ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯ ಸೇರ್ಪಡೆಗೆ ಒತ್ತಾಯ
ಬೆಂಗಳೂರು, ಜ.5: ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ)ಪಟ್ಟಿಗೆ ಕುಂಚಿಟಿಗ ಸಮುದಾಯವನ್ನು ಸೇರಿಸಬೇಕು ಎಂದು ಕುಂಚಿಟಿಗರ ಮಹಾಸಭಾದ ಅಧ್ಯಕ್ಷ ಮುರಳೀಧರ ಹಾಲಪ್ಪ ಆಗ್ರಹಿಸಿದ್ದಾರೆ.
ಗುರುವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರಕಾರವು ಹೈಕೋರ್ಟ್ ಆದೇಶದಂತೆ ಹಾಗೂ ಕುಲಶಾಸ್ತ್ರೀಯ ಅಧ್ಯಯನದ ಶಿಫಾರಸ್ಸಿನಂತೆ ಕುಂಚಿಟಿಗ ಸಮುದಾಯವನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಕಡತವನ್ನು ಸಲ್ಲಿಸಿದೆ. ಆದರೆ ಕೇಂದ್ರ ಸರಕಾರವು ಇದನ್ನು ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಂಚಿಟಿಗ ಸಮುದಾಯವು ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಸಮುದಾಯವು ಹಿಂದುಳಿದ ವರ್ಗಗಳ 3ಎ ಪಟ್ಟಿಗೆ ಸೇರಿದೆ. ಹಾಗಾಗಿ ಕೇಂದ್ರದಲ್ಲಿಯೂ ಸಮುದಾಯವನ್ನು ಹಿಂದುಳಿದ ಪಟ್ಟಿಗೆ ಸೇರಿಸಬೇಕು ಎಂದರು. ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ಕುಂಚಿಟಿಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.