ಸಮಾಜದಲ್ಲಿ ಪರಿಣಾಮವಾಗಿ ಬದಲಾವಣೆ ಮಾಧ್ಯಮದಿಂದ ಸಾಧ್ಯ: ಗಣೇಶ್ ಕಾರ್ಣಿಕ್

Update: 2023-01-03 16:12 GMT

ಮಂಗಳೂರು: ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ ರಂಗ ಬಲಿಷ್ಠವಾಗಿದ್ದು, ಪ್ರಜಾಪ್ರಭುತ್ವದಲ್ಲಿ  ಪರಿಣಾಮಕಾರಿ ಬದಲಾವಣೆ ತರಲು ಮಾಧ್ಯಮ ರಂಗಕ್ಕೆ ಮಾತ್ರ ಇದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಕಾರ್ಯನಿರತ  ಪತ್ರಕರ್ತರ ಸಂಘದ  ಆಶ್ರಯದಲ್ಲಿ ಇಲ್ಲಿನ ಪುರಭವನದಲ್ಲಿ ನಡೆದ 3ನೇ  ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಎಲ್ಲ ರಂಗಳಲ್ಲೂ ಸವಾಲುಗಳಿರುವಂತೆ ಪತ್ರಿಕಾರಂಗದಲ್ಲಿ ಸವಾಲು ಇದೆ . ಆದರೆ ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಪತ್ರಕರ್ತರು ಧನಾತ್ಮಕವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ಯುವಜನರಲ್ಲಿ ದೇಶದ ಬಗ್ಗೆ ಗೌರವ , ಸಂಸ್ಕೃತಿಯ ಪಾಲನೆಯ ಕುರಿತು ಅರಿವು ಮೂಡಿಸುವ ಕೆಲಸ ಹೆತ್ತವರಿಂದ ಆಗಬೇಕಾಗಿದೆ ಎಂದರು.

ದ.ಕ.ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಡಾ.ಕುಮಾರ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿ, ಆಡಳಿತ ಮತ್ತು ಮಾಧ್ಯಮ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಪತ್ರಕರ್ತರಿಂದ  ಅಧಿಕಾರಿಗಳು ಕಲಿಯಲು ಬಹಳಷ್ಟಿದೆ, ಪತ್ರಕರ್ತರು ಸಮಾಜಮುಖಿ ಕೆಲಸ ಮಾಡಿದಾಗ ಅದಕ್ಕೆ ಎಲ್ಲಡೆ  ಮನ್ನಣೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾದರಿ ಸಂಘಟನೆ: ಸಮ್ಮೇಳನದ ಸರ್ವಾಧ್ಯಕ್ಷರಾದ ಸದಾಶಿವ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ದ.ಕ.ಜಿಲ್ಲಾ ಪತ್ರಕರ್ತರ ಸಂಘಟನೆ ಅತ್ಯಂತ ಕ್ರೀಯಾಶೀಲ  ಸಂಘಟನೆಯಾಗಿದೆ. ಮಂಗಳೂರಿನ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿದ್ದಾರೆ.  ಗ್ರಾಮವಾಸ್ತವ್ಯದಂತಹ ಜನಪರ ಕಾರ್ಯಗಳನ್ನು ಮಾಡುವ ಮುಖಾಂತರ ಪತ್ರಕರ್ತರು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರೆಸಿದ್ದಾರೆ ಎಂದು ಹೇಳಿದರು.

ಪತ್ರಕರ್ತರು ಮಾತಿಗಿಂತ ಹೆಚ್ಚು ಕೇಳುವರಾಗಬೇಕು. ಪತ್ರಕರ್ತರಿಂದ ಸಾಮಾಜಿಕ ಬದಲಾವಣೆ ಸಾಧ್ಯವಿದೆ  ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೂಡಬಿದ್ರೆ ಶಾಶಸಕ ಉಮಾನಾಥ್ ಕೋಟ್ಯಾನ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹರ್ಷಿಕೇಶ ಭಗವಾನ್ ಸೋನಾವನೆ  ,  ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ದಕ್ಷಿಣ ಭಾರತ ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಆಳ್ವ ,ಎಂಆರ್‌ಪಿಎಲ್‌ನ  ಜನರಲ್ ಮ್ಯಾನೇಜರ್  ರುಡಾಲ್ಫ್ ಡಿ ಕುನ್ಹಾ ಈ ಸಂದರ್ಭದಲ್ಲಿ ಮಾತನಾಡಿದರು.

ಹಿರಿಯ ಪತ್ರಕರ್ತರಾದ ಲೋಕೇಶ್ ಸುರತ್ಕಲ್, ವಿಯು ಜಾರ್ಜ್, ವೆಂಕಟೀಶ್ ಬಂಟ್ವಾಳ, ಸುರೇಖ ಜೆ.ಎಲ್, ಶೇಖ್ ಜೈನುದ್ದೀನ್, ರಘುನಾಥ್ ಕಾಮತ್, ಪುಷ್ಪರಾಜ್ ಬಿ.ಎನ್, ಜಿನ್ನಪ್ಪ ಗೌಡ, ಯಶೋಧರ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಆರು  ಮಂದಿ ವಿದ್ಯಾರ್ಥಿಗಳಿಗೆ ಕೆಯುಡಬ್ಲ್ಯುಜೆ ವತಿಯಿಂದ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿಎನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರೆ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ  ಸದಸ್ಯ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.
 
ವಿಚಾರಗೋಷ್ಠಿ: ಇದಕ್ಕೂ ಮೊದಲು ನಡೆದ ವಿಚಾರಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಮತ್ತು ಪತ್ರಿಕೋದ್ಯಮದ ಬಗ್ಗೆ ಹಿರಿಯ ಪತ್ರಕರ್ತ ಅನಿಲ್ ಶಾಸ್ತ್ರಿ ಅವರು ವಿಷಯ ಮಂಡಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಸಮನ್ವಯಕಾರರಾಗಿದ್ದರು.  ಮಂಗಳೂರು ಓಶಿಯನ್ ಪರ್ಲ್‌ನ ಉಪಾಧ್ಯಕ್ಷ ಗಿರೀಶ್ , ಉದ್ಯಮಿ ಸಾಂಬಶಿವ ರಾವ್ ಮುಖ್ಯ ಅತಿಥಿಗಳಾಗಿದ್ದರು.  ಪತ್ರಕರ್ತರಾದ ಇಬ್ರಾಹಿಂ ಅಡ್ಕಸ್ಥಳ ಸ್ವಾಗತಿಸಿದರು. ಭರತ್ ರಾಜ್ ವಂದಿಸಿದರು. ದಿನೇಶ ಇರಾ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿನ ವಿವಿಧ ತಾಲೂಕುಗಳ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ರಾಜೇಶ್ ಮಳಿ ಮತ್ತು ಶುಭ ರಾಜೇಶ್ ಮಳಿ ಇವರಿಂದ ಮ್ಯಾಜಿಕ್ ಶೋ ನಡೆಯಿತು.
 
 

Similar News