×
Ad

ಬೆಂಗಳೂರು | ಸ್ನಾನ ಮಾಡದೇ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹಲ್ಲೆ: ಮಹಿಳೆ ಆರೋಪ

ದೂರು-ಪ್ರತಿ ದೂರು ದಾಖಲು

Update: 2023-01-06 13:50 IST

ಬೆಂಗಳೂರು, ಜ.6: ನಗರದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯೋರ್ವಳ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. 

ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಮಹಿಳೆಯನ್ನು ಎಳೆದು ಗುಡಿಯೊಳಗಿನಿಂದ ಹೊರ ಹಾಕುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.  

ಘಟನೆ ಬಗ್ಗೆ ಪೊಲೀಸ್ ದೂರು ನೀಡಿರುವ ಮಹಿಳೆ,  'ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮುನಿಕೃಷ್ಣಪ್ಪ ಎಂಬವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಸ್ನಾನ ಮಾಡದೇ, ಶುದ್ಧಿ ಇಲ್ಲದೇ ದೇವಸ್ಥಾನಕ್ಕೆ ಬರುತ್ತೀರಾ. ನಿನಗೆ ಇಲ್ಲಿ ದರ್ಶನ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ನೀನು ಕಪ್ಪಾಗಿ, ವಿಚಿತ್ರವಾಗಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ' ಎಂದು ದೂರಿನಲ್ಲಿ ಆಪಾದಿಸಿದ್ದಾರೆ. 

ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತಿ ದೂರು ನೀಡಿರುವ ಮುನಿಕೃಷ್ಣಪ್ಪ, 'ದೇವಸ್ಥಾನಕ್ಕೆ ಬಂದಿದ್ದ ಮಹಿಳೆ, ತನಗೆ ಮೈಮೇಲೆ ದೇವರು ಬರುತ್ತೆ. ವೆಂಕಟೇಶ್ವರ ನನ್ನ ಪತಿ. ಗರ್ಭಗುಡಿಯಲ್ಲಿ ನಾನು ವೆಂಕಟೇಶನ ಪಕ್ಕ ಕೂರಬೇಕು ಎಂದು ಪಟ್ಟು ಹಿಡಿದಿದ್ದಕ್ಕೆ  ವಿರೋಧ ವ್ಯಕ್ತಪಡಿಸಿದ್ದೇನೆ. ಎಷ್ಟೇ ಮನವಿ ಮಾಡಿಕೊಂಡರೂ ಹೋಗದೇ ಇದ್ದಾಗ ಎಳೆದೊಯ್ದು ಹೊರಕಳುಹಿಸಲಾಗಿದೆ‌' ಎಂದು ದೂರಿನಲ್ಲಿ ಉಲ್ಲೇಖಿಸದ್ದಾರೆ. 

Similar News