ರಸ್ತೆ, ಚರಂಡಿಯಂತಹ ಸಣ್ಣ ವಿಷಯಗಳನ್ನು ಬಿಟ್ಟು 'ಲವ್‌ಜಿಹಾದ್‌' ಕಡೆಗೆ ಗಮನ ನೀಡಿ: ನಳಿನ್‌ ಕುಮಾರ್‌ ಕಟೀಲ್‌

Update: 2023-01-03 14:06 GMT

ಮಂಗಳೂರು: ನೀವು ರಸ್ತೆ, ಮೋರಿ, ಚರಂಡಿಯಂತಹ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ. ನಿಮ್ಮ ಮಕ್ಕಳನ್ನು ಲವ್ ಜಿಹಾದ್‌ನಿಂದ ರಕ್ಷಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಟಿಎಂಎ ಪೈ ಹಾಲ್‌ನಲ್ಲಿ ಸೋಮವಾರ ನಡೆದ ‘ಬಿಜೆಪಿ ಬೂತ್ ವಿಜಯ ಅಭಿಯಾನ’ದ ದ.ಕ.ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಮತ್ ಕೈ ಎತ್ತಿಲ್ಲ, ನಳಿನ್ ನಕ್ಕಿಲ್ಲ ಎನ್ನಬೇಡಿ. ನಕ್ಕಿದರೆ ನಿಮಗೇನು ಬಂಗಾರ ಸಿಗುವುದಿಲ್ಲ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಲವ್ ಜಿಹಾದ್ ವಿರುದ್ಧ ಧ್ವನಿ ಎತ್ತಿ. ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. ಅದರ ವಿರುದ್ಧ ಕಾನೂನನ್ನು ಬಿಜೆಪಿ ಸರಕಾರ ತರುತ್ತೆ. ಲವ್ ಜಿಹಾದ್ ಬಹಳ ದೊಡ್ಡ ಸಾಮಾಜಿಕ ಪಿಡುಗಾಗಿದೆ. ಅದಕ್ಕೆ ನಿಮ್ಮ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ ಬಿಜೆಪಿಗೆ ಅಧಿಕಾರ ನೀಡಿ ಎಂದ ನಳಿನ್ ಕುಮಾರ್ ಕಟೀಲ್, ಯಕ್ಷಗಾನದಲ್ಲೂ ಬಿಜೆಪಿಯ ಪರ ಪ್ರಚಾರ ಮಾಡಿ ಎಂದು ಕರೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.

ಆಡಳಿತ ಪಕ್ಷವು ಮತದಾರರ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

"ಇದು ಅತ್ಯಂತ ಕೆಟ್ಟ ವಿಚಾರವಾಗಿದೆ. ಅವರು ಅಭಿವೃದ್ಧಿಯನ್ನು ನೋಡುತ್ತಿಲ್ಲ, ಅವರು ದ್ವೇಷವನ್ನು ನೋಡುತ್ತಿದ್ದಾರೆ. ಅವರು ದೇಶವನ್ನು ವಿಭಜಿಸಲು ನೋಡುತ್ತಿದ್ದಾರೆ ... ಅದಕ್ಕಾಗಿಯೇ ನಾವು ಅಭಿವೃದ್ಧಿಯತ್ತ ಮಾತ್ರ ಗಮನವಿಡುತ್ತಿದ್ದೇವೆ" ಎಂದು ಕರ್ನಾಟಕ ಕಾಂಗ್ರೆಸ್‌ ಮುಖ್ಯಸ್ಥ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

"ಅವರು ಕೇವಲ ಜನರ ಭಾವನೆಗಳ ಮೇಲೆ ಆಟವಾಡುತ್ತಿದ್ದಾರೆ. ನಮಗೆ ಉದ್ಯೋಗಗಳು ಬೇಕು, ಬೆಲೆ ಏರಿಕೆಯು ಜನರ ಮೇಲೆ ಪರಿಣಾಮ ಬೀರಬಾರದು ಎಂದು ನಾವು ಬಯಸುತ್ತೇವೆ. ಜನರ ದೈನಂದಿನ ಜೀವನದ ಬಗ್ಗೆ ನಾವು ಚಿಂತಿತರಾಗಿದ್ದೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Similar News