ಜ.8ಕ್ಕೆ ಬೆಂಗಳೂರಿನಲ್ಲಿ ‘ಜನಸಾಹಿತ್ಯ ಸಮ್ಮೇಳನ’: ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟನೆ
ಉದ್ಘಾಟನಾ ಗೋಷ್ಠಿಗೆ ಸಾಹಿತಿ ಬಾನು ಮುಷ್ತಾಕ್ ಅಧ್ಯಕ್ಷತೆ
ಬೆಂಗಳೂರು, ಜ. 6: ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರಂಪರೆ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಕಡೆಗಣನೆ ಖಂಡಿಸಿ, ಪರ್ಯಾಯವಾಗಿ ಜ.8ರ ರವಿವಾರ ಬೆಳಗ್ಗೆ 9ಗಂಟೆಯಿಂದ ಇಲ್ಲಿನ ಕೆ.ಆರ್.ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ ಏರ್ಪಡಿಸಲಾಗಿದೆ.
ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ ಸಭಾಂಗಣದಲ್ಲಿ ಬೆಳಗ್ಗೆ 9ಗಂಟೆಗೆ ಕನ್ನಡ ಧ್ವಜಾರೋಹಣವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಬಿ.ಎನ್.ಜಗದೀಶ್ ನೆರವೇರಿಸಲಿದ್ದಾರೆ.
ಬಂಡಾಯದ ಗೆರೆಗಳು: ಬೆಳಗ್ಗೆ 9:30ಕ್ಕೆ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ ಗಳ ಪ್ರದರ್ಶನ ಉದ್ಘಾಟನೆ ಕಲಾವಿದ ರಘುನಂದನ ಮಾಡಲಿದ್ದು, ಪಿ.ಮಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಪಂಜುಗಂಗೊಳ್ಳಿ, ಬಾದಲ್ ನಂಜುಂಡಸ್ವಾಮಿ, ಚೇತನ್ ಪುತ್ತೂರು, ರೂಮಿ ಹರೀಶ್ ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ ಸೇರಿದಂತೆ ಇನ್ನಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ‘ಚಂಪಾ ವೇದಿಕೆ’ಯಲ್ಲಿ ಜನಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ನೆರವೇರಿಸಲಿದ್ದು, ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಬಾನು ಮುಷ್ತಾಕ್ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಜನ್ನಿ(ಜನಾರ್ಧನ್), ಅಗ್ನಿಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.30ರಿಂದ 1:30ಕ್ಕೆ ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ’ ವಿಚಾರಗೋಷ್ಠಿ ನಡೆಯಲಿದ್ದು, ಡಾ. ಮಹಮ್ಮದ್ ಮುಸ್ತಾಫಾ ವಿಷಯ ಮಂಡನೆ ಮಾಡಲಿದ್ದಾರೆ. ‘ಕನ್ನಡ ನಾಡು ನುಡಿ-ಟಿಪ್ಪು ಕೊಡುಗೆಗಳು’ ಕುರಿತು ಪತ್ರಕರ್ತ ಟಿ.ಗುರುರಾಜ್ ಮಾತನಾಡಲಿದ್ದಾರೆ. ಲಿಂಗದೇವರು ಹಳೆಮನೆ ಸಂಪಾದಕತ್ವದ ‘ಧೀರ ಟಿಪ್ಪು ಲಾವಣಿಗಳು' ಮತ್ತು ಟಿ.ಗುರುರಾಜ್ ಬರೆದಿರುವ ‘ನಮ್ಮ ಟಿಪ್ಪು-ವದಂತಿ ಮತ್ತು ಸತ್ಯ ಸಂಗತಿ' ಪುಸ್ತಕಗಳ ಬಿಡುಗಡೆ ಮಾಡಲಿದ್ದು, ನಾ.ದಿವಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ‘ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ’ ವಿಷಯ ಮಂಡನೆ’ಯನ್ನು ಡಾ. ರಂಗನಾಥ ಕಂಟನಕುಂಟೆ ಮಾಡಲಿದ್ದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ವಹಿಸಲಿದ್ದು, ದೀಪದ ಮಲ್ಲಿ, ದಾದಪೀರ್ ಜೈಮನ್, ಚಾಂದ್ ಪಾಷಾ, ಪ್ರಕಾಶ್ ಮಂಟೇದಾ, ವೀರಪ್ಪ, ಟೀನಾ ಶಶಿಕಾಂತ್, ಸಿರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಸಂಜೆ ‘ಸೌಹಾರ್ದತೆ ಮತ್ತು ಕನ್ನಡತನ’ ವಿಷಯದ ಕುರಿತು ರಾಜೇಂದ್ರ ಚೆನ್ನಿ ವಿಚಾರ ಮಂಡನೆ ಮಾಡಲಿದ್ದು, ‘ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ: ಸಾಹಿತ್ಯ ಲೋಕದ ಜವಾಬ್ದಾರಿಗಳು’ ಕುರಿತು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಚಿಂತಕ ಮುನೀರ್ ಕಾಟಿಪಳ್ಳ ವಿಚಾರ ಮಂಡನೆ ಮಾಡಲಿದ್ದಾರೆ.
‘ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು’ ವಿಷಯದ ಕುರಿತು ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ವಿಚಾರ ಮಂಡಿಸಲಿದ್ದಾರೆ.
ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಡಾ.ಜಿ.ರಾಮಕೃಷ್ಣ ವಹಿಸಲಿದ್ದು, ಸಮಾರೋಪ ಭಾಷಣವನ್ನು ಡಾ.ಕೆ.ಮರುಳಸಿದ್ದಪ್ಪ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು.ಸರಸ್ವತಿ, ಯು.ಟಿ.ಫರ್ಝಾನ, ವಸಂತರಾಜ್, ಅನಂತ್ ನಾಯ್ಕ್, ರವಿಕುಮಾರ್ ಟೆಲೆಕ್ಸ್ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ‘ಬೀದಿಗೆ ಬರಲಿ ಕಲೆ-ಸಾಹಿತ್ಯ’ ಸಮುದಾಯ ಬೆಂಗಳೂರು ಬೀದಿ ನಾಟಕ ಹಾಗೂ ಪ್ರಮುಖ ಪ್ರಕಾಶನ ಸಂಸ್ಥೆಗಳಿಂದ ಬಹುಮುಖ್ಯ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ.