ಸ್ಯಾಂಟ್ರೋ ರವಿ ಜತೆ ಬಿಜೆಪಿ ಸಚಿವರ ಸಂಪರ್ಕ: ಎಚ್.ಡಿ.ಕುಮಾರಸ್ವಾಮಿ ಆರೋಪ

''ಬಾಂಬೆಗೆ ಹೋದ ಶಾಸಕರಿಗೆ ಮೋಜು, ಮಸ್ತಿ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದು ಯಾರು?'' ► ಉನ್ನತ ಮಟ್ಟದ ತನಿಖೆಗೆ ಮಾಜಿ ಸಿಎಂ ಆಗ್ರಹ

Update: 2023-01-04 14:02 GMT

ಬೆಂಗಳೂರು, ಜ. 4: ‘2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು? ಮುಂಬೈಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದವರು ಯಾರು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಬುಧವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಪೊಲೀಸರು ಎಫ್‍ಐಆರ್ ದಾಖಲು ಮಾಡಿರುವ ಸ್ಯಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? ಪ್ರಶ್ನಿಸಿದರು.

''ಸಿಎಂ ಧಮ್ಮು ತಾಕತ್ತು ತೋರಿಸಲಿ'': ಸದಾ ಧಮ್ಮು ತಾಕತ್ತು ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಯಾಂಟ್ರೋ ರವಿ ಮತ್ತು ತಮ್ಮ ಸಂಪುಟದ ಸಚಿವರ ನಡುವೆ ಇರುವ ಸಂಬಂಧದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ಅವರು ಸವಾಲು ಹಾಕಿದರು.

ಸ್ಯಾಂಟ್ರೋ ರವಿ ಯಾರು? ಈ ಸರಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕ ಇದೆ. ಈತನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿಡಿ ಎಂದು ಯಾರಿಗೆ ಸೂಚನೆ ಕೊಟ್ಟಿದ್ದೀರಿ? ಈ ವ್ಯಕ್ತಿ ಮೇಲೆ ಎಷ್ಟು ಕೇಸ್ ಗಳು ಇವೆ? ಕಳೆದ ತಿಂಗಳವರೆಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? ಅದಕ್ಕೆ ಯಾರು ಶಿಫಾರಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ದೂರು ಕೊಟ್ಟಿದ್ದಾರೆ. ಇಂಥವನ ಹೆಗಲ ಮೇಲೆ ಕೇಸರಿ ಟವೆಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ನಮ್ಮ ಮೇಲೆ ಟ್ರೋಲ್ ಮಾಡುವ ಬಿಜೆಪಿ ಸೋಷಿಯಲ್ ಮೀಡಿಯಾವರು, ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಅರವಿಂದ ಲಿಂಬಾವಳಿ ಆಪ್ತ ಯಾರು?: ಪ್ರದೀಪ್ ಎಂಬ ವ್ಯಕ್ತಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಗೋಪಿ ಸಂಬಂಧ ಏನು? ಎಂದು ಪ್ರಶ್ನಿಸಿದರು.

ನನಗಿರುವ ಮಾಹಿತಿ ಪ್ರಕಾರ ಗೋಪಿ ಮುಖಾಂತರ 50-60 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಮುಖ್ಯವಾಗಿ ಬಿಲ್ಡರುಗಳಿಂದ ಹಣ ಕೀಳಲಾಗಿದೆ. ಈ ಕಾರಣಕ್ಕೆ ಲಿಂಬಾವಳಿ ಸಚಿವ ಸ್ಥಾನ ಕಳೆದುಕೊಂಡರಾ?. ಬಿಲ್ದರುಗಳನ್ನು ದರ್ಜೇವಾರು ವಿಭಜಿಸಿ ಹಣ ವಸೂಲಿ ಮಾಡುತ್ತಿದ್ದರಲ್ಲ, ಆ ಹಣವನ್ನು ಸಂಗ್ರಹ ಮಾಡಿದವರು ಯಾರು? ಯಾವ ಅಪಾರ್ಟ್ ಮೆಂಟ್ ನಲ್ಲಿ ಈ ವ್ಯವಹಾರ ನಡೆಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Similar News