ಬೆಂಗಳೂರು: ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಯುವಕ
Update: 2023-01-02 15:43 IST
ಬೆಂಗಳೂರು,ಜ.2: ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಯುವಕನೋರ್ವ ಬಳಿಕ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ನಗರದ ರಾಜಾನುಕುಂಟೆ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ನಗರದ ರಾಜಾನುಕುಂಟೆ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ಬಿಟೆಕ್ ಅಭ್ಯಾಸ ಮಾಡುತ್ತಿದ್ದ ಕೋಲಾರ ಮೂಲದ ಲಯಸ್ಮಿತ (19 ) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಪವನ್ ಕಲ್ಯಾಣ್ ಆತ್ಮಹತ್ಯೆಗೆ ಯತ್ನಿಸಿ, ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ವಿದ್ಯಾರ್ಥಿನಿಯು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.