ನೋಟು ನಿಷೇಧ ಅವಾಂತರ: ಔಷಧಿ ನೀಡಿದಾತ ವೈದ್ಯನೇ ಅಲ್ಲದಿದ್ದರೆ?

Update: 2023-01-04 04:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ವಿಶ್ವದ ಬಹುತೇಕ ಆರ್ಥಿಕ ತಜ್ಞರಿಂದ ಟೀಕೆಗೊಳಗಾಗಿರುವ ಕೇಂದ್ರ ಸರಕಾರದ ನೋಟು ನಿಷೇಧವೆನ್ನುವ ಅವಸರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ, ನೋಟು ನಿಷೇಧದಿಂದ ಸಂತ್ರಸ್ತರಾದ ಕೋಟ್ಯಂತರ ಜನರ ನೋವುಗಳು, ದುಮ್ಮಾನಗಳನ್ನು ಅದು 'ಅಮಾನ್ಯ'ಗೊಳಿಸಿದೆ. ಆದರೆ ಇದೇ ಸಂದರ್ಭದಲ್ಲಿ ನ್ಯಾಯಾಧೀಶರ ಪೈಕಿ ಒಂಟಿ ಧ್ವನಿಯೊಂದು ಈ ನಿರ್ಧಾರವನ್ನು 'ಅಸಂತುಲಿತ ಹಾಗೂ ಕಾನೂನು ಬಾಹಿರ' ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನ ಪೀಠದ ಐವರು ನ್ಯಾಯಾಧೀಶರ ಪೈಕಿ ನ್ಯಾಯಾಧೀಶೆ ಬಿ. ವಿ. ನಾಗರತ್ನಾ ಅವರು ''ನೋಟು ನಿಷೇಧ ಆದೇಶವು ಕಾನೂನಿಗೆ ವಿರುದ್ಧವಾಗಿ ಚಲಾಯಿಸಿದ ಅಧಿಕಾರವಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ 26 ನೇ ವಿಧಿಯ ಪ್ರಕಾರ ಆರ್‌ಬಿಐಯ ಕೇಂದ್ರೀಯ ಮಂಡಳಿಯು ಸ್ವತಂತ್ರವಾಗಿ ನೋಟು ನಿಷೇಧಕ್ಕೆ ಶಿಫಾರಸು ಮಾಡಬೇಕಾಗಿತ್ತು. ಆರ್‌ಬಿಐ ಈ ವಿಷಯವನ್ನು ಸ್ವತಂತ್ರವಾಗಿ ವ್ಯವಹರಿಸಿಲ್ಲ ಎನ್ನುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ'' ಎಂದು ಉಲ್ಲೇಖಿಸಿದ್ದಾರೆ. ಆದರೆ ಉಳಿದ ನಾಲ್ಕು ನ್ಯಾಯಾಧೀಶರು ಒಂದಾಗಿ ಸರಕಾರದ ನಿರ್ಧಾರದ ಜೊತೆಗೆ ಗಟ್ಟಿಯಾಗಿ ನಿಂತಿದ್ದುದರಿಂದ ಈ ಒಂಟಿಧ್ವನಿ ಬದಿಗೆ ಸರಿಯಿತು. ಆದರೆ ಈ ಧ್ವನಿ ನೋಟು ನಿಷೇಧದಿಂದ ಸಂತ್ರಸ್ತರಾಗಿರುವ ಈ ದೇಶದ ಲಕ್ಷಾಂತರ ಜನರ ಧ್ವನಿಯೂ ಆಗಿರುವುದರಿಂದ ಅದನ್ನು ನಿರ್ಲಕ್ಷಿಸುವಂತಿಲ್ಲ. ತೀರ್ಪಿನ ಭಾಗವೇ ಆಗಿರುವ ಒಬ್ಬ ನ್ಯಾಯಾಧೀಶೆ ನೋಟು ನಿಷೇಧದ ವಿರುದ್ಧ ಧ್ವನಿಯೆತ್ತಿದ್ದಾರೆ ಎನ್ನುವುದು ಒಂದಿಷ್ಟು ಸಮಾಧಾನ ತರುವ ವಿಷಯವಾಗಿದೆ. ಆ ಮೂಲಕ, ಕನಿಷ್ಠ ಈ ದೇಶದ ಜನರೊಳಗಿನ ಆಕ್ಷೇಪಗಳಲ್ಲಿ ನ್ಯಾಯಾಲಯ ಸಣ್ಣಪ್ರಮಾಣದಲ್ಲಾದರೂ ಜೊತೆಯಾಗಿದೆ ಎಂದು ನಾವು ತೃಪ್ತಿ ಪಟ್ಟುಕೊಳ್ಳಬೇಕು.

 ನೋಟು ನಿಷೇಧಿಸಲು ಸರಕಾರ ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಎನ್ನುವುದನ್ನಷ್ಟೇ ತೀರ್ಮಾನಿಸುವುದು ತನ್ನ ಹೊಣೆಗಾರಿಕೆ ಎಂದು ಸುಪ್ರೀಂಕೋರ್ಟ್ ಹೇಳಿಕೊಂಡಿದೆ. ನಿಷೇಧ ತನ್ನ ಉದ್ದೇಶವನ್ನು ಸಾಧಿಸಿದೆಯೇ ಎನ್ನುವ ಪ್ರಶ್ನೆಯ ಆಧಾರದಲ್ಲಿ ನೋಟು ನಿಷೇಧದ ಸರಿ ತಪ್ಪುಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎನ್ನುವುದು ಸುಪ್ರೀಂಕೋರ್ಟ್‌ನ ಅಭಿಮತ. ನೋಟು ನಿಷೇಧ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗಿಲ್ಲ ಎನ್ನುವುದಕ್ಕಿಂತ, ಅದು ದೇಶಕ್ಕೆ ಮಾಡಿದ ಭಾರೀ ಅನ್ಯಾಯಗಳು ಇಂದು ಮುಖ್ಯವಾಗುತ್ತದೆ. ನೋಟು ನಿಷೇಧ ನಿರ್ಧಾರದ ಮುಖ್ಯ ಉದ್ದೇಶವೇ ದೇಶದಲ್ಲಿ ಕಪ್ಪು ಹಣವನ್ನು ನಿವಾರಣೆ ಮಾಡುವುದಾಗಿತ್ತು. ಅಷ್ಟೇ ಅಲ್ಲ, ನಕಲಿ ನೋಟುಗಳನ್ನು ಇಲ್ಲವಾಗಿಸುವುದು, ಭಯೋತ್ಪಾದನೆಯನ್ನು ತಡೆಯುವುದು...ಹೀಗೆ ಸಾಲು ಸಾಲು ಗುರಿಗಳನ್ನು ಪ್ರಧಾನಿ ಮೋದಿಯವರು ಮುಂದಿಟ್ಟಿದ್ದರು. ಇವೆಲ್ಲವನ್ನು ನೋಟು ನಿಷೇಧದಿಂದ ಸಾಧಿಸಲು ಸಾಧ್ಯವಾಗಲಿಲ್ಲ ಎನ್ನುವ ವಿಷಯವನ್ನು ಪಕ್ಕಕ್ಕಿಡೋಣ. ಅದರ ಬದಲಿಗೆ, ಈ ದೇಶದಲ್ಲಿರುವ ಕಪ್ಪುಹಣವೆಲ್ಲ ಸಂದರ್ಭವನ್ನು ಬಳಸಿಕೊಂಡು ಬಿಳಿಯಾದುವು. ಹೊಸ ನೋಟುಗಳು ಬಂದ ಕೆಲವೇ ದಿನಗಳಲ್ಲಿ ಹೊಸ ನಕಲಿ ನೋಟುಗಳೂ ಪತ್ತೆಯಾದವು. ಕಾಶ್ಮೀರದ ಸಮಸ್ಯೆಯಂತೂ ಮೊದಲಿಗಿಂತ ಉಲ್ಬಣಗೊಂಡಿತು. ಅಷ್ಟೇ ಅಲ್ಲ, ದೇಶದ ಆರ್ಥಿಕತೆ ಮಕಾಡೆ ಮಲಗಿತು. ಸಾವಿರಾರು ಉದ್ದಿಮೆಗಳು ಮುಚ್ಚಿದವು. ಆರ್ಥಿಕ ವಹಿವಾಟುಗಳು ನಿಂತ ನೀರಾದವು.

'ನೋಟು ನಿಷೇಧ ಭಾರತದ ಅರ್ಥ ವ್ಯವಸ್ಥೆಯ ಮೇಲೆ ನಡೆದ ಭಾರೀ ದಾಳಿಯಾಗಿತ್ತು' ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುವಂತಾಯಿತು. 'ನೋಟು ನಿಷೇಧವೆನ್ನುವುದು ಸ್ವಾತಂತ್ರೋತ್ತರ ಭಾರತದ ಬಹುದೊಡ್ಡ ಅಕ್ರಮ' ಎಂದು ಕೆಲವು ಆರ್ಥಿಕ ತಜ್ಞರು ಬಣ್ಣಿಸಿದರು. ಆರ್‌ಬಿಐಯಲ್ಲಿ ಉನ್ನತ ಸ್ಥಾನ ನಿರ್ವಹಿಸಿದ ಹಲವರು ಭಾರತದ ಅರ್ಥ ವ್ಯವಸ್ಥೆಯ ಮೇಲಾದ ಆಘಾತದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನೋಟು ನಿಷೇಧದ ಕಾರಣದಿಂದಾಗಿ ಭಾರತ ಒಂದು ದಶಕ ಹಿಂದಕ್ಕೆ ಚಲಿಸಿತು. ನಿರುದ್ಯೋಗ ಉಲ್ಬಣಗೊಂಡಿತು. ಇಷ್ಟೆಲ್ಲ ಅನಾಹುತಗಳಾಗಿವೆ ಎಂದ ಮೇಲೆ ಆ ಅನಾಹುತದ ಹಿಂದಿನ ಕಾರಣವನ್ನು ಹುಡುಕಿ, ಅವರನ್ನು ದಂಡಿಸಲೇಬೇಕಾಗುತ್ತದೆ.

ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗೆ ಸದುದ್ದೇಶದಿಂದಲೇ ವೈದ್ಯನಲ್ಲದ ವ್ಯಕ್ತಿಯೊಬ್ಬ ಔಷಧಿಯನ್ನು ನೀಡುತ್ತಾನೆ. ವ್ಯಕ್ತಿಯ ರೋಗ ಗುಣವಾಗುವುದಿಲ್ಲ ಮಾತ್ರವಲ್ಲ, ಆ ಔಷಧಿಯಿಂದಲೇ ಆತ ಮೃತಪಡುತ್ತಾನೆ. ಇಂತಹ ಸಂದರ್ಭದಲ್ಲಿ, ವೈದ್ಯನಲ್ಲದ ವ್ಯಕ್ತಿಯೊಬ್ಬ ಔಷಧಿಯನ್ನು ನೀಡಿದ್ದು ಸರಿಯೇ ಎನ್ನುವುದು ಚರ್ಚೆಗೊಳಗಾಗಲೇ ಬೇಕಾಗಿದೆ. ನೋಟು ನಿಷೇಧ ನುರಿತ ಆರ್ಥಿಕ ತಜ್ಞರಿಂದ ನಿರ್ಧಾರವಾಗಬೇಕು. ರೋಗದಿಂದ ನರಳುತ್ತಿರುವ ಅರ್ಥವ್ಯವಸ್ಥೆಗೆ ಮಾಡುವ ಗಂಭೀರ ಶಸ್ತ್ರಕ್ರಿಯೆ ಅದು. ಅದಕ್ಕೆ ಪೂರಕವಾದ ನುರಿತ ವೈದ್ಯರಿಲ್ಲದೇ ಇದ್ದರೆ ರೋಗಿ ಸಾಯುವ ಸಂಭವವಿದೆ ಎನ್ನುವ ಬಗ್ಗೆ ಶಸ್ತ್ರಕ್ರಿಯೆಯ ನೇತೃತ್ವ ವಹಿಸಿದವರಿಗೆ ಅರಿವಿರಬೇಕು. ಈ ಕಾರಣದಿಂದಲೇ ಆರ್‌ಬಿಐಯನ್ನು ಹೊರಗಿಟ್ಟುಕೊಂಡು, ಆರ್ಥಿಕ ತಜ್ಞರ ಸಲಹೆಗಳನ್ನೆಲ್ಲ ನಿರ್ಲಕ್ಷಿಸಿ ಏಕಾಏಕಿ ಅಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸರಕಾರಕ್ಕಿತ್ತೆ? ಎನ್ನುವುದು ಮುಖ್ಯವಾಗುತ್ತದೆ. ನೋಟು ನಿಷೇಧದ ನಿರ್ಧಾರದ ಹಿಂದೆ ಆರ್‌ಬಿಐ ಪಾತ್ರವೇ ಇಲ್ಲ ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದರ ಹಿಂದೆ ಆರ್ಥಿಕ ತಜ್ಞರಲ್ಲದ ಕಾರ್ಪೊರೇಟ್ ಶಕ್ತಿಗಳು ಕೆಲಸ ಮಾಡಿವೆ ಮತ್ತು ಅವುಗಳ ಹಿತಾಸಕ್ತಿಯ ಮೇರೆಗೆ ಸರಕಾರ ಕಾರ್ಯ ನಿರ್ವಹಿಸಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ.

ನೋಟು ನಿಷೇಧ ಉದ್ದೇಶ ಸಾಧಿಸಿದೆಯೇ? ಎನ್ನುವುದು ಅಪ್ರಸ್ತುತ ಎಂದಿದೆ ನ್ಯಾಯಾಲಯ. ಆದರೆ ನೋಟು ನಿಷೇಧ ಈ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವನ್ನು ಮಾಡಿರುವುದಕ್ಕೆ ಕಾರಣವೇನು? ಎನ್ನುವುದು ಖಂಡಿತವಾಗಿಯೂ ಅಪ್ರಸ್ತುತವಲ್ಲ. ನೋಟು ನಿಷೇಧ ನಿರ್ಧಾರದ ಪ್ರಕ್ರಿಯೆ ಸರಿಯಾಗಿಲ್ಲದೇ ಇರುವುದೇ ಅದು ದುಷ್ಪರಿಣಾಮವನ್ನು ಬೀರುವುದಕ್ಕೆ ಕಾರಣವಾಯಿತು. ಆದುದರಿಂದ, ಭಿನ್ನ ತೀರ್ಪು ನೀಡಿದ ನ್ಯಾಯಾಧೀಶೆ ಬಿ. ವಿ. ನಾಗರತ್ನಾ ಅವರ ಅಭಿಪ್ರಾಯಗಳು ಮಹತ್ವವನ್ನು ಪಡೆಯುತ್ತದೆ. ಬಹುಮತದ ದೃಷ್ಟಿಯಿಂದ ನಾವು ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಲೇ ಬೇಕು. ಆದರೆ, ದೇಶದ ಕುರಿತ ಕಾಳಜಿಯನ್ನಿಟ್ಟುಕೊಂಡು ನಾಗರತ್ನಾ ಅವರ ತೀರ್ಪನ್ನು ಚರ್ಚೆಗೆ ಕೈಗೆತ್ತಿಕೊಳ್ಳಲೇಬೇಕಾಗುತ್ತದೆ. ಕೇಂದ್ರ ಸರಕಾರದ ಅವಸರದ ನಿರ್ಧಾರ, ನೋಟು ನಿಷೇಧವನ್ನು ವಿಫಲಗೊಳಿಸಿತು ಮಾತ್ರವಲ್ಲ, ಅದನ್ನು ದುರುಪಯೋಗಪಡಿಸಿಕೊಂಡು ಹಲವು ಹಿತಾಸಕ್ತಿಗಳು ಅಕ್ರಮಗಳನ್ನು ಎಸಗಿದವು ಅಥವಾ ಅಂತಹ ಅಕ್ರಮಗಳನ್ನು ಎಸಗಲು ಅನುವು ಮಾಡಿಕೊಡುವುದಕ್ಕಾಗಿಯೇ ಸರಕಾರ ಅವಸರವಸರವಾಗಿ ನಿರ್ಧಾರವನ್ನು ಮಾಡಿತೆ? ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ. ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದ್ದ ಸುಪ್ರೀಂಕೋರ್ಟ್ ನುಣುಚಿಕೊಂಡಿದೆ.

ಕೇಂದ್ರ ಸರಕಾರ ನೋಟು ನಿಷೇಧದ ಮೂಲಕ ಈ ದೇಶದಲ್ಲಿ ಕಪ್ಪು ಹಣವನ್ನು ಇಲ್ಲವಾಗಿಸುತ್ತದೆ ಎಂಬ ಸಂಭ್ರಮದಿಂದ ಮಧ್ಯಮ ವರ್ಗ ಮತ್ತು ಬಡವರ್ಗ ಸರ್ವ ಆಘಾತಗಳನ್ನು ಸಹಿಸಿಕೊಂಡಿತು. ತಮ್ಮದೇ ಹಣವನ್ನು ಬ್ಯಾಂಕಿನಿಂದ ಪಡೆಯಲಾಗದೆ ಸರದಿಯಲ್ಲಿ ನಿಂತು ಒದ್ದಾಡುತ್ತಿರುವಾಗಲೂ ಕೇಂದ್ರ ಸರಕಾರದ ವಿರುದ್ಧ ತುಟಿ ಬಿಚ್ಚಲಿಲ್ಲ. ಯಾಕೆಂದರೆ, ದೇಶದ ಹಿತಾಸಕ್ತಿ ಅವರಿಗೆ ಮುಖ್ಯವಾಗಿತ್ತು. ಆದರೆ ಇಂದು ನೋಡಿದರೆ ಅದು ದೇಶದ ಹಿತವನ್ನು ಕಾಯುವ ಬದಲು ದೇಶಕ್ಕೆ ಆಘಾತವನ್ನು ನೀಡಿದೆ. ಲಕ್ಷಾಂತರ ಜನರ ತ್ಯಾಗ ಬಲಿದಾನಗಳು ವ್ಯರ್ಥವಾಗಿವೆ. ಇಂದಿಗೂ ನೋಟು ನಿಷೇಧದಿಂದ ಹೊರಬಂದ ಕಪ್ಪು ಹಣವೆಷ್ಟು ಎನ್ನುವ ಪ್ರಶ್ನೆಗೆ ಸರಕಾರ ಉತ್ತರಿಸಿಲ್ಲ. ನೋಟು ನಿಷೇಧದಿಂದ ಸಾಧಿಸಿದ್ದೇನು? ಎನ್ನುವುದರ ಬಗ್ಗೆಯೂ ಸರಕಾರದ ಮಾತಿಲ್ಲ. ಹೀಗಿರುವಾಗ, ನೋಟು ನಿಷೇಧ ನಿರ್ಧಾರ ಎಷ್ಟರಮಟ್ಟಿಗೆ ನ್ಯಾಯಸಮ್ಮತ ಎನ್ನುವ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವ ಹಕ್ಕು ಈ ದೇಶದ ಜನರಿಗೆ ಇದೆ. ಆ ಉತ್ತರ ಸರಕಾರದಿಂದ ಸಿಗಲಿಲ್ಲವಾದರೆ, ನ್ಯಾಯಾಲಯದ ಮೂಲಕವಾದರೂ ಪಡೆದುಕೊಳ್ಳಬೇಕಾಗುತ್ತದೆ. ಸುಪ್ರೀಂಕೋರ್ಟ್ ಸರಕಾರವನ್ನು ಯಾವ ರೀತಿಯಲ್ಲೇ ಸಮರ್ಥಿಸಿಕೊಳ್ಳ ಲಿ, ಪೀಠದ ಓರ್ವನ್ಯಾಯಾಧೀಶೆ ನೀಡಿದ ಭಿನ್ನ ತೀರ್ಪು ಈ ದೇಶದ ಸರ್ವ ಪ್ರಜೆಗಳ ಧ್ವನಿಯಾಗಿ ಹೊರಹೊಮ್ಮಿರುವುದು ಸತ್ಯ.

Similar News