ಸ್ಲಂ ಜನರ ನ್ಯಾಯಸಮ್ಮತ ಬೇಡಿಕೆಯನ್ನು ಸರಕಾರ ಈಡೇರಿಸಲಿ: ನ್ಯಾ.ನಾಗಮೋಹನ ದಾಸ್
ಬೆಂಗಳೂರು, ಜ.6: ಕೊಳಗೇರಿ ಪ್ರದೇಶದ ನಿವಾಸಿಗಳು ಸರಕಾರದ ಮುಂದೆ ಇಡುತ್ತಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್ ಸಲಹೆ ಮಾಡಿದ್ದಾರೆ.
ಶುಕ್ರವಾರ ನಗರದ ಎಸ್‍ಸಿಎಂ ಹೌಸ್‍ನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಸಾವಿತ್ರಿಬಾಪುಲೆ 192ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ‘ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನ’ ಕುರಿತ ರಾಜ್ಯ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಪರಿಶಿಷ್ಟ ಸಮುದಾಯಗಳ ಮೀಸಲಾತಿ ಪರಿಷ್ಕರಣೆ ಮಾಡಲು ಆಯೋಗವನ್ನು ರಚಿಸಿ, ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿತ್ತು. ಅಧ್ಯಯನ ಮಾಡುವಾಗ ನಾನು ಸ್ಲಂ ನಿವಾಸಿಗಳ, ಪೌರಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ಆಯೋಗದ ವರದಿಯಲ್ಲೂ ಅದನ್ನು ಉಲ್ಲೇಖಿಸಿದ್ದೇನೆ. ನಗರದಲ್ಲಿ ಶೇ.48ರಷ್ಟು ಜನ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಕೊಳಗೇರಿ ಜನರಿಗೆ ಭೂಮಿ ಒಡೆತನ ಜನಸಂಖ್ಯೆಗೆ ಅನುಗುಣವಾಗಿ ಪಾಲು ನೀಡಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಏಳು ದಶಕಗಳಿಂದ ಮೀಸಲಾತಿ ಇದೆ. ಆದರೆ ಮೀಸಲಾತಿ ಕೆಲವು ಜನ ಸಮುದಾಯಗಳಿಗೆ, ಅದರಲ್ಲೂ ಕೊಳಗೇರಿ ನಿವಾಸಿಗಳಿಗೆ, ಆದಿವಾಸಿಗಳಿಗೆ ಸಿಗಲೇ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸಿದಾಗ ಆದಿವಾಸಿಗಳು, ಸಫಾಯಿ ಕರ್ಮಚಾರಿಗಳು, ಸ್ಲಂ ಜನರು, ಅಲೆಮಾರಿಗಳಿಗೆ ಪ್ರಾಥಮಿಕ ಶಿಕ್ಷಣವೇ ದೊರೆತಿಲ್ಲ. ಹಾಗಾಗಿ ಅವರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆತಿಲ್ಲ ಎಂದರು.
ಸಫಾಯಿ ಕರ್ಮಚಾರಿ ಮತ್ತು ಸ್ಲಂ ನಿವಾಸಿಗಳ ಮಕ್ಕಳ ಶಿಕ್ಷಣಕ್ಕಾಗಿ ಎಸ್ಸಿಪಿ ಬಜೆಟ್‍ನಲ್ಲಿ ಶೇ.10ರಷ್ಟನ್ನು ಮೀಸಲಿಡಬೇಕು. ಆಗ ಮಾತ್ರ ಸ್ಲಂ ಜನರಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 2.54 ಲಕ್ಷ ಹುದ್ದೆಗಳು ಖಾಲಿ ಇದ್ದರೂ, ಸರಕಾರ ಈ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಮೀಸಲಾತಿಯನ್ನು ಹೆಚ್ಚಿಸಿ ಏನು ಪ್ರಯೋಜನವಾಗುತ್ತದೆ, ಸಾರ್ವಜನಿಕ ನಿಗಮಗಳನ್ನು ಖಾಸಗಿಯವರಿಗೆ ಮಾರಿ, ಹೊರಗುತ್ತಿಗೆ ಮುಖಾಂತರ ನೇಮಕಾತಿ ಮಾಡಿದರೆ ಮೀಸಲಾತಿ ಇರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸಾಮಾಜಿಕ ನ್ಯಾಯ ಎನ್ನುವುದು ಈಗ ಅಪ್ರಸ್ತುತವಾಗಿದೆ ಎಂದರು.
ಮೀಸಲಾತಿ ಗೊಂದಲ ಸೃಷ್ಟಿ: ಹಿಂದುಳಿದ ಮೀಸಲಾತಿ ಪಟ್ಟಿಯ ಪ್ರವರ್ಗ 3ಎ, 3ಬಿ ಅನ್ನು ಹಿಂದುಳಿದ ವರ್ಗಗಳ ಪ್ರವರ್ಗ 2 ‘ಸಿ’, 2 ‘ಡಿ’ ರಚನೆ ಮಾಡಿ, ಇಡೀ ಸಮಾಜದಲ್ಲಿ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ. ಸಂವಿಧಾನದ ಸಹಿಷ್ಣುತೆಯ ಬಹುತ್ವವನ್ನು ಛಿದ್ರಗೊಳಿಸಿ ದ್ವೆÉ್ವೀಷ ಮತ್ತು ಅಸೂಯೆ ಕೊಳಗೇರಿಗಳಲ್ಲಿ ಬಿತ್ತಲಾಗುತ್ತಿದೆ. ಆದುದರಿಂದ ಸ್ಲಂ ಜನರು ವರ್ತಮಾನದಲ್ಲಿ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು. ನಾವೆಲ್ಲಾ ಅನ್ಯಾಯದ ವಿರುದ್ಧ ಒಟ್ಟಿಗೆ ಧ್ವನಿ ಎತ್ತಬೇಕು ಎಂದರು.
ಅಂಕಣಕಾರ ಶಿವಸುಂದರ್, ಲೇಖಕಿ ದು.ಸರಸ್ವತಿ, ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಚಂದ್ರಮ್ಮ, ತೇಜಸ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಪೋಲೀಸ್, ಶಿಕ್ಷಣ, ಕೆಪಿಟಿಸಿಎಲ್ ಸೇರಿ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಶೇ.40ರಷ್ಟು ಕಮಿಷನ್ ಭ್ರಷ್ಟ ಸರಕಾರ ಎಂದು ವಿಪಕ್ಷಗಳು, ಆಡಳಿತ ಪಕ್ಷವನ್ನು ದೂರಿದರೆ, ಶೇ.10ರಷ್ಟು ಕಮಿಷನ್ ಪಕ್ಷ ಎಂದು ಆಡಳಿತ ಪಕ್ಷದವರು ವಿಪಕ್ಷವನ್ನು ದೂಷಿಸುತ್ತದೆ. ಹಾಗಾಗಿ ಇಲಾಖೆಗಳಲ್ಲಿ ನಡೆಯುವ ಭ್ರಷ್ಟತೆಯನ್ನು ಸ್ವತಂತ್ರ ತನಿಖೆಗೆ ವಹಿಸಿ, ಭ್ರಷ್ಟಚಾರವನ್ನು ಬಯಲು ಮಾಡುವಲ್ಲಿ ಹಿಂಜರಿಯುತ್ತಿದ್ದಾರೆ’
-ನ್ಯಾ.ಎಚ್.ಎನ್.ನಾಗಮೋಹನ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ