ಬೈಂದೂರು: ಹುಲ್ಕಡಿಕೆಯ ಮರಾಠಿ ಸಮುದಾಯಕ್ಕೆ ಇನ್ನೂ ಸಿಗದ ಮೂಲಸೌಕರ್ಯ..!

►ಸೂಕ್ತ ರಸ್ತೆ ಸಂಪರ್ಕವಿಲ್ಲ, ಮೊಬೈಲ್ ನೆಟ್ವರ್ಕ್ ಇರುವುದೇ ಇಲ್ಲ.. ►ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Update: 2023-01-03 18:19 GMT

ಬೈಂದೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು ರಜತ, ಸ್ವರ್ಣ,ಅಮೃತ ಮಹೋತ್ಸವಗಳೆಲ್ಲವೂ ಕಳೆದರೂ ಇಲ್ಲೊಂದು ಊರು ಮಾತ್ರ ಇನ್ನೂ ಯಾವುದೇ ಮೂಲಸೌಕರ್ಯಗಳನ್ನು ಕಾಣದೇ, ಸ್ವಾತಂತ್ರ್ಯ ಪೂರ್ವದ ಸ್ಥಿತಿಯಲ್ಲೇ ಉಳಿದುಬಿಟ್ಟಿದೆ. ಆಧುನಿಕತೆ, ಅಭಿವೃದ್ಧಿ ಎಂಬುದು ಈ ಊರಿಗೆ ಹಾಗೂ ಊರಿನ ಬುಡಕಟ್ಟು ಸಮುದಾಯಕ್ಕೆ ಮರಿಚಿಕೆಯಂತಾಗಿದೆ. ಬುಡಕಟ್ಟು ಸಮುದಾಯದ ಏಳಿಗೆ ಎನ್ನುವುದು ಕೇವಲ ರಾಜಕಾರಣಿಗಳ ಭಾಷಣಕ್ಕೆ ಹಾಗೂ ಪುಸ್ತಕ, ಪತ್ರಿಕೆಗಳ ಹೇಳಿಕೆ ಸೀಮಿತ ಎಂಬಂತಿದೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳಜಿತ್ ಗ್ರಾಮದ ಹುಲ್ಕಡಿಕೆ ಗ್ರಾಮದ ಹಾಗೂ ಅಲ್ಲಿನ ಜನರ ವಾಸ್ತವದ ಸ್ಥಿತಿ ಇದು.

ಇಲ್ಲಿ ಇಲ್ಲಗಳದ್ದೆ ಸರಮಾಲೆ...: ರಾಜ್ಯದಲ್ಲೇ ಮುಂದುವರಿದ ಜಿಲ್ಲೆ ಎಂಬ ಹೆಮ್ಮೆಯ ಕಿರೀಟವನ್ನು ಧರಿಸಿರುವ ಉಡುಪಿ ಜಿಲ್ಲೆಯಲ್ಲಿ ಬೈಂದೂರು ಅಭಿವೃದ್ಧಿಯಲ್ಲಿ ಈಗಲೂ ಹಿಂದುಳಿದ ತಾಲೂಕು ಎಂದೇ ಪರಿಗಣಿಸಲ್ಪಟ್ಟಿದೆ.  ಇಲ್ಲಿನ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಪಶ್ವಿಮ ಘಟ್ಟದ ತಪ್ಪಲು ಪ್ರದೇಶವಾದ ಹುಲ್ಕಡಿಕೆ ಎಂಬಲ್ಲಿ ಅಂದಾಜು 250 ಪರಿಶಿಷ್ಟ ಪಂಗಡಕ್ಕೆ ಸೇರುವ ಮರಾಠಿ ನಾಯ್ಕ್ ಸಮುದಾಯದ ಬುಡಕಟ್ಟು ಜನಾಂಗ ಸರಿಸುಮಾರು 300 ವರ್ಷಗಳಿಂದ ವಾಸಿಸುತ್ತಿದೆ.

ಸಂಪರ್ಕ ರಸ್ತೆ, ವಿದ್ಯುತ್,  ಮೊಬೈಲ್ ನೆಟ್‌ವರ್ಕ್ ಈಗಲೂ ಇಲ್ಲದ, ಕಾಡುಪ್ರಾಣಿಗಳ ಹಾವಳಿ ದಿನನಿತ್ಯದ ತಲೆನೋವಾಗಿರುವ ಈ ಗ್ರಾಮದಲ್ಲಿ  ಮೂಲ ಸೌಕರ್ಯಗಳಿಲ್ಲದೆ ಇಲ್ಲಿನ ಮಂದಿ ಶೋಚನೀಯವಾಗಿ ಬದುಕು ವಂತಾಗಿದೆ. ಇಂಥ ಒಂದು ಹಳ್ಳಿ ಈಗಲೂ ಉಡುಪಿ ಜಿಲ್ಲೆಯಲ್ಲಿ ಇದೆ ಎಂಬುದೇ ಜನಪ್ರತಿನಿಧಿಗಳ ಅಭಿವೃದ್ಧಿಯ ದೂರದೃಷ್ಟಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಇಲ್ಲಿನ ಹೊಸೇರಿಯಿಂದ ಹುಲ್ಕಡಿಕೆ ಸಂಪರ್ಕದ ಸುಮಾರು 3-4 ಕಿ.ಮೀ. ದೂರದ ರಸ್ತೆ ಹೊಂಡಗುಂಡಿಯಿಂದ ಕೂಡಿದ್ದು ಗ್ರಾಮವಾಸಿಗಳು ಪರಿತಪಿಸಲು ಮುಖ್ಯ ಕಾರಣವಾಗಿದೆ. 15-20 ವರ್ಷದ ಹಿಂದೆ ರಸ್ತೆ ಮಾಡಿದ್ದು ಆ ಬಳಿಕ ತೇಪೆ ಕೂಡ ಹಾಕಿಲ್ಲ. ನೂರಾರು ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಹಿರಿಯ ನಾಗಾರಿಕರು ಇದೇ ಕಚ್ಚಾ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆಯಿದೆ.

ರಿಕ್ಷಾ, ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಗ್ರಾಮದ ಜನರು ಆರೋಗ್ಯ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ತೀವ್ರವಾದ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಹೆರಿಗೆ ನೋವಿನ ಸಂದರ್ಭ ಮಹಿಳೆಯರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ಶೀಘ್ರ ವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯ ಮಹಿಳೆಯರು ಒಟ್ಟಾಗಿ ಮಂಡಿಸುವ ಪ್ರಮುಖ ಬೇಡಿಕೆ

ಶಾಲೆ-ಕಾಲೇಜಿಗೆ ತೆರಳಲು ಬಾರೀ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಮತದಾನದ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 300 ವರ್ಷದಿಂದ ಮರಾಠಿ ಜನಾಂಗ ಇಲ್ಲಿ ನೆಲೆಸಿದೆ. ಹಲವು ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದರೂ ನಮ್ಮೂರು ಅಭಿವೃದ್ಧಿಯ ಮುಖ ಕಂಡಿಲ್ಲ. ನಮಗೆ ಜೀವನಾವಶ್ಯಕ ಮೂಲಸೌಕರ್ಯ ಸಿಕ್ಕಿಲ್ಲ. ಇಂದು-ನಾಳೆ ಮಾಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಶಾಸಕರು, ಸ್ಥಳೀಯ ಗ್ರಾಪಂ ಸದಸ್ಯರು ಸಹ ನಮ್ಮ ಸಂಕಷ್ಟ ನೋಡಲು ಬರುತ್ತಿಲ್ಲ. ಹುಲ್ಕಡಿಕೆ ವ್ಯಾಪ್ತಿಯಲ್ಲಿ ಮರಾಠಿ ಸಮುದಾಯದವರು ಜಾಸ್ತಿಯಿದ್ದರೂ ಜನಪ್ರತಿನಿಧಿಗಳು, ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ನಮ್ಮ ಬದುಕು ಜೈಲು ವಾಸದಂತಾಗಿದೆ.
-ಪುಟ್ಟಯ್ಯ ಮರಾಠಿ,  ಹುಲ್ಕಡಿಕೆ

ಚುನಾವಣೆ ಬಹಿಷ್ಕಾರ ಮಾಡುತ್ತೇವೆ..!
ಕಾಡುಪ್ರಾಣಿ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ರಸ್ತೆ ಅವ್ಯವಸ್ಥೆಯಿಂದ ಊರಿಗೆ ವಾಹನಗಳು ಬರೋದಿಲ್ಲ. ಬಂದರೂ ಕೂಡ ದುಪ್ಪಟ್ಟು ಹಣ ಕೇಳುತ್ತಾರೆ. ದಿನಗೂಲಿ ಮಾಡುವ ಮಂದಿ ಹೇಗೆ ಇದನ್ನು ಭರಿಸಬೇಕು.? ಹಲವು ವರ್ಷಗಳಿಂದ ಆಶ್ವಾಸನೆ ನಂಬಿಕೊಂಡು ಬಂದಿದ್ದೇವೆ. ಕಳೆದ ಗ್ರಾಪಂ ಚುನಾವಣೆ ವೇಳೆ ಬಂದ  ಶಾಸಕರು ರಸ್ತೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಸ್ಥಳೀಯಾಡಳಿತದಿಂದ ಹಿಡಿದು ರಾಜ್ಯ, ಕೇಂದ್ರ ಸರ್ಕಾರ ಬಿಜೆಪಿಯದ್ದಾಗಿದ್ದು ನಮ್ಮೂರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಶೀಘ್ರ ರಸ್ತೆ ನಿರ್ಮಾಣ ಸಹಿತ ಮೂಲಸೌಕರ್ಯ ಒದಗಿಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ.
-ದಿನಕರ ಮರಾಠಿ ಹುಲ್ಕಡಿಕೆ

ಗ್ರಾಮಸ್ಥರಿಂದ ಪ್ರತಿಭಟನೆ
ಹಲವು ವರ್ಷಗಳ ಸಮಸ್ಯೆ ಈಡೇರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ಥಳೀಯ ನೂರಾರು ಮಂದಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ಸಮಸ್ಯೆ ಬಗೆಹರಿಸಲಿ ಎಂದು ವಿದ್ಯಾರ್ಥಿ ಗಳು,ಹಿರಿಯ ನಾಗರಿಕರು, ಮಹಿಳೆಯರು ನೋವಿನ ಬೇಡಿಕೆ ಮಂಡಿಸಿದರು.
ಇಲ್ಲಿನ ಜನರು, ಗರ್ಭಿಣಿಯರು ಆಸ್ಪತ್ರೆಗೆ ತೆರಳಲು ಕಷ್ಟ. ಅಂಬುಲೆನ್ಸ್, ಆಟೋದವರು ಈ ರಸ್ತೆಯಲ್ಲಿ ಬರೋದಿಲ್ಲ. ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬುಡಕಟ್ಟು ಜನಾಂಗದ ಬಗ್ಗೆ ನಾಯಕರು ಯಾಕೆ ಇಂತಹ ದೋರಣೆ ತಳೆದಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಪ್ರಧಾನಿ ಮೋದಿಯವರಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿ ರಸ್ತೆ ಸಮಸ್ಯೆ ಸರಿಪಡಿಸಿಕೊಡಿ ಎಂದು ಸುಬ್ಬಯ್ಯ ಮರಾಠಿ ಹತಾಶೆಯಿಂದ ನುಡಿದರು.

ವಿಶೇಷ ಚೇತನ ಮಕ್ಕಳಿದ್ದಾರೆ..
ಎಳಜಿತ್ ಗ್ರಾಮದ ಹುಲ್ಕಡಿಕೆಯಿಂದ ಕೊಂಚ ಮುಂದೆ ಸಾಗಿದರೆ ಗುಡಿಕೇರಿ ಎನ್ನುವ ಊರಿದೆ. ಇಲ್ಲಿಗೂ ರಸ್ತೆ ಹಾಗೂ ಸೇತುವೆ ಸಂಪರ್ಕವಿಲ್ಲ. ಇಲ್ಲಿನ ನಿವಾಸಿಗಳಾದ ಸುರೇಶ್ ಮರಾಠಿ-ಸುಜಾತ ದಂಪತಿಗಳ 12 ವರ್ಷದ ಗಂಡು, 10 ವರ್ಷದ ಹೆಣ್ಮಗಳು ವಿಕಲಚೇತನರಾಗಿದ್ದು ನಿತ್ಯ ಬೆಳಿಗ್ಗೆ 9 ಗಂಟೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸುರೇಶ್ ಶಾಲೆಗೆ ಬಿಡಬೇಕು. ಮಕ್ಕಳೊಂದಿಗೆ ಸುಜಾತಾ ಸಂಜೆ 4 ಗಂಟೆವರೆಗೆ ಶಾಲೆಯಲ್ಲಿ ಕುಳಿತಿರುತ್ತಾರೆ. ಸಂಜೆ ಸುರೇಶ್ ಅವರನ್ನು ವಾಪಾಸ್ ಕರೆತರಬೇಕು. ಹೀಗಾಗಿ ಸುರೇಶ್ ಅವರು ಕೆಲಸಕ್ಕೆ ಹೋಗಲು ಕೂಡ ಸಮಸ್ಯೆಯಾಗುತ್ತಿದೆ.

ವಿಶೇಷ ಚೇತನ ಮಕ್ಕಳಿಗೆ ಸಿಗಬೇಕಾದ ಸೌಕರ್ಯದ ಜೊತೆಗೆ ಹುಲ್ಕಡಿಕೆ ಯಿಂದ ಗುಡಿಕೇರಿ ತನಕ 1 ಕಿ.ಮೀ ರಸ್ತೆ ಹಾಗೂ ಇಲ್ಲಿನ ಒಂದು ಸೇತುವೆ ನಿರ್ಮಾಣವಾದಲ್ಲಿ ಊರಿನ ಜನತೆಗೆ ಅನುಕೂಲವಾಗಲಿದೆ ಎಂಬುದು ಅವರ ಬೇಡಿಕೆಯಾಗಿದೆ.

Similar News