BWSSB ನೀರಿನ ಬಿಲ್ ಹಣ ದುರ್ಬಳಕೆ: 13 ಅಧಿಕಾರಿಗಳ ಅಮಾನತು

Update: 2023-01-04 13:04 GMT

ಬೆಂಗಳೂರು, ಜ. 4: ಗ್ರಾಹಕರಿಂದ ಸಂಗ್ರಹಿಸಿದ ಸುಮಾರು 1.50ಕೋಟಿ ರೂ.ನೀರಿನ ಶುಲ್ಕವನ್ನು (ಬಿಲ್)ದುರ್ಬಳಕೆ ಮಾಡಿಕೊಂಡ ಸಂಬಂಧ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಗಳು (ಇ.ಇ) ಸೇರಿದಂತೆ 13 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಜಲಮಂಡಳಿ ಅಧಿಕಾರಿಗಳು ಹಾಗೂ ನವೋದಯ ಸರ್ವೀಸ್ ಏಜೆನ್ಸಿ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು ಶಾಮೀಲಾಗಿ ಅಕ್ರಮ ಎಸಗಿದ್ದರು. ಕೊರೋನ ಮತ್ತು ಲಾಕ್‍ಡೌನ್ ಸಂದರ್ಭದಲ್ಲಿ ನಗದು ರೂಪದಲ್ಲಿ ಸಂಗ್ರಹಿಸಿದ್ದ ನೀರಿನ ಶುಲ್ಕವನ್ನು ಅಧಿಕಾರಿಗಳು ಮತ್ತು ಏಜೆನ್ಸಿ ಪ್ರತಿನಿಧಿಗಳು ಜಲಮಂಡಳಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದರು. ಆದರೆ, ಜಲಮಂಡಳಿ ಬ್ಯಾಂಕ್ ಖಾತೆಗೆ ಬಿಲ್ ಪಾವತಿಸಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿ ವಂಚಿಸಿದ್ದರು. 

ಇತ್ತೀಚೆಗೆ ಜಲಮಂಡಳಿಯ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿತ್ತು. ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಕ್ರಮದಲ್ಲಿ ಭಾಗಿಯಾಗಿರುವ ಕಾರ್ಯಪಾಲಕ ಇಂಜಿನಿಯರ್‍ಗಳಾದ ಭರತ್ ಕುಮಾರ್ ಜಿ.ಎಸ್., ಆರ್.ಶ್ರೀನಿವಾಸ್, ಸ್ನೇಹಾ ಬಿ. ನಾಗೇಂದ್ರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‍ಗಳಾದ ಸಚಿನ್ ಪಾಟೀಲ್, ವಿಶ್ವನಾಥ್.ಕೆ, ಕಂದಾಯ ವ್ಯವಸ್ಥಾಪಕರಾದ ಭೀಮಾಶಂಕರ್, ಸಿ.ನಾಗರಾಜು, ಪರ್ಸನಲ್ ಮ್ಯಾನೇಜರ್ ಯೋಗೇಶ್, ರಾಮಪ್ಪ ಮಡಿವಾಳರ, ಸಿ.ಸೋಮಶೇಖರ್, ಸಹಾಯಕರು, ಹಿರಿಯ ಸಹಾಯಕಿ ಗೀತಾ, ಕಂದಾಯ ವ್ಯವಸ್ಥಾಪಕರು ಎನ್.ರುದ್ರೇಶ್, ಕಂದಾಯ ಶಾಖೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಡಬ್ಲ್ಯುಎಸ್‍ಎಸ್‍ಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನುವಲ್ ಕೇಸ್ ಕೌಂಟರ್ ಮೂಲಕ ಸಂಗ್ರಹವಾಗಿರುವ ನೀರಿನ ಕಂದಾಯವು ಮಂಡಳಿಯ ಖಾತೆಗೆ ಜಮೆಯಾಗಿರುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲು ಹಾಗೂ ಹೊರಗುತ್ತಿಗೆ ನೌಕರರಿಂದ ದುರ್ಬಳಕೆಯಾದ ಮೊತ್ತವನ್ನು ಸಮಗ್ರವಾಗಿ ಗುರುತಿಸಲು ಮಂಡಳಿಯ ಸಹಾಯಕ ನಿಯಂತ್ರಕರು(ಲೆಕ್ಕ)ರವರ ನೇತೃತ್ವದಲ್ಲಿ ಮೂರು ಆಡಿಟ್ ತಂಡಗಳನ್ನು ರಚಿಸಲಾಗಿತ್ತು.

ಈ ಕೆಲಸದಲ್ಲಿ ಲೋಪ ಆಗಿರುವುದರಿಂದ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಮಂಡಳಿಯ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ನಡಾವಳಿಯ ವಿವರದಲ್ಲಿ ತಿಳಿಸಲಾಗಿದೆ.

Similar News