯವಿಲ್ಲ ಎಂದೇ ಉತ್ತರಿಸಿದ್ದರು.

ಕೃಪೆ: thewire.in

Similar News