ಕ್ರಶರ್ ಮಾಲಕರ ಮುಷ್ಕರ: ಸಮಸ್ಯೆ ಪರಿಹಾರಕ್ಕೆ ಒತ್ತಾಯ
Update: 2023-01-05 23:17 IST
ಬೆಂಗಳೂರು, ಜ. 5: ಜನಸಾಮಾನ್ಯರು ಮತ್ತು ಕ್ರಶರ್ ಉದ್ಯಮದ ಕಾರ್ಮಿಕರು ತೊಂದರೆಗೆ ಸಿಲುಕಿದ್ದು, ಕ್ರಶರ್ ಮಾಲಕರ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೂಡಲೇ ಸ್ಪಂದಿಸಿ, ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಡಿಸೇಲ್ ಸೇರಿದಂತೆ ಅಗತ್ಯ ಬೆಲೆಗಳ ಏರಿಕೆಯಿಂದ ಉದ್ಯಮ ವಲಯ ಕಂಗಾಲಾಗಿದೆ. ಈಗ ಡ್ರೋನ್ ಸರ್ವೇ ವರದಿಯಾಧರಿಸಿ ರಾಜಸ್ವ ಧನವನ್ನು 5 ಪಟ್ಟು ಏರಿಕೆ ಮಾಡಿರುವುದು ಕ್ರಶರ್ ಉದ್ಯಮ ನಂಬಿದವರ ಮೇಲೆ ಮಾರಣಾಂತಿಕ ಪೆಟ್ಟು ಕೊಟ್ಟಂತಾಗುತ್ತದೆ. ಇದರಿಂದಾಗಿ ಕಟ್ಟಡ ನಿರ್ಮಾಣದ ಬೆಲೆ ಹೆಚ್ಚಳವಾಗಿ ಸಾರ್ವಜನಿಕರು ತೊಂದರೆಗೀಡಾಗುತ್ತಾರೆ ಎಂದು ಗಮನ ಸೆಳೆದಿದ್ದಾರೆ.