×
Ad

ಶಿಕ್ಷಣದಿಂದ ಮಾತ್ರ ಹಕ್ಕುಗಳಿಗಾಗಿ ದನಿಯೆತ್ತಲು ಸಾಧ್ಯ: ಡಾ.ಕೆ.ಷರೀಫಾ

Update: 2023-01-03 21:56 IST

ಬೆಂಗಳೂರು, ಜ.3: ಜನರ ಮನಸ್ಸನ್ನು ವಿಷಕಾರಿ ಚಿಂತನೆಗೆ ದಬ್ಬುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಣವನ್ನು ಪಡೆದುಕೊಂಡರೆ ಮಾತ್ರ ಹಕ್ಕುಗಳಿಗಾಗಿ ದನಿಯೆತ್ತಲು ಸಾಧ್ಯ ಎಂದು ಖ್ಯಾತ ಲೇಖಕಿ ಡಾ.ಕೆ.ಷರೀಫಾ ತಿಳಿಸಿದ್ದಾರೆ.

ಮಂಗಳವಾರ ಗಾಂಧಿಭವನದಲ್ಲಿ ಭೀಮ್ ಆರ್ಮಿ ವತಿಯಿಂದ ನಡೆದ ಅಕ್ಷರದವ್ವ ಸಾವಿತ್ರಿಬಾಯಿಫುಲೆರವರ 192ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಜಾತ್ಯತೀತ ಸಮಾಜ ಮತ್ತು ಮಹಿಳೆಯರ ಏಳ್ಗೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ದಿಟ್ಟ ಮಹಿಳೆ ಸಾವಿತ್ರಿಬಾಯಿಫುಲೆ ಎಂದು ಬಣ್ಣಿಸಿದರು. 

ಆದರೆ, ಇಂದು 5 ವರ್ಷ ಕಳೆದ ಹೆಣ್ಣು ಮಗುವನ್ನು ದೇವಾಲಯಗಳಿಗೆ ಸೇರಿಸಿಕೊಳ್ಳುವುದಿಲ್ಲ. ಶೋಷಿತರು ದೇವಾಲಯ ಪ್ರವೇಶಿಸಿದರೆ ದಂಡ ವಿಧಿಸುವ ವ್ಯವಸ್ಥೆಯನ್ನು ಕಂಡಾಗ ಸಾವಿತ್ರಿ ಬಾಯಿ ಸ್ಮರಣೆಗೆ ನಿಜಕ್ಕೂ ಅರ್ಥವಿದೆಯೇ ಎಂದೆನಿಸುತ್ತದೆ ಎಂದು ಷರೀಫಾ ಬೇಸರ ವ್ಯಕ್ತಪಡಿಸಿದರು.

ಕಳೆದ 200 ವರ್ಷಗಳ ಹಿಂದೆ ಸಾವಿತ್ರಿಬಾಯಿ ಅವರ ಹೋರಾಟಕ್ಕೆ ಸ್ವತಃ ಮುಸ್ಲಿಮ್ ಮಹಿಳೆಯಾದರೂ, ಸಮ ಸಮಾಜ ಕಟ್ಟುವಲ್ಲಿ ಫಾತಿಮಾ ಶೇಕ್‍ಸಾಥ್ ನೀಡಿದ್ದರು. ವಿಧವೆಯರು ಮತ್ತು ಅವರ ಮಕ್ಕಳ ಶೋಷಣೆ ವಿರುದ್ಧ ನಿಂತು ಆಶ್ರಮವನ್ನು ತೆರೆದ ಸಾವಿತ್ರಿ ಬಾಯಿಫುಲೆ, ವಿಧವಾ ವಿವಾಹ ನಡೆಸುವ ಮೂಲಕ ಪುರುಷ ಫ್ರಭುತ್ವದ ದಬ್ಬಾಳಿಕೆಗೆ ಸವಾಲೆಸೆದಿದ್ದರು ಎಂದು ಅವರು ಹೇಳಿದರು.

ಲೇಖಕಿ ಆಶಾದೇವಿ ಮಾತನಾಡಿ, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದ ಕಾಲದಲ್ಲಿ ಮಹಿಳಾ ಶಿಕ್ಷಣದ ಶಾಲೆಗಳನ್ನು ತೆರೆಯುವ ಮೂಲಕ ಸ್ತ್ರೀಯರ ಪರವಾಗಿ ಸಾವಿತ್ರಿಬಾಯಿ ಫುಲೆ ದೊಡ್ಡ ಶಿಕ್ಷಣ ಕ್ರಾಂತಿಯನ್ನೆ ನಡೆಸಿದ್ದರು. ಅಂದಿನ ಅವ್ಯವಸ್ಥೆಯ ವಿರುದ್ಧ ತಮ್ಮ ಕವಿತೆಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದರು ಎಂದು ಸಾವಿತ್ರಿಬಾಯಿ ಕಾಲದ ಘಟನೆಗಳನ್ನು ಮೆಲುಕು ಹಾಕಿದರು.

ವೈದ್ಯೆ ಡಾ.ಸರೋಜ ಲಕ್ಷ್ಮೀಪತಿಬಾಬು ಮಾತನಾಡಿ, ಪ್ರಸ್ತುತ ಆಡಳಿತ ವ್ಯವಸ್ಥೆಯು ಪಠ್ಯ ಪುಸ್ತಕ ಬದಲಾವಣೆ ಮೂಲಕ ಸ್ತ್ರೀಯರ ಅಸ್ಮಿತೆ ಸಾವಿತ್ರಿಯವರ ಪಠ್ಯವನ್ನು ಕಡೆಗಣಿಸಿದೆ. ಅಲ್ಲದೆ, ಸಂವಿಧಾನ ತಿದ್ದುಪಡಿಗಳಿಂದ ಅಂಬೇಡ್ಕರ್ ಆಶಯಗಳೇ ಕಣ್ಮರೆಯಾಗುತ್ತಿವೆ. ಎಲ್ಲರೂ ಶಿಕ್ಷಣವಂತರಾದಾಗ, ದಾರ್ಶನಿಕರ ಆದರ್ಶಗಳನ್ನು ಅರ್ಥೈಸಿಕೊಂಡಾಗ ಇದಕ್ಕೆಲ್ಲ ಪ್ರತಿರೋಧ ಒಡ್ಡಿ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಹುಟ್ಟುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ಮಾಡಲಾಯಿತು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಕಾವಲಮ್ಮ, ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಡಿ.ಎಸ್.ರಾಜಗೋಪಾಲ್ ಉಪಸ್ಥಿತರಿದ್ದರು.

Similar News