ಸಿಎಂಗೆ ಧಮ್ಮು-ತಾಕತ್ ಇದ್ದರೆ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲಿ: ಸಿದ್ದರಾಮಯ್ಯ

Update: 2023-01-04 12:24 GMT

ಬೆಂಗಳೂರು, ಜ. 4: ‘175 ಪಿಎಫ್‍ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ಕಾಂಗ್ರೆಸ್ ಸರಕಾರ ವಾಪಸು ಪಡೆದಿದೆ ಎಂದು ಬೊಗಳೆ ಬಿಡುತ್ತಿರುವ ಬಿಜೆಪಿ ನಾಯಕರೇ, ನಿಮಗೆ ಧಮ್ಮು-ತಾಕತ್ ಇದ್ದರೆ ಆರು ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿಬಿಡಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಅವರು, 2022ರ ಜೂನ್ 13ರಂದು ಒಳಾಡಳಿತ ಇಲಾಖೆಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ‘ಹತ್ತು ವರ್ಷಗಳಲ್ಲಿ ಕೋಮು ಸಂಬಂಧಿತ ವಿಷಯವಾಗಿ ದಾಖಲಾದ ಪ್ರಕರಣಗಳೆಷ್ಟು? ಪ್ರಕರಣಗಳ ಸ್ಥಿತಿ ವಿವರ ನೀಡಿ. ರಾಜ್ಯದಲ್ಲಿ 10 ವರ್ಷಗಳಿಂದ ಈಚೆಗೆ ಸಿಬಿಐಗೆ ನೀಡಿದ ಪ್ರಕರಣಗಳು ಯಾವುವು? ಅವುಗಳ ಪ್ರಸ್ತುತ ಸ್ಥಿತಿಗತಿಗಳೇನು?’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯದಲ್ಲಿ 10 ವರ್ಷಗಳಿಂದೀಚೆಗೆ ನ್ಯಾಯಾಂಗ ತನಿಖೆ ಅಥವಾ ಇನ್ನಿತರೆ ತನಿಖಾ ಸಂಸ್ಥೆಗಳಿಗೆ ವಹಿಸಿರುವ ಪ್ರಕರಣಗಳಷ್ಟು? ಅವುಗಳ ಪ್ರಸ್ತುತ ಪರಿಸ್ಥಿತಿಯೇನು?, ರಾಜ್ಯದಲ್ಲಿ ಪಿಎಫ್‍ಐ, ಎಸ್‍ಡಿಪಿಐ, ಬಜರಂಗ ದಳ, ಶ್ರೀರಾಮಸೇನೆ ಅಥವಾ ಇನ್ನಿತರ ಸಂಘಟನೆಗಳ ಕಾರ್ಯಕರ್ತರ ಮೇಲೆ 15 ವರ್ಷಗಳಲ್ಲಿ ದಾಖಲಾದ ಪ್ರಕರಣಗಳಷ್ಟು? ಅವುಗಳ ಪ್ರಸ್ತುತ ಪರಿಸ್ಥಿತಿ ಏನು? ಮೇಲಿನ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರ, ಮುಖಂಡರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂಪಡೆದಿದೆಯೆ? ಹಿಂಪಡೆದಿದ್ದರೆ ಯಾವ ದಿನಾಂಕದಲ್ಲಿ ಹಿಂಪಡೆಯಲಾಗಿದೆ? ಹಿಂಪಡೆಯಲು ಕಾರಣಗಳೇನು? ವಿವರವಾದ ಮಾಹಿತಿಯನ್ನು ನೀಡಬೇಕು ಎಂದು ಸಿದ್ಧರಾಮಯ್ಯ ಬರೆದ ಪತ್ರವನ್ನು ಟ್ವಿಟರ್ ನಲ್ಲಿ ಮತ್ತೊಮ್ಮೆ ಪ್ರಕಟಿಸಿ ಪ್ರಶ್ನಿಸಿದ್ದಾರೆ.

Similar News