×
Ad

ಜ.5ರಂದು 25 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪ್ರಕಟ: ಬಿಬಿಎಂಪಿ

Update: 2023-01-03 22:49 IST

ಬೆಂಗಳೂರು, ಜ.3: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಬಿಎಂಪಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿದ್ದು, ವಿವಾದಿತ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಬೆಂಗಳೂರಿನ ಉಳಿದ 25 ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ನಾಳೆ(ಜ.5) ಪ್ರಕಟಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮಹದೇವಪುರ, ಚಿಕ್ಕಪೇಟೆ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಜ.15ರಂದು ಪ್ರಕಟ ಮಾಡಲಾಗುತ್ತದೆ ಎಂದರು.

ಚುನಾವಣಾ ಆಯೋಗದ ಆದೇಶದಂತೆ ಪ್ರತಿವರ್ಷ ಹದಿನೆಂಟು ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಹಾಗೆಯೇ ಬೇರೆ ಸ್ಥಳದಿಂದ ಬಂದು ವಾಸವಾದವರು ಇಲ್ಲಿನ ಮತದಾರರ ಪಟ್ಟಿಗೆ ಸೇರಲು ಅಪೇಕ್ಷೆ ಪಟ್ಟರೆ, ಅಂತವರ ಹೆಸರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನಗರದಲ್ಲಿ ಸತ್ತವರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ. ಜನನ ಪ್ರಮಾಣದ ಅಂಕಿ-ಅಂಶಗಳಂತೆ ಈ ಬಾರಿ ಒಂದು ಲಕ್ಷ ಮಂದಿ ಮತದಾರರ ಪಟ್ಟಿಗೆ ಸೇರಬೇಕಾಗಿತ್ತು. ಆದರೆ 60 ಸಾವಿರ ಮಂದಿಯನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಇನ್ನು 40 ಸಾವಿರ ಮಂದಿಯನ್ನು ಸೇರಿಸಲು ಜಾಗೃತಿ ಮೂಡಿಲಾಗಿದೆ ಎಂದು ಅವರು ತಿಳಿಸಿದರು.

Similar News