×
Ad

ಮಹಾದಾಯಿ ಯೋಜನೆಗೆ ಡಬಲ್ ಎಂಜಿನ್ ಸರಕಾರದಿಂದ ವಂಚನೆ: ಬೃಜೇಶ್ ಕಾಳಪ್ಪ

Update: 2023-01-03 23:14 IST

ಬೆಂಗಳೂರು, ಜ.2: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಬಿಜೆಪಿ ಸರಕಾರವು ರಾಜ್ಯದ ಜನರನ್ನು ವಂಚಿಸುತ್ತಿದೆ. ಕೇವಲ ಚುನಾವಣೆಯ ಉದ್ದೇಶದಿಂದ ಕೇಂದ್ರ ಜಲ ಆಯೋಗವು(ಸಿಡಬ್ಲ್ಯೂಸಿ) ಅನುಮತಿ ನೀಡಿದೆ ಎಂದು ಮಹಾದಾಯಿ ನದಿ ವಿವಾದ ನ್ಯಾಯಮಂಡಳಿಯಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿದ್ದ ಎಎಪಿ ಮುಖಂಡ ಬೃಜೇಶ್ ಕಾಳಪ್ಪ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಹಾದಾಯಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ಸಿಡಬ್ಲ್ಯೂಸಿ ಅನುಮತಿ ಪತ್ರದಂತೆ ಕಾಣುವ ದಿನಾಂಕವಿಲ್ಲದ ಪತ್ರವೊಂದನ್ನು ಡಿ.29ರಂದು ಟ್ವೀಟ್ ಮಾಡಿದ್ದಾರೆ. ಡಬಲ್ ಎಂಜಿನ್ ಸರಕಾರ ಮಹಾದಾಯಿ ವಿವಾದದಲ್ಲಿ ರಾಜ್ಯಕ್ಕೆ ನ್ಯಾಯ ದೊರೆಕಿಸಿಕೊಟ್ಟಿದೆ ಎಂದು ಇಷ್ಟಕ್ಕೇ ಬಿಂಬಿಸುವುದು ಸರಿಯಲ್ಲ ಎಂದರು.

ಕೇಂದ್ರ ಸರಕಾರವು 2002ರ ಎ.30ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗ ಇದೇ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಅಧಿಕಾರದಲ್ಲಿತ್ತು. ಐದು ತಿಂಗಳ ಬಳಿಕ ತಾತ್ವಿಕ ಒಪ್ಪಿಗೆಯನ್ನು ಬಿಜೆಪಿ ಸರಕಾರವೆ ಅಮಾನತಿನಲ್ಲಿ ಇಟ್ಟಿತು. ಆದರೆ ಈಗ ಅನುಮತಿ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಕರ್ನಾಟಕಕ್ಕೆ ಬಿಜೆಪಿ ಮಾಡಿದ್ದ ಈ ದ್ರೋಹವನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.

2006ರಲ್ಲಿ ಗೋವಾ ಸರಕಾರವು ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದರಿಂದ, 2010ರಲ್ಲಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ನ್ಯಾ.ಜೆ.ಎಂ.ಪಂಚಾಲ್ ನೇತೃತ್ವದಲ್ಲಿ ಮಹಾದಾಯಿ ನದಿ ವಿವಾದ ನ್ಯಾಯಮಂಡಳಿಯನ್ನು(ಎಂಡಬ್ಲ್ಯೂಡಿಟಿ) ರಚಿಸಿತು ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.

ಯೋಜನೆಗೆ ಈಗ ಸಿಡಬ್ಲ್ಯೂಸಿ ಒಪ್ಪಿಗೆ ದೊರೆತಿರುವುದು, ‘ಡಬಲ್ ಎಂಜಿನ್ ಸರಕಾರದ ಸಾಮಥ್ರ್ಯ’ ಎಂಬ ಬಿಜೆಪಿಯ ವಾದವು ನಿಜವೇ ಆಗಿದ್ದರೆ, ಸಮ್ಮಿಶ್ರ ಸರಕಾರವನ್ನು ಕೆಳಗಿಳಿಸಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೇ ಯೋಜನೆಗೆ ಸಿಡಬ್ಲ್ಯೂಸಿ ಒಪ್ಪಿಗೆ ನೀಡಬೇಕಿತ್ತು. ಚುನಾವಣೆ ಸಮೀಪಿಸುವವರೆಗೆ ಕಾಯುವ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಆದ್ಮಿ ಪಾರ್ಟಿ ಮುಖಂಡ ವಿಕಾಸ್ ಸೊಪ್ಪಿನ್, ವಕೀಲ ರವಿಚಂದ್ರ ನೆಬೆರ್ಂಚಿ ಮತ್ತಿತರರು ಉಪಸ್ಥಿತರಿದ್ದರು.

“2022ರ ಎಪ್ರಿಲ್‍ನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಡಿ.31ರಂದು ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪ್ರಸಾದ್ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಜ.1ರಂದು ಉದ್ಯಮಿ ಪ್ರಸಾದ್ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಸಚಿವ ಹಾಗೂ ಶಾಸಕರನ್ನು ಪೊಲೀಸರು ಬಂಧಿಸಿಲ್ಲ. ಆದರೆ ಸರಕಾರದ ಕಮಿಷನ್ ದಂಧೆಯನ್ನು ಬಹಿರಂಗಪಡಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ 84 ವರ್ಷದ ಕೆಂಪಣ್ಣ ಅವರನ್ನು ರಾತ್ರೋರಾತ್ರಿ ಬಂಧಿಸಿದ್ದಾರೆ. ಈ ಸರಕಾರದಲ್ಲಿ ಭ್ರಷ್ಟರಿಗೆ ರಕ್ಷಣೆಯಿದೆ, ಭ್ರಷ್ಟಾಚಾರ ವಿರೋಧಿಗಳಿಗೆ ರಕ್ಷಣೆಯಿಲ್ಲ.

ಬೃಜೇಶ್ ಕಾಳಪ್ಪ, ಎಎಪಿ ಮುಖಂಡ 

Similar News