ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಾಗಲಿ

Update: 2023-01-05 05:39 GMT

ಐತಿಹಾಸಿಕ ಸ್ಮಾರಕಗಳು ದೇಶದ ಅಮೂಲ್ಯ ಸ್ವತ್ತಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಆದರೆ ಹೆಚ್ಚುತ್ತಿರುವ ನಗರೀಕರಣ ಪ್ರಕ್ರಿಯೆಯಿಂದಾಗಿ ದೇಶದಲ್ಲಿರುವ ಸ್ಮಾರಕಗಳು ಹಾನಿಗೊಳಾಗಾಗುತ್ತಿವೆ. ಹೀಗಾಗಿ ಅವುಗಳ ಸಂರಕ್ಷಣೆಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ.

ಸಾಹಿತ್ಯ ಮತ್ತು ಚರಿತ್ರೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಎರಡನ್ನೂ ಪರಿಪೂರ್ಣವಾಗಿ ಅರ್ಥೈಸಿಕೊಂಡಾಗ ಮಾತ್ರ ಪ್ರಾಚೀನ ಪರಂಪರೆ, ಸಂಸ್ಕೃತಿಯನ್ನು ಉಳಿಸಬಹುದು. ಪ್ರಾಚೀನ ಕಾಲದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ಮಿಸಿದ ಹಲವು ಸ್ಮಾರಕಗಳು, ಗುಡಿ-ಕೆರೆ-ಕಟ್ಟೆಗಳು, ಮಸೀದಿಗಳು ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದ್ದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.

ಹೊಸತನದ ಆವೇಶದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ ಅವಶೇಷಗಳನ್ನು ನಾಶವಾಗಲು ಬಿಡಬಾರದು. ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ, ಪುರಾತನ ಜ್ಞಾನದ ಪ್ರಜ್ಞೆ ಪ್ರತಿಯೊಬ್ಬರಿಗೂ ಇರಬೇಕು ಎಂಬ ಉದ್ದೇಶದಿಂದ ಪ್ರಾಚೀನ ಸ್ಮಾರಕಗಳು ಉಳಿಸಲು ಸರಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ ಭಾರತೀಯ ಸರಕಾರಿ ಸಂಸ್ಥೆಯಾಗಿದ್ದು, ಇದು ಪುರಾತತ್ವ ಸಂಶೋಧನೆ ಮತ್ತು ದೇಶದಲ್ಲಿನ ಸಾಂಸ್ಕೃತಿಕ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಕಾರಣವಾಗಿದೆ.

ದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ಸಂರಕ್ಷಿತ 3,695 ಸ್ಮಾರಕಗಳ ಪೈಕಿ ಅತಿಯಾದ ನಗರೀಕರಣ, ಜಲಾಶಯಗಳಲ್ಲಿ ಮುಳುಗಡೆ ಸೇರಿದಂತೆ ಅನೇಕ ಸಮಸ್ಯೆಗಳ ಪರಿಣಾಮ ರಾಷ್ಟ್ರೀಯ ಪ್ರಾಮುಖ್ಯತೆಯ ಸುಮಾರು 50 ಸ್ಮಾರಕಗಳು ಕಣ್ಮರೆಯಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಪತ್ತೆ ಹಚ್ಚಲಾಗುತ್ತಿಲ್ಲ ಎಂದು ಸಂಸತ್‌ಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ನೀಡಿರುವ ವರದಿಯಲ್ಲಿ ತಿಳಿದು ಬಂದಿದೆ ಮತ್ತು ಇದು ತೀವ್ರ ಕಳವಳಕಾರಿ ವಿಷಯ ಎಂದು ವರದಿಯಲ್ಲಿ ತಿಳಿಸಿದೆ. ದೇಶದಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ 50 ಸ್ಮಾರಕಗಳು ಕಣ್ಮರೆಯಾಗಿದ್ದು ಅತ್ಯಂತ ನೋವಿನ ವಿಷಯ ಒಂದೆಡೆಯಾದರೆ ಮತ್ತೊಂದೆಡೆ ದೇಶದಲ್ಲಿರುವ ಇನ್ನು ಹಲವಾರು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಸ್ಮಾರಕಗಳು ನಿರ್ಲಕ್ಷ್ಯವಾಗುತ್ತಿವೆ. ಅವುಗಳನ್ನು ರಕ್ಷಣೆ ಮಾಡುವಲ್ಲಿ ಕೂಡಲೇ ಸರಕಾರ ಮುಂದಾಗಬೇಕು.

ಬಾದಾಮಿ ಚಾಲುಕ್ಯರ ಕಾಲದ ಪ್ರಮುಖ ನಗರವಾಗಿರುವ ದೇವಾಲಯಗಳ ವಾಸ್ತುಶೈಲಿಯ ತೊಟ್ಟಿಲು ಎಂದೇ ಖ್ಯಾತಿ ಪಡೆದ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಐಹೊಳೆಯಲ್ಲಿ 125ಕ್ಕೂ ಹೆಚ್ಚು ದೇಗುಲಗಳಿದ್ದು ಅವುಗಳನ್ನು ಪುರಾತತ್ವ ಇಲಾಖೆ 22 ಗುಂಪುಗಳಾಗಿ ವಿಂಗಡಿಸಿದ್ದನ್ನು ಇಲ್ಲಿಯ ಪರಿಸರದಲ್ಲಿ ಕಾಣಬಹುದು. ಆದರೆ ಜನನಿಬಿಡ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕಗಳು ಇದ್ದ ಕಾರಣ ಅವುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಮತ್ತು ನಾಶವಾಗುವ ಸಾಧ್ಯತೆಗಳು ಇವೆ. ಆದ್ದರಿಂದ ಐಹೊಳೆಯ ಸ್ಮಾರಕಗಳ ರಕ್ಷಣೆಗಾಗಿ ಸರಕಾರ ಗ್ರಾಮವನ್ನು ಸ್ಥಳಾಂತರ ಮಾಡಬೇಕು.
 
ಅಲ್ಲದೆ ಐಹೊಳೆಯಂತೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೇಶದ ಎಲ್ಲ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಲು ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ದೇಶದಲ್ಲಿ ಕಣ್ಮರೆಯಾಗಿರುವ 50 ಸ್ಮಾರಕಗಳನ್ನು ಪತ್ತೆ ಹಚ್ಚಬೇಕು ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಾರಕಗಳನ್ನು ಸಂರಕ್ಷಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ಮಾರಕಗಳು ಉಳಿಯಲು ಸಾಧ್ಯ. ಈ ಬಗ್ಗೆ ಸರಕಾರ, ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನೂ ದೇಶದ ಸ್ಮಾರಕ ರಕ್ಷಣೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ದೇಶದ ಪ್ರಾಚೀನ ಸ್ಮಾರಕಗಳನ್ನು ಕೇವಲ ಚಿತ್ರದಲ್ಲಿ ನೋಡುವಂತಾದೀತು.

Similar News