8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ, ಬಿಜೆಪಿ ಭಕ್ತರು ಇನ್ನಾದರೂ ಮೋದಿ ಭ್ರಮೆಯಿಂದ ಹೊರಬರಲಿ: ದಿನೇಶ್ ಗುಂಡೂರಾವ್

Update: 2023-01-04 14:30 GMT

ಬೆಂಗಳೂರು, ಜ. 4: ‘ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ. 8 ವರ್ಷಗಳಲ್ಲಿ 98 ಲಕ್ಷ ಕೋಟಿ ರೂ.ಸಾಲ ಮಾಡಿದ್ದೇ ಮೋದಿ ಸಾಧನೆ. ಯುಪಿಎ ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ರೂ.ಇತ್ತು. ಆದರೆ ಮೋದಿ ಕೇವಲ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿ ರೂ.ಗೆ ಏರಿಸಿದ್ದಾರೆ. ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ?’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸಾಲ ಮಾಡಿ ತುಪ್ಪ ತಿನ್ನುವಂತೆ ಮೋದಿ ಆಡಳಿತದಲ್ಲಿ ಗೊತ್ತು ಗುರಿಯಿಲ್ಲದೆ ಸಾಲ ಮಾಡಲಾಗಿದೆ. ಆದರೆ, ಈ ಸಾಲದಲ್ಲಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆ? ದೇಶದ ಜಿಡಿಪಿ ಕುಸಿದಿದೆ. ಅಭಿವೃದ್ಧಿ ಶೂನ್ಯವಾಗಿದೆ. ಹಾಗಾದರೆ ಆ ಸಾಲದ ಹಣ ಎಲ್ಲಿಗೆ ಖರ್ಚಾಗುತ್ತಿದೆ. ಪಿಎಂ ಕೇರ್ಸ್‍ನಂತೆ ಯಾವುದಾದರೂ ಉಂಡೆನಾಮದ ಸ್ಕೀಮ್‍ಗೆ ಹಣ ಬಳಕೆಯಾಗುತ್ತಿದೆಯೆ?’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮನ್‍ಮೋಹನ್ ಸಿಂಗ್ ಸರಕಾರವಿದ್ದಾಗ ಜನರಿಗೆ ಅನಿಲ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತಿಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು. ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ರೂ.ದಾಟಿರಲಿಲ್ಲ. ಈ ಸರಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.

‘ಮೋದಿಯವರು ಕಾಂಗ್ರೆಸ್ ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು ಬಿಜೆಪಿ ಭಕ್ತರು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ವಾಸ್ತವವಾಗಿ 2014ರ ವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತವೇ 76 ಲಕ್ಷ ಕೋಟಿ ರೂ., ಆದರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ರೂ.ಹೆಚ್ಚವರಿ ಸಾಲ ಮಾಡಿದ್ದಾರೆ. ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಆಡಳಿತದಲ್ಲಿ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ ಎಂಬುದಕ್ಕೆ ಈ ಸರಕಾರ ಮಾಡಿರುವ ಸಾಲದ ಪ್ರಮಾಣವೇ ಸಾಕ್ಷಿ. ಮೋದಿಯವರು ಮಾಡಿರುವ ಸಾಲದ ಎಫೆಕ್ಟ್ ಹೇಗಿದೆಯೆಂದರೆ, ಅಸಲು ಹೋಗಲಿ, ಬಡ್ಡಿ ಕಟ್ಟಲು ಸಾಧ್ಯವಿಲ್ಲದಷ್ಟು ವಿಪರೀತವಾಗಿದೆ. ಇದು ದೇಶ ದಿವಾಳಿಯಾಗುತ್ತಿರುವ ಪ್ರಾಥಮಿಕ ಲಕ್ಷಣ. ಇನ್ನಾದರೂ ಬಿಜೆಪಿ ಭಕ್ತರು ಮೋದಿ ಭ್ರಮೆಯಿಂದ ಹೊರಬರಲಿ’ ಎಂದು ಅವರು ಸಲಹೆ ನೀಡಿದ್ದಾರೆ.

Similar News